
ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಒಂದು ಗೆಲುವು ಬೇಕಿದೆ. ಅದಕ್ಕಾಗಿ ಅವರು ತುಂಬ ಹಂಬಲಿಸುತ್ತಿದ್ದಾರೆ. ಈ ಮೊದಲು ಅವರು ನಟಿಸಿದ ‘ಥಗ್ಸ್ ಆಫ್ ಹಿಂದುಸ್ತಾನ್’, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳು ಸೋತವು. ಈಗ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ರೀತಿಯಲ್ಲಿ ಇದು ಅವರ ಕಮ್ಬ್ಯಾಕ್ ಸಿನಿಮಾ. ಹಾಗಾಗಿ ಅಭಿಮಾನಿಗಳು ಕೂಡ ನಿರೀಕ್ಷೆ ಹೊಂದಿದ್ದಾರೆ. ಸಿನಿಮಾದ ಪ್ರಚಾರದ ಸಲುವಾಗಿ ಆಮಿರ್ ಖಾನ್ ಅವರು ಹಲವು ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಮುಂಬೈ ಬೀದಿಯಲ್ಲಿ ಅವರು ವಡಾ ಪಾವ್ ಮಾರಿದ್ದೇ ಈ ಮಾತಿಗೆ ಉದಾಹರಣೆ.
ಹೌದು, ಆಮಿರ್ ಖಾನ್ ಅವರು ಮುಂಬೈನ ಬೀದಿಯಲ್ಲಿ ನಿಂತು ವಡಾ ಪಾವ್ ಮಾರಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದು ‘ಸಿತಾರೆ ಜಮೀನ್ ಪರ್’ ಚಿತ್ರದ ಪ್ರಚಾರಕ್ಕಾಗಿ ಮಾಡಿದ್ದು ಎಂಬುದು ಸ್ಪಷ್ಟ. ಹಾಗಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ‘ಪ್ರಚಾರಕ್ಕಾಗಿ ಏನೆಲ್ಲ ಮಾಡಬೇಕಾಗುತ್ತದೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಆಮಿರ್ ಖಾನ್, ಜೆನಿಲಿಯಾ ದೇಶಮುಖ್ ಮುಂತಾದವರು ನಟಿಸಿದ್ದಾರೆ. ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಸ್ವತಃ ಆಮಿರ್ ಖಾನ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೂನ್ 20ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯದಲ್ಲಿ ಆಮಿರ್ ಖಾನ್ ಅವರು ಬ್ಯುಸಿ ಆಗಿದ್ದಾರೆ.
ಆಮಿರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಅವರಿಗೆ ಈಗ 91 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಸಿನಿಮಾದ ಶೂಟಿಂಗ್ ನೋಡಲು ಬಯಸಿದರು. ‘ಸಿತಾರೆ ಜಮೀನ್ ಪರ್’ ಚಿತ್ರದ ಶೂಟಿಂಗ್ ನೋಡಲು ಅವರು ತೆರಳಿದ್ದರು. ಆಗ ಅವರ ಮನವೊಲಿಸಿ, ಒಂದು ಶಾಟ್ನಲ್ಲಿ ನಟಿಸುವಂತೆ ಒಪ್ಪಿಸಲಾಗಿದೆ. ಆ ಕಾರಣದಿಂದಲೂ ಆಮಿರ್ ಖಾನ್ ಅವರ ಪಾಲಿಗೆ ಈ ಸಿನಿಮಾ ವಿಶೇಷವಾಗಿದೆ.
ಇದನ್ನೂ ಓದಿ: ಬರೀ ರಿಮೇಕ್ ಮಾಡ್ತೀರಿ ಎಂಬ ಟೀಕೆಗೆ ಖಡಕ್ ಉತ್ತರ ನೀಡಿದ ಆಮಿರ್ ಖಾನ್
‘ಚಾಂಪಿಯನ್ಸ್’ ಸಿನಿಮಾದ ರಿಮೇಕ್ ಆಗಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಡಿಬಂದಿದೆ. ಟ್ರೇಲರ್ ನೋಡಿದ ಅಭಿಮಾನಿಗಳಿಗೆ ಇಷ್ಟ ಆಗಿದೆ. ಚಿತ್ರದ ಬಿಡುಗಡೆಗೂ ಮುನ್ನ ಸ್ನೇಹಿತರನ್ನು ಕರೆದು ಆಮಿರ್ ಖಾನ್ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ರಣಬೀರ್ ಕಪೂರ್, ಸಚಿನ್ ತೆಂಡುಲ್ಕರ್ ಮುಂತಾದವರು ಭಾಗಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:25 am, Sun, 8 June 25