ಸೆಟ್ನಲ್ಲಿ ದಕ್ಷಿಣ ಭಾರತದವರ ಈ ನಡೆಯಿಂದ ಸೋನು ಸೂದ್ಗೆ ಆಗಿತ್ತು ಶಾಕ್
ಸೋನು ಸೂದ್ ಅವರು ಆಗತಾನೇ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದರು. ಮಧುರೈನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆಗ ನಡೆದ ಒಂದು ಘಟನೆ ನೋಡಿ ಸೋನುಗೆ ಶಾಕ್ ಆಗಿತ್ತಂತೆ.
ನಟ ಸೋನು ಸೂದ್ (Sonu Sood) ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡೂ ಕಡೆಗಳಲ್ಲಿ ಫೇಮಸ್ ಆಗಿದ್ದಾರೆ. ಕೊವಿಡ್ ಸಮಯದಲ್ಲಿ ಸಾಮಾಜಿಕ ಕೆಲಸಗಳ ಮೂಲಕ ಅವರು ಫೇಮಸ್ ಆದರು. ಅವರು ಈಗ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಸೋನು ಸೂದ್ ಅವರಿಗೆ ದಕ್ಷಿಣ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅನೇಕರು ಆರಾಧಿಸುತ್ತಾರೆ. ಈಗ ಅವರು ವಿಲನ್ ರೋಲ್ ಬಿಟ್ಟು ಹೀರೋ ಪಾತ್ರಗಳನ್ನು ಮಾತ್ರ ಮಾಡುತ್ತಿದ್ದಾರೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ (Bollywood) ಚಿತ್ರರಂಗದ ನಡುವೆ ಕೆಲಸ ಮಾಡುವ ವಿಧಾನ ತುಂಬಾನೇ ಭಿನ್ನವಾಗಿದೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ದಕ್ಷಿಣ ಭಾರತದವರು ಸೆಟ್ನಲ್ಲಿ ನಡೆದುಕೊಂಡ ರೀತಿ ಕಂಡು ಅಕ್ಷರಶಃ ಶಾಕ್ಗೆ ಒಳಗಾಗಿದ್ದರಂತೆ.
ಸೋನು ಸೂದ್ ಅವರು ಆಗತಾನೇ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದರು. ಮಧುರೈನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಮಧ್ಯಾಹ್ನ ಊಟದ ನಂತರ ತಾಂತ್ರಿಕ ವರ್ಗದ ಎಲ್ಲರೂ ನಿದ್ದೆ ಮಾಡಿದ್ದರು. ಇದನ್ನು ನೋಡಿ ಸೋನುಗೆ ಶಾಕ್ ಆಗಿತ್ತಂತೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ನನಗೆ ಶಾಕ್ ಆಯಿತು. ಒಂದು ಗಂಟೆ ಊಟದ ಬ್ರೇಕ್ ಇತ್ತು. 20-25 ನಿಮಿಷದಲ್ಲಿ ಎಲ್ಲರೂ ಊಟ ಮುಗಿಸಿದರು. ನಂತರ ಒಂದು ಮೂಲೆ ಹುಡುಕಿಕೊಂಡು ಎಲ್ಲರೂ ನಿದ್ದೆ ಮಾಡಿದರು. ನಾನು ಕುರ್ಚಿ ಮೇಲೆ ಕೂತಿದ್ದೆ. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದೆ. ಎಲ್ಲರೂ ಮಲಗಿದ್ದರು. ಯಾಕೆ ಎಲ್ಲರೂ ನಿದ್ರಿಸುತ್ತಿದ್ದಾರೆ ಎಂದು ಅಲ್ಲೇ ಇದ್ದ ಒಬ್ಬರನ್ನು ಕೇಳಿದೆ. ನಿದ್ದೆ ಬಳಿಕ ಹೊಸ ಚೈತನ್ಯ ಬರುತ್ತದೆ ಎಂದು ಅವರು ಹೇಳಿದರು. ಅದು ಅಲ್ಲಿನ ಸಂಸ್ಕೃತಿ’ ಎಂದಿದ್ದಾರೆ ಸೋನು.
ಇದನ್ನೂ ಓದಿ: Sonu Sood: ರೈಲ್ವೆ ಅಧಿಕಾರಿಗಳ ಬಳಿ ಕ್ಷಮೆ ಕೇಳಿದ ಸೋನು ಸೂದ್; ನಟ ಮಾಡಿದ ತಪ್ಪೇನು?
‘ಅಲ್ಲಿ ಸಿನಿಮಾ ಆರಂಭಿಸಿದ ದಿನವೇ ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗುತ್ತದೆ. ಯಾವಾಗ ಸಿನಿಮಾ ಶೂಟ್ ಮುಗಿಸಬೇಕು, ಯಾವಾಗ ರಿಲೀಸ್ ಮಾಡಬೇಕು ಎಂಬುದು ಅವರಿಗೆ ತಿಳಿದಿರುತ್ತದೆ. ತುಂಬಾನೇ ಆರ್ಗನೈಸ್ಡ್ ಆಗಿ ಕೆಲಸ ಮಾಡುವ ನಿರ್ದೇಶಕರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎಂದಿದ್ದಾರೆ ಅವರು.
‘ದಕ್ಷಿಣದಲ್ಲಿ ಸೂರ್ಯೋದಯದ ಕಾಲ್ಶೀಟ್ ಎಂಬ ಪರಿಕಲ್ಪನೆ ಇದೆ. ಅಂದರೆ, ಮುಂಜಾನೆ 6:30ಕ್ಕೆ ಸೂರ್ಯೋದಯ ಆಗುತ್ತದೆ ಎಂದರೆ, 5:30ಕ್ಕೆ ಶೂಟಿಂಗ್ ಆರಂಭ ಆಗುತ್ತದೆ. ಕೆಲ ಶಾಟ್ಗಳನ್ನು ಅವರು ತೆಗೆದುಕೊಳ್ಳುತ್ತಾರೆ. ಇದಾದ ಬಳಿಕವೇ ತಿಂಡಿ ತಿನ್ನುತ್ತಾರೆ. ಶೂಟ್ಗೂ ಮೊದಲು ಯಾಕೆ ತಿಂಡಿ ಕೊಡಲ್ಲ ಎಂದು ನನಗೆ ಅನಿಸುತ್ತಿತ್ತು. ಅವರಿಗೆ ಕೆಲಸ ಮುಖ್ಯ ಅನ್ನೋದು ಬಳಿಕ ಅರ್ಥವಾಯಿತು’ ಎಂದಿದ್ದಾರೆ ಸೋನು ಸೂದ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ