ಹಿರಿಯ ನಟರ ಬಳಿ ನಿರ್ದೇಶಕರು ತುಂಬಾನೇ ನಾಜೂಕಾಗಿ ನಡೆದುಕೊಳ್ಳಬೇಕು. ಶೂಟಿಂಗ್ ವೇಳೆ ಹೆಚ್ಚು ಟೇಕ್ ತೆಗೆದುಕೊಂಡರೆ ಹಿರಿಯ ನಟರು ಇದನ್ನು ಸಹಿಸುವುದೇ ಇಲ್ಲ. ಈಗ ನಟ ಸನ್ನಿ ಡಿಯೋಲ್ ವಿಚಾರದಲ್ಲೂ ಹೀಗೆಯೇ ಆಗಿದೆ. ನಾಲ್ಕು ಬಾರಿ ರಿಟೇಕ್ ಹೇಳಿದ ವ್ಯಕ್ತಿ ಎದುರೇ ಸ್ಕ್ರಿಪ್ಟ್ ಪೇಪರ್ಅನ್ನು ಮುದ್ದೆಕಟ್ಟಿ ಎಸೆದಿದ್ದಾರೆ ಸನ್ನಿ. ಈ ವೇಳೆ ಸನ್ನಿ ಮುಖದಲ್ಲಿ ತುಂಬಾನೇ ಗಾಂಭೀರ್ಯತೆ ಹಾಗೂ ಕೋಪ ಇತ್ತು. ಆದರೆ, ಇದು ತಮಾಷೆಗೆ ಮಾಡಿದ ವಿಡಿಯೋ ಎನ್ನುವುದು ಸನ್ನಿ ಹೇಳಿದ ಡೈಲಾಗ್ ಹಾಗೂ ಈ ಪೋಸ್ಟ್ಗೆ ನೀಡಿದ ಕ್ಯಾಪ್ಶನ್ನಿಂದ ಅಭಿಮಾನಿಗಳಿಗೆ ಮನದಟ್ಟಾಗಿದೆ.
1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್ ಪೇ ತಾರಿಖ್..’ ಎನ್ನುವ ಡೈಲಾಗ್ ಬರುತ್ತದೆ. ಈ ಡೈಲಾಗ್ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ. ಅದರಂತೆ ಸನ್ನಿ ಮೊದಲ ಬಾರಿ ಈ ಡೈಲಾಗ್ ಹೇಳಿದ್ದಾರೆ. ಆಗ ಎದುರಿದ್ದ ವ್ಯಕ್ತಿ ಧ್ವನಿ ಏರಿಸುವಂತೆ ಕೋರಿದ್ದ. ಇದು ನಾಲ್ಕು ಬಾರಿ ರಿಪೀಟ್ ಆಗಿದೆ. ಆಗ ಸನ್ನಿಗೆ ಕೋಪ ಬಂದಿದೆ. ಎದುರಿದ್ದ ವ್ಯಕ್ತಿಯ ಸ್ಕ್ರಿಪ್ಟ್ ಪೇಪರ್ ಕಸಿದು ಎಸೆದ ಸನ್ನಿ, ‘ನಾನೇನು ಇಂದಿರಾ ನಗರದ ಗೂಂಡಾ ಎಂದುಕೊಂಡಿದ್ದೀಯಾ?’ ಎಂದು ಪ್ರಶ್ನೆ ಮಾಡಿದ್ದಾರೆ.
ಕ್ರೆಡಿಟ್ ಕಾರ್ಡ್ ಬಿಲ್ ಪೇ ಮಾಡುವ ಕ್ರೆಡ್ ಕಂಪೆನಿ ಕಳೆದ ಐಪಿಎಲ್ ಸೀಸನ್ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್ಗಳು ಪ್ರಸಾರವಾದರೆ ಚಾನೆಲ್ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್ ಸೀಸನ್ಗೂ ಮೊದಲು ಹೊಸ ವಿಧವಾದ ಆ್ಯಡ್ನೊಂದಿಗೆ ಕ್ರೆಡ್ ಬಂದಿತ್ತು. ಈ ಜಾಹೀರಾತಿನಲ್ಲಿ ರಾಹುಲ್ ದ್ರಾವಿಡ್ ಬೆಂಗಳೂರು ಟ್ರಾಫಿಕ್ ಬಗ್ಗೆ ತುಂಬಾನೇ ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಟ್ರಾಫಿಕ್ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದರು. ಈ ಜಾಹೀರಾತು ಸಾಕಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್