ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರಿಗೆ ಇರುವ ಬೇಡಿಕೆ ದೊಡ್ಡದು. ಅವರು ಇತ್ತೀಚೆಗೆ ಸಿನಿಮಾಗಳ ಬಗ್ಗೆ ಅಷ್ಟಾಗಿ ಗಮನ ನೀಡುತ್ತಿಲ್ಲ. ಹಾಗಂತ ಅವರು ಫಿಟ್ನೆಸ್ ಕಾಯ್ದುಕೊಳ್ಳುವುದರಿಂದ ಅಂತರ ಕಾಯ್ದುಕೊಂಡಿಲ್ಲ. ಅವರು ಸದಾ ಜಿಮ್ ಮಾಡತ್ತಾರೆ. ಇಂದು (ಆಗಸ್ಟ್ 11) ಅವರಿಗೆ ಜನ್ಮದಿನದ ಸಂಭ್ರಮ. ಎಲ್ಲ ಕಡೆಗಳಿಂದ ಅವರಿಗೆ ಬರ್ತ್ಡೇ ವಿಶ್ಗಳು ಬರುತ್ತಿವೆ. ಸುನೀಲ್ ಶೆಟ್ಟಿ ಅವರು ಅಷ್ಟಾಗಿ ಸಿನಿಮಾ ಮಾಡದೆ ಇದ್ದರೂ ಆಸ್ತಿ ಕಡಿಮೆ ಆಗಿಲ್ಲ. ಇದಕ್ಕೆ ಕಾರಣ ಅವರ ಉದ್ಯಮ. ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಸುನೀಲ್ ಶೆಟ್ಟಿ ಬಿಸ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಅವರ ವಾರ್ಷಿಕ ಆದಾಯ ಕೋಟಿಗಳಲ್ಲಿದೆ. ಆ ಬಗ್ಗೆ ಇಲ್ಲಿದೆ ವಿವರ.
ಸುನೀಲ್ ಶೆಟ್ಟಿ ಅವರು ಸದಾ ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅವರು ನಿತ್ಯ ಜಿಮ್ ಮಾಡುತ್ತಾರೆ. 63ನೇ ವಯಸ್ಸಿನಲ್ಲೂ ಅವರು ಸಖತ್ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಆರೋಗ್ಯಕರ ಆಹಾರ ಸೇವನೆಗೆ ಅವರು ಆದ್ಯತೆ ನೀಡುತ್ತಾರೆ. ಸುನೀಲ್ ಶೆಟ್ಟಿ ಅವರು ರೆಸ್ಟೋರೆಂಟ್‌ಗಳ ಮಾಲೀಕರಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಪತ್ನಿ ಮನಾ ಶೆಟ್ಟಿ ಕೂಡ ಯಶಸ್ವಿ ಉದ್ಯಮಿ.
ಸುನೀಲ್ ಶೆಟ್ಟಿ 1992ರಲ್ಲಿ ಬಿಡುಗಡೆಯಾದ ‘ಬಲ್ವಾನ್’ ಸಿನಿಮಾ ಮೂಲಕ ತಮ್ಮ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸುನೀಲ್ ಶೆಟ್ಟಿ ಅವರ ಒಟ್ಟೂ ಆಸ್ತಿ 120 ಕೋಟಿ ರೂಪಾಯಿಗೂ ಅಧಿಕ ಇದೆ ಎಂದು ವರದಿ ಆಗಿದೆ. ಸುನೀಲ್ ಶೆಟ್ಟಿ ಒಂದು ತಿಂಗಳಿಗೆ 50 ಲಕ್ಷ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡುತ್ತಾರೆ. ಅವರ ವಾರ್ಷಿಕ ಗಳಿಕೆ ಸುಮಾರು 7ರಿಂದ 9 ಕೋಟಿ ರೂಪಾಯಿ. ಸುನೀಲ್ ಶೆಟ್ಟಿ ಐಷಾರಾಮಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.
ಮುಂಬೈನಲ್ಲಿ ಸುನೀಲ್ ಶೆಟ್ಟಿ ಅವರಿಗೆ ಐಷಾರಾಮಿ ಬಂಗಲೆ ಇದೆ. ಈ ಬಂಗಲೆಯ ಮೌಲ್ಯ ಸುಮಾರು 20 ಕೋಟಿ ರೂಪಾಯಿಗೂ ಅಧಿಕವಾಗಿದೆ. ಫಾರ್ಮ್ಹೌಸ್ನ ಮಾಲೀಕ ಕೂಡ ಹೌದು. ಇದು ಅವರ ಕನಸಿನ ಮನೆಯಂತೆ. ಅವರು ಪತ್ನಿ ಮನಾ ಅವರ ಜೊತೆ ರಿಯಲ್ ಎಸ್ಟೇಟ್ ಉದ್ಯಮ ಕೂಡ ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ಅವರು ಮುಂಬೈನಲ್ಲಿ 21 ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದ್ದಾರೆ ಅನ್ನೋದು ವಿಶೇಷ. ಇದನ್ನು ಅನೇಕ ಸೆಲೆಬ್ರಿಟಿಗಳು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ:ಸುನಿಲ್ ಶೆಟ್ಟಿ ಆಸ್ತಿ ಮೌಲ್ಯ, ಹೂಡಿಕೆ ಮತ್ತು ಐಶಾರಾಮಿ ಕಾರು ಸಂಗ್ರಹದ ಮಾಹಿತಿ
ಸುನೀಲ್ ಶೆಟ್ಟಿ ಅವರು ಕಾರು ಪ್ರಿಯ. ಅವರ ಬಳಿ ಕ್ರೇಜಿ ಕಾರ್ ಕಲೆಕ್ಷನ್ ಇದೆ. ಹಮ್ಮರ್ H3, ಲ್ಯಾಂಡ್ ಕ್ರೂಸರ್, ಮರ್ಸಿಡೀಸ್ ಬೆಂಜ್ ಎಸ್ಯುವಿ, ಜೀಪ್ ರಾಂಗ್ಲರ್ ಮುಂತಾದ ಐಷಾರಾಮಿ ಕಾರುಗಳ ಅವರ ಗ್ಯಾರೇಜ್ನಲ್ಲಿ ಇದೆ. ಸುನೀಲ್ ಶೆಟ್ಟಿ ನಾಯಿಗಳ ಬಗ್ಗೆ ಪ್ರೇಮ ಹೊಂದಿದ್ದಾರೆ. ಅವರ ಬಳಿ ವಿದೇಶಿ ತಳಿಯ ಕೆಲವು ಶ್ವಾನಗಳು ಇವೆ ಇವುಗಳು ಕೂಡ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತವೆ. ಮಗಳ ಮದುವೆ ಮಾಡಿ ಅವರು ಹಾಯಾಗಿದ್ದಾರೆ. ಮಗ ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರ ಹೆಸರು ಪಾಪ್‌ಕಾರ್ನ್ ಎಂಟರ್‌ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂದು. ಇದರಿಂದಲೂ ಅವರು ಲಾಭ ಕಾಣುತ್ತಾರೆ. ಸುನೀಲ್ ಶೆಟ್ಟಿ 2016ರಿಂದ ಈಚೆ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಹೀರೋ ಆಗಿ ನಟಿಸೋದು ಕಡಿಮೆ ಆಗಿದೆ. ಅವರು ಹಲವು ಚಿತ್ರಗಳು ಯಶಸ್ಸು ಕಂಡಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Sun, 11 August 24