‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾಗೆ ಮೋದಿ ಮೆಚ್ಚುಗೆ ಮಾತು; ಚಿತ್ರತಂಡಕ್ಕೆ ಖುಷಿಯೋ ಖುಷಿ

| Updated By: ಮದನ್​ ಕುಮಾರ್​

Updated on: Mar 13, 2022 | 8:12 AM

The Kashmir Files: ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಂಡದ ಜೊತೆ ಶನಿವಾರ (ಮಾ.12) ಸಂಜೆ ನರೇಂದ್ರ ಮೋದಿ ಭೇಟಿ ಆಗಿದೆ. ಇದರಿಂದ ಚಿತ್ರತಂಡಕ್ಕೆ ಹೊಸ ಉತ್ತೇಜನ ಸಿಕ್ಕಂತಾಗಿದೆ.

‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾಗೆ ಮೋದಿ ಮೆಚ್ಚುಗೆ ಮಾತು; ಚಿತ್ರತಂಡಕ್ಕೆ ಖುಷಿಯೋ ಖುಷಿ
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡದ ಜೊತೆ ಪ್ರಧಾನಿ ನರೇಂದ್ರ ಮೋದಿ
Follow us on

ಹತ್ತು ಹಲವು ಕಾರಣದಿಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ (The Kashmir Files Movie) ಗಮನ ಸೆಳೆಯುತ್ತಿದೆ. ಸತ್ಯ ಘಟನೆ ಆಧರಿಸಿ ನಿರ್ಮಾಣವಾದ ಈ ಸಿನಿಮಾ ಕುರಿತು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸೂಕ್ತ ಪ್ರಚಾರ ಸಿಗದ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ದೊಡ್ಡಮಟ್ಟದ ಕಲೆಕ್ಷನ್​ ಮಾಡಿಲ್ಲ. ಆದರೂ ಈಗ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಂಡ ಫುಲ್​ ಖುಷಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ತಿಳಿಸಿರುವುದೇ ಆ ಖುಷಿಗೆ ಕಾರಣ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚಿತ್ರತಂಡದವರು ಪೋಸ್ಟ್​ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ‘ದಿ ಕಾಶ್ಮೀರ್​ ಫೈಲ್ಸ್​’ ತಂಡಕ್ಕೆ ಸಿಕ್ಕಿದೆ. ಈ ಭೇಟಿಯ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರಿಂದ ಚಿತ್ರಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಂತಾಗಿದೆ. ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ನಿರ್ಮಾಪಕ ಅಭಿಷೇಕ್​ ಅಗರ್​ವಾಲ್​, ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಅವರು ಮೋದಿ ಜೊತೆ ಕ್ಲಿಕ್ಕಿಸಿಕೊಂಡ ಈ ಫೋಟೋ ಸಿನಿಪ್ರಿಯರ ವಲಯದಲ್ಲಿ ವೈರಲ್​ ಆಗಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಂಡದ ಜೊತೆ ಶನಿವಾರ (ಮಾ.12) ಸಂಜೆ ಮೋದಿ ಭೇಟಿ ಆಗಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತುಂಬ ಖುಷಿ ಆಯಿತು. ನಮ್ಮ ಸಿನಿಮಾ ಬಗ್ಗೆ ಅವರು ಹೇಳಿದ ಪ್ರಶಂಸೆಯ ಮಾತುಗಳಿಂದಾಗಿ ಈ ಭೇಟಿ ತುಂಬ ವಿಶೇಷವಾಯಿತು’ ಎಂದು ನಿರ್ಮಾಪಕ ಅಭಿಷೇಕ್​ ಅಗರ್​ವಾಲ್​ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತದ ಅತ್ಯಂತ ಸವಾಲಿನ ಸತ್ಯವನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲು ಧೈರ್ಯ ತೋರಿಸಿದ್ದಾಗಿ ನಿಮಗೆ ಧನ್ಯವಾದಗಳು’ ಎಂದು ನಿರ್ಮಾಪಕರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯೆಯನ್ನು ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ನಿರ್ಮಾಣ ಆಗಿದೆ. ಅನುಪಮ್​ ಖೇರ್​, ದರ್ಶನ್​ ಕುಮಾರ್​, ಪಲ್ಲವಿ ಜೋಶಿ, ಪ್ರಕಾಶ್​ ಬೆಳವಾಡಿ, ಮಿಥುನ್​ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನ (ಮಾರ್ಚ್​ 11) ಈ ಸಿನಿಮಾ 3.55 ಕೋಟಿ ರೂ. ಗಳಿಸಿದೆ. ಮೋದಿ ಭೇಟಿ ಬಳಿಕ ಚಿತ್ರಕ್ಕೆ ಭಾರಿ ಪ್ರಚಾರ ಸಿಕ್ಕಿದ್ದು, ಗಳಿಕೆ ಹೆಚ್ಚುವ ಸಾಧ್ಯತೆ ಇದೆ. ಹರಿಯಾಣದಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಸಾಕಷ್ಟು ವಿವಾದಗಳ ಕಾರಣದಿಂದಲೂ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ಸುದ್ದಿ ಆಗುತ್ತಿದೆ. ಈ ಚಿತ್ರಕ್ಕೆ ಈಗ ಕೋರ್ಟ್​ನಿಂದ ನಿರ್ಬಂಧ ಎದುರಾಗಿದೆ. ಭಾರತೀಯ ವಾಯುಪಡೆಯ ಅಧಿಕಾರಿ ರವಿ ಖನ್ನಾ ಅವರ ದೃಶ್ಯಗಳನ್ನು ತೋರಿಸದಂತೆ ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರ ತಂಡಕ್ಕೆ ಜಮ್ಮು ಕೋರ್ಟ್​ ನಿರ್ದೇಶನ ನೀಡಿದೆ. ಮಾರ್ಚ್​ 4ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್​ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ‘ಸಿನಿಮಾದಲ್ಲಿ ನನ್ನ ಪತಿಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಲಾಗಿದೆ. ರವಿ ಖನ್ನಾ ಅವರನ್ನು ತಪ್ಪಾದ ರೀತಿಯಲ್ಲಿ ತೋರಿಸಲಾಗಿದೆ’ ಎಂದು ದೂರಿದ್ದರು. ಆದರೆ, ಚಿತ್ರತಂಡ ಆ ಬಗ್ಗೆ ಲಕ್ಷ್ಯ ವಹಿಸಲಿಲ್ಲ. ಈ ಕಾರಣಕ್ಕೆ ಅವರು ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದಾರೆ.

ಇದನ್ನೂ ಓದಿ:

ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ; ಆ ಒಂದು ದೃಶ್ಯ ತೋರಿಸದಿರಲು ಕೋರ್ಟ್ ಸೂಚನೆ

ಹೃತಿಕ್​ ರೋಷನ್​ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್​ ಖೇರ್​ ಫಿಟ್ನೆಸ್​; ಇಲ್ಲಿದೆ ಫೋಟೋ