
ಮೇ 13ರಂದು ಸನ್ನಿ ಲಿಯೋನ್ ಅವರು (Sunny Leone) ಬರ್ತ್ಡೇ ಆಚರಿಸಿಕೊಂಡಿದ್ದರು. ಮಂಡ್ಯದಲ್ಲಿ ಸನ್ನಿ ಲಿಯೋನ್ ಬರ್ತ್ ಡೇ ಜೋರಾಗಿ ನಡೆದಿತ್ತು. ಅಭಿಮಾನಿಗಳಿಂದ ರಕ್ತದಾನ ಶಿಬಿರ ಆಯೋಜನೆಗೊಂಡಿತ್ತು. ಈ ವೇಳೆ ಅನೇಕರು ರಕ್ತ ನೀಡಿ, ಜೀವ ಉಳಿಸಿ ಎನ್ನುವ ಸಂದೇಶ ಕೊಟ್ಟರು. ಇನ್ನು, ಅಭಿಮಾನಿಗಳಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು. ಸನ್ನಿ ಬರ್ತ್ಡೇ ದಿನ (Sunny Leone Birthday) ಬಾಡೂಟ ಸವಿದು ಫ್ಯಾನ್ಸ್ ಖುಷಿಯಾದರು. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸುದ್ದಿ ಅನೇಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಇದು ಸನ್ನಿ ಕಣ್ಣಿಗೂ ಬಿದ್ದಿದೆ. ಮಂಡ್ಯದ ಅಭಿಮಾನಿಗಳು ತೋರಿದ ಪ್ರೀತಿಗೆ ಸನ್ನಿ ಲಿಯೋನ್ ಮೂಕವಿಸ್ಮಿತರಾಗಿದ್ದಾರೆ.
ಒಂದು ಕಾಲದಲ್ಲಿ ನೀಲಿ ಚಿತ್ರ ಲೋಕದಲ್ಲಿ ಸನ್ನಿ ಕೆಲಸ ಮಾಡಿದ್ದರು. ನಂತರ ಅವರು ಬಾಲಿವುಡ್ಗೆ ಕಾಲಿಟ್ಟು ಬೇರೆ ಇಮೇಜ್ ಪಡೆದುಕೊಂಡರು. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡಿ ಫೇಮಸ್ ಆದರು. ಅನೇಕ ಚಿತ್ರಗಳಿಗೆ ಅವರು ಹೀರೋಯಿನ್ ಆಗಿಯೂ ನಟಿಸಿದರು. ಸಿನಿಮಾ ಕೆಲಸಗಳ ಮಧ್ಯೆ ಅವರು ಹಲವು ಸಾಮಾಜಿಕ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಅವರು ಅನಾಥ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಆ ಮಗುವಿಗೆ ನಿಶಾ ಕೌರ್ ಎಂದು ಹೆಸರು ಇಟ್ಟಿದ್ದಾರೆ. ಇನ್ನೂ ಹಲವು ಒಳ್ಳೆಯ ಕೆಲಸಗಳು ಅವರಿಂದ ಆಗಿವೆ. ಸನ್ನಿ ಅವರ ಈ ಕಾರ್ಯಕ್ಕೆ ಮಂಡ್ಯದಲ್ಲಿ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.
ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಗ್ರಾಮದ ಹೆಬ್ಬಾಗಿನಲ್ಲಿ 20 ಅಡಿಗೂ ಉದ್ದದ ಸನ್ನಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ‘ಬಡಮಕ್ಕಳ ತಾಯಿ, ಅಭಿಮಾನಿಗಳ ದೇವತೆ’ ಎಂದು ಸನ್ನಿ ಅವರನ್ನು ಬಣ್ಣಿಸಲಾಗಿತ್ತು. ಈ ಫ್ಲೆಕ್ಸ್ ಫೋಟೋ ಕೂಡ ವೈರಲ್ ಆಗಿತ್ತು. ಈ ಬಗ್ಗೆ ಸನ್ನಿ ಸಂತಸ ಹೊರಹಾಕಿದ್ದಾರೆ.
‘ಇದು ನಂಬಲು ಅಸಾಧ್ಯ. ನಿಮಗೆ ಗೌರವ ಸೂಚಿಸಲು ನಾನೂ ಹೋಗಿ ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ. ಲವ್ ಯೂ’ ಎಂದು ಟ್ವೀಟ್ ಮಾಡಿದ್ದಾರೆ ಸನ್ನಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:25 pm, Mon, 16 May 22