ಮಾರಿಷಸ್: ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬಾಂಬ್ ಬೆದರಿಕೆ

|

Updated on: May 30, 2023 | 10:59 PM

The Kerala Story: ಭಾರತದಲ್ಲಿ ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ಕಲೆಕ್ಷನ್ ಭರ್ಜರಿಯಾಗಿದೆ. ಆದರೆ ಮಾರಿಷಸ್​ನಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬಾಂಬ್ ಬೆದರಿಕೆ ಬಂದಿದೆ.

ಮಾರಿಷಸ್: ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬಾಂಬ್ ಬೆದರಿಕೆ
ದಿ ಕೇರಳ ಸ್ಟೋರಿ
Follow us on

ಲವ್ ಜಿಹಾದ್ (Love Jihad) ವಿರುದ್ಧ ಜಾಗೃತಿ ಸಿನಿಮಾ ಎಂದೇ ಪ್ರಚಾರವಾಗಿರುವ ದಿ ಕೇರಳ ಸ್ಟೋರಿಗೆ (The Kerala Story) ಐಸಿಸ್ ಬೆಂಬಲಿಗರಿಂದ ಬಾಂಬ್ ಬೆದರಿಕೆ ಬಂದಿದೆ. ಭಾರತದಲ್ಲಿ ಈಗಾಗಲೇ ಭಾರಿ ಕಲೆಕ್ಷನ್ ಮಾಡಿರುವ ದಿ ಕೇರಳ ಸ್ಟೋರಿ ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮಾರಿಷಸ್​ನಲ್ಲಿ ಸಹ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಇದೇ ವೇಳೆ ಸಿನಿಮಾ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಕ್ಕೆ ಬಾಂಬ್ ಬೆದರಿಕೆ ಬಂದಿದೆ.

ಮಾರಿಷಸ್​ನ ಜನಪ್ರಿಯ ಸಿನಿಮಾ ಪ್ರದರ್ಶಕ ಸಂಸ್ಥೆ ಎಂಸಿನೆಗೆ ಬೆದರಿಕೆ ಇ-ಮೇಲ್ ಬಂದಿದ್ದು, ‘ಸರ್/ಮೇಡಂ, ಎಂಸಿನೆಯನ್ನು ಧ್ವಂಸ ಮಾಡಲು ನಾವು ಯೋಜಿಸಿದ್ದೇವೆ. ನಾವು ಬಾಂಬ್​ಗಳನ್ನು ನಿಮ್ಮ ಚಿತ್ರಮಂದಿರಗಳಲ್ಲಿ ಇಟ್ಟಿದ್ದು ನಾಳೆ ನಿಮ್ಮ ಚಿತ್ರಮಂದಿರ ಬ್ಲಾಸ್ಟ್ ಆಗಲಿದೆ. ನೀವು ಸಿನಿಮಾ ನೋಡಲು ಬಯಸುತ್ತೀರಲ್ಲವೆ, ನಾಳೆ ನಾವು ನಿಮಗೆ ಒಳ್ಳೆಯ ಸಿನಿಮಾ ತೋರಿಸಲಿದ್ದೀವಿ. ನಾಳೆ ಶುಕ್ರವಾರ ಕೆಲವು ಬಾಂಬ್​ಗಳನ್ನು ದಿ ಕೇರಳ ಸ್ಟೋರಿ ಪ್ರದರ್ಶಿಸಲಾಗುತ್ತಿರುವ ಚಿತ್ರಮಂದಿರಗಳಲ್ಲಿ ಇರಿಸಲಿದ್ದೇವೆ” ಎಂದು ಮೇಲ್​ನಲ್ಲಿ ಬರೆಯಲಾಗಿದೆ.

ಭಾರತದಲ್ಲಿನ ಪಿವಿಆರ್, ಐನಾಕ್ಸ್ ರೀತಿಯಲ್ಲಿಯೇ ಎಂಸಿನೆ, ಮಾರಿಷನ್​ನ ಜನಪ್ರಿಯ ಥಿಯೇಟರ್ ಚೈನ್ ಆಗಿದೆ. ಭಾರತದ ಸಿನಿಮಾಗಳು ಮಾರಿಷಸ್​ನಲ್ಲಿ ಜನಪ್ರಿಯವಾಗಿದ್ದು ಭಾರತದ ಹಲವು ಸಿನಿಮಾಗಳನ್ನು ಎಂಸಿನೆ ಪ್ರದರ್ಶಿಸಿದೆ. ಇದೀಗ ಕೇರಳ ಸ್ಟೋರಿ ಸಿನಿಮಾವನ್ನೂ ಪ್ರದರ್ಶಿಸುತ್ತಿದ್ದು ಸಿನಿಮಾ ಪ್ರದರ್ಶನಕ್ಕೆ ಬೆದರಿಕೆ ಪತ್ರ ಬಂದಿದೆ. ಬೆದರಿಕೆ ಇ-ಮೇಲ್ ಅನ್ನು ಮಾರಿಷನ್​ನ ಸಿನಿಮಾ ಚೈನ್​ ಸಂಸ್ಥೆಯವರು ದಿ ಕೇರಳ ಸ್ಟೋರಿ ಸಿನಿಮಾ ನಿರ್ಮಾಪಕ ವಿಪುಲ್ ಅಮೃತಾಲ್​ಗೆ ಫಾರ್ವರ್ಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:Adah Sharma: ‘ಅಂಥವರ ಜತೆ ಕೆಲಸ ಮಾಡೋಕೆ ನಂಗೆ ಇಷ್ಟ ಇಲ್ಲ’: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ಮೊದಲಿನಿಂದಲೂ ವಿವಾದಗಳನ್ನು ಸೃಷ್ಟಿಸಿದೆ. ಸಿನಿಮಾದ ವಿರುದ್ಧ ಕೇರಳ ಆಡಳಿತ ಸರ್ಕಾರ ಹಾಗೂ ಕೆಲ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಕೇರಳದ ಘನತೆಗೆ ಧಕ್ಕೆ ತರಲು ಈ ಸಿನಿಮಾ ಮಾಡಲಾಗಿದೆ ಎಂದು ಸಿನಿಮಾ ಬಿಡುಗಡೆ ತಡೆಹಿಡಿಯಲು ಕಾನೂನು ಹೋರಾಟವನ್ನು ಸಹ ಮಾಡಿದ್ದರು ಆದರೆ ಹೋರಾಟ ವಿಫಲವಾಗಿತ್ತು. ಆದರೆ ಸೆನ್ಸಾರ್​ನಲ್ಲಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿ ಸಿನಿಮಾವನ್ನು ಬಿಡುಗಡೆ ಮಾಡಲಾಯ್ತು.

ಬಳಿಕ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಿನಿಮಾಕ್ಕೆ ವಿರೋಧ ವ್ಯಕ್ತವಾಯಿತು. ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನಕ್ಕೆ ತಡೆಒಡ್ಡಲಾಯಿತು. ಪಶ್ಚಿಮ ಬಂಗಾಳದಲ್ಲಿ ಸಿನಿಮಾಕ್ಕೆ ನಿಷೇಧ ಹೇರಲಾಯ್ತು. ಆದರೆ ಬಿಜೆಪಿ ಆಡಳಿತವಿರುವ ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಸಿಗುವ ಜೊತೆಗೆ ಅಲ್ಲಿನ ಮುಖ್ಯಮಂತ್ರಿಗಳು ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಿನಿಮಾ ನೋಡುವಂತೆ ಪ್ರೇರೇಪಿಸಿದರು. ಸ್ವತಃ ನರೇಂದ್ರ ಮೋದಿಯವರು ಸಹ ಕರ್ನಾಟಕದಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದಲ್ಲಿ ದಿ ಕೇರಳ ಸ್ಟೋರಿ ಉಲ್ಲೇಖ ಮಾಡಿದರು.

ದಿ ಕೇರಳ ಸ್ಟೋರಿ ಸಿನಿಮಾ 25 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ್ದು ಬಾಕ್ಸ್ ಆಫೀಸ್​ನಲ್ಲಿ 225 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತಾಂತರದ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಸುದಿಪ್ತೋ ಸೇನ್ ನಿರ್ದೇಶನ ಮಾಡಿದ್ದು ಅದಾ ಶರ್ಮಾ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ