‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ಗಳಿಕೆಯ ಓಟ ಭರ್ಜರಿಯಾಗಿ ಮುಂದುವರೆದಿದೆ. ಚಿತ್ರಕ್ಕೆ ದೇಶಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಈ ಚಿತ್ರದ ಕಲೆಕ್ಷನ್ ತೆರೆಕಂಡ ಎರಡನೇ ವಾರದಲ್ಲೂ ಜೋರಾಗಿದೆ. ಇದೇ ಕಾರಣದಿಂದ ಹಲವು ದಾಖಲೆಗಳು ಚಿತ್ರಕ್ಕೆ ಒಲಿದಿವೆ. ಕೊರೊನಾ ನಂತರ ತೆರೆಕಂಡಿದ್ದ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’, ‘ಸೂರ್ಯವಂಶಿ’, ‘83’ ಮೊದಲಾದ ಚಿತ್ರಗಳು ಎರಡು ವಾರಗಳಲ್ಲಿ ಗಳಿಸಿದ್ದ ಮೊತ್ತವನ್ನೆಲ್ಲಾ ‘ದಿ ಕಾಶ್ಮೀರ್ ಫೈಲ್ಸ್’ ಒಂದೇ ವಾರದಲ್ಲಿ ಗಳಿಸಿ ದಾಖಲೆ ಬರೆದಿತ್ತು. ಹಾಗಾದರೆ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು ಎಂಬ ವಿವರ ಇಲ್ಲಿದೆ. ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಚಿತ್ರ ಇದುವರೆಗೆ ಬರೋಬ್ಬರಿ 180 ಕೋಟಿ ರೂ ಬಾಚಿಕೊಂಡಿದೆ. ಎರಡನೇ ವಾರದಲ್ಲಿ ಶುಕ್ರವಾರ 19.15 ಕೋಟಿ ರೂ, ಶನಿವಾರ 24.80 ಕೋಟಿ ರೂ, ಭಾನುವಾರ 26.20 ಕೋಟಿ ರೂಗಳನ್ನು ಚಿತ್ರ ಗಳಿಸಿತ್ತು. 11ನೇ ದಿನ ಅಂದರೆ ಸೋಮವಾರ ಚಿತ್ರದ ಕಲೆಕ್ಷನ್ ತುಸು ತಗ್ಗಿದ್ದು, 12.40 ಕೋಟಿ ರೂ ಗಳಿಸಿದೆ. ಈ ಮೂಲಕ ‘ದಿ ಕಾಶ್ಮೀರ್ ಫೈಲ್ಸ್’ ಒಟ್ಟಾರೆ 179.85 ಕೋಟಿ ರೂ ಗಳಿಸಿದಂತಾಗಿದೆ.
ತರಣ್ ಆದರ್ಶ್ ಟ್ವೀಟ್ ಇಲ್ಲಿದೆ:
#TheKashmirFiles is SENSATIONAL… *Week 2* trending is THE HIGHEST in *post pandemic era*, OVERTAKES #Sooryavanshi, #83TheFilm and #Hollywood giant #SpiderMan BY A RECORD MARGIN… [Week 2] Fri 19.15 cr, Sat 24.80 cr, Sun 26.20 cr, Mon 12.40 cr. Total: ₹ 179.85 cr. #India biz. pic.twitter.com/acRcpbP7XA
— taran adarsh (@taran_adarsh) March 22, 2022
‘ದಿ ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಭಾರತೀಯ ಬಾಕ್ಸಾಫೀಸ್ನಲ್ಲಿ ಹಲವು ದಾಖಲೆ ಬರೆದಿತ್ತು. ಬಾಲಿವುಡ್ ಹಂಗಾಮಾ ವರದಿ ಪ್ರಕಾರ ‘ಸ್ಪೈಡರ್ಮ್ಯಾನ್ ನೋ ವೇ ಹೋಮ್’ ಎರಡನೇ ವಾರ 41 ಕೋಟಿ ರೂ ಗಳಿಸಿತ್ತು. ‘ಸೂರ್ಯವಂಶಿ’ ಚಿತ್ರ 46 ಕೋಟಿ ರೂ ಗಳಿಸಿತ್ತು. ಈ ನಡುವೆ ‘ದಿ ಕಾಶ್ಮೀರ್ ಫೈಲ್ಸ್’ ಎರಡನೇ ವಾರದಲ್ಲಿ ಸುಮಾರು 80 ಕೋಟಿ ರೂ ಅಧಿಕ ಮೊತ್ತವನ್ನು ಬಾಚಿಕೊಂಡು ದಾಖಲೆ ಬರೆದಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದರಿಂದ ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ ಕಲೆಕ್ಷನ್ಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವರದಿಗಳು ಹೇಳಿವೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ ಮೊದಲಾದವರು ಬಣ್ಣಹಚ್ಚಿದ್ದಾರೆ. ಇತ್ತೀಚೆಗೆ ನಟ ಆಮಿರ್ ಖಾನ್ ಚಿತ್ರವನ್ನು ಇಷ್ಟಪಟ್ಟಿದ್ದಲ್ಲದೇ, ಎಲ್ಲರೂ ವೀಕ್ಷಿಸುವಂತೆ ಕೋರಿಕೊಂಡಿದ್ದರು.
‘ಅವರೆಲ್ಲಾ ರಾಜರು, ನಾನೊಬ್ಬ ಭಿಕ್ಷುಕ’: ಗುಜರಾತ್ ಕುರಿತು ಚಿತ್ರ ಮಾಡಲು ಕೇಳುತ್ತಿರುವ ರಾಜಕೀಯ ನಾಯಕರ ಬಗ್ಗೆ ವಿವೇಕ್ ಪ್ರತಿಕ್ರಿಯೆ
‘ದಿ ಕಾಶ್ಮೀರ್ ಫೈಲ್ಸ್’ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಸಾದುದ್ದೀನ್ ಒವೈಸಿ, ಅಖಿಲೇಶ್ ಯಾದವ್ ಮೊದಲಾದ ನಾಯಕರು ‘ಗುಜರಾತ್ನ ಗೋಧ್ರಾ ಗಲಭೆ, ಲಖಿಂಪುರಿ ಖೇರಿ ಪ್ರಕರಣ ಮೊದಲಾದವುಗಳ ಬಗ್ಗೆ ಚಿತ್ರ ಮಾಡಿ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಟಾಂಗ್ ನೀಡಿದ್ದರು. ರಾಜಕೀಯ ನಾಯಕರನ್ನು ಉಲ್ಲೇಖಿಸಿ ನಿರ್ದೇಶಕ ಉತ್ತರಿಸಿದ್ದು, ‘‘ಅವರೆಲ್ಲಾ ರಾಜರು, ನಾನೊಬ್ಬ ಭಿಕ್ಷುಕ’’ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘‘ಅವರಿಗೆಲ್ಲಾ ಬೇರೆ ವಿಷಯಗಳ ಮೇಲೆ ಚಿತ್ರ ಮಾಡದಂತೆ ತಡೆದವರು ಯಾರು? ಬೇರೆ ವಿಷಯಗಳ ಮೇಲೆ ಚಿತ್ರ ಬಂದಿಲ್ಲ ಎಂದು ಹೇಳಿ ಕಾಶ್ಮೀರ್ ಫೈಲ್ಸ್ ವಿರೋಧಿಸುವುದು ಪಲಾಯನವಾದ’’ ಎಂದು ವಿವೇಕ್ ಹೇಳಿದ್ದಾರೆ. ಅಲ್ಲದೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಭಯೋತ್ಪಾದನಾ ಉದ್ಯಮವನ್ನು ರಿವೀಲ್ ಮಾಡಿದೆ. ಈಗ ಭಯೋತ್ಪಾದನೆ ಎನ್ನುವುದು ಒಂದು ಉದ್ಯಮ. ಅದು ಬಹಿರಂಗವಾದಾಗ ನೇತಾರರು ಅದಕ್ಕೆ ವಿರೋಧಿಸುತ್ತಾರೆ’’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
ರಾಜಸ್ಥಾನದ ಕೋಟಾದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನದ ವೇಳೆ ಸೆಕ್ಷನ್ 144:
ರಾಜಸ್ಥಾನದ ಕೋಟಾದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನದ ವೇಳೆ ಮಾರ್ಚ್ 22ರಿಂದ ಏಪ್ರಿಲ್ 21ರವರೆಗೆ ಸೆಕ್ಷನ್ 144 ವಿಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸ್ಥಳೀಯ ಬಿಜೆಪಿ ಶಾಸಕ ಪ್ರಹ್ಲಾದ್ ಗುಂಜಾಲ್ ವಿರೋಧ ವ್ಯಕ್ತಪಡಿಸಿದ್ದು, ರಾಜಕೀಯ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
Beast: ‘ಕೆಜಿಎಫ್ 2’ಗೆ ಒಂದು ದಿನ ಮೊದಲೇ ‘ಬೀಸ್ಟ್’ ಎಂಟ್ರಿ; ಗೆಲ್ಲೋದು ಯಶ್ ಎಂದ ಫ್ಯಾನ್ಸ್
4 ತಪ್ಪು ಕಲ್ಪನೆಗಳನ್ನು ಅಳಿಸಿಹಾಕಿದೆ ‘ದಿ ಕಾಶ್ಮೀರ್ ಫೈಲ್ಸ್’; ಪರಿಪರಿಯಾಗಿ ವಿಶ್ಲೇಷಣೆ ಮಾಡಿದ ಆರ್ಜಿವಿ