Urfi Javed: ಮೊದಲ ಬಾರಿ ಮೆಚ್ಚುಗೆಗೆ ಪಾತ್ರವಾಯ್ತು ಉರ್ಫಿ ಜಾವೇದ್ ಬಟ್ಟೆ; ‘ನನಗೆ ಬೇಕು’ ಅಂತ ಕಮೆಂಟ್ ಮಾಡಿದ ನೇಹಾ ಧೂಪಿಯಾ
Neha Dhupia: ಇದೇ ಮೊದಲ ಬಾರಿಗೆ ಉರ್ಫಿ ಜಾವೇದ್ ಧರಿಸಿದ ಬಟ್ಟೆ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಿವುಡ್ನ ಖ್ಯಾತ ನಟಿ ನೇಹಾ ಧೂಪಿಯಾ ಅವರು ಈ ಬಟ್ಟೆ ನೋಡಿ ಇಷ್ಟಪಟ್ಟಿದ್ದಾರೆ.
‘ಬಿಗ್ ಬಾಸ್ ಒಟಿಟಿ’ ಖ್ಯಾತಿಯ ಉರ್ಫಿ ಜಾವೇದ್ (Urfi Javed) ಅವರು ಕಾಸ್ಟ್ಯೂಮ್ ವಿಚಾರದಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು. ವಸ್ತ್ರ ವಿನ್ಯಾಸದಲ್ಲಿ ಅವರು ಮಾಡದ ಪ್ರಯೋಗಗಳೇ ಇಲ್ಲ. ಪ್ರತಿ ಬಾರಿ ಅವರು ವಿಚಿತ್ರವಾದ ಬಟ್ಟೆ ಧರಿಸಿ ಬಂದಾಗ ಟ್ರೋಲ್ ಆಗುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಉರ್ಫಿ ಜಾವೇದ್ ಧರಿಸಿದ ಬಟ್ಟೆ (Urfi Javed Dress) ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಿವುಡ್ನ ಖ್ಯಾತ ನಟಿ ನೇಹಾ ಧೂಪಿಯಾ ಅವರು ಈ ಬಟ್ಟೆ ನೋಡಿ ಇಷ್ಟಪಟ್ಟಿದ್ದಾರೆ. ‘ನನಗೆ ಇದು ಬೇಕು’ ಎಂದು ಅವರು ಕಮೆಂಟ್ ಮಾಡಿದ್ದಾರೆ. ಈ ಕಾಸ್ಟ್ಯೂಮ್ನಲ್ಲಿ ಅನೇಕ ಗೊಂಬೆಗಳಿವೆ. ಮಕ್ಕಳಿಗಂತೂ ಈ ಉಡುಗೆ ಸಖತ್ ಇಷ್ಟ ಆಗುತ್ತದೆ. ಹಾಗಾಗಿ ಇದು ಅನೇಕರ ಗಮನ ಸೆಳೆದಿದೆ. ‘ಇದು ತುಂಬ ಕ್ಯೂಟ್ ಆಗಿದೆ’ ಎಂದು ನೇಹಾ ಧೂಪಿಯಾ (Neha Dhupia) ಅವರು ಕಮೆಂಟ್ ಮಾಡಿದ್ದಾರೆ. ಈ ಉಡುಗೆ ತಮಗೂ ಬೇಕು ಎಂಬ ಬಯಕೆ ಅವರಿಗೆ ಉಂಟಾಗಿದೆ. ಅದನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ.
ಉರ್ಫಿ ಜಾವೇದ್ ಅವರ ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಕಡೆಗೂ ನಾವು ಮೆಚ್ಚುವಂತಹ ಬಟ್ಟೆಯನ್ನು ಈಕೆ ಧರಿಸಿದ್ದಾಳೆ. ಇಂದು ತುಂಬ ಮುದ್ದಾಗಿ ಕಾಣುತ್ತಿದ್ದಾಳೆ’ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಉರ್ಫಿ ಜಾವೇದ್ ವ್ಯಕ್ತಿತ್ವದ ಬಗ್ಗೆ ಈ ಹಿಂದೆ ಕೆಲವು ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದರು.
View this post on Instagram
ಇತ್ತೀಚೆಗೆ ಉರ್ಫಿ ಜಾವೇದ್ ಅವರು ಚೂಯಿಂಗ್ ಗಮ್ ಬಳಸಿ ಡ್ರೆಸ್ ಮಾಡಿಕೊಂಡಿದ್ದರು. ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದರು. ‘ಚೀ ಅಹಸ್ಯ’ ಎಂದು ಅನೇಕರು ಕಮೆಂಟ್ ಮಾಡಿದ್ದರು. ವಸ್ತ್ರ ವಿನ್ಯಾಸದಲ್ಲಿ ಉರ್ಫಿ ಜಾವೇದ್ ಮಾಡಿದ ಪ್ರಯೋಗಗಳು ಒಂದೆರಡಲ್ಲ. ಕಸದ ಚೀಲ, ಗೋಣಿ ಚೀಲ, ಹಣ್ಣು, ತರಕಾರಿ, ಮೊಬೈಲ್ ಫೋನ್, ಗಾಜಿನ ಚೂರು, ಎಕ್ಸ್ ರೇ ಶೀಟ್, ಮಲ್ಲಿಗೆ ಹೂವು, ತಟ್ಟೆ-ಲೋಟ.. ಹೀಗೆ ಹಲವಾರು ವಸ್ತುಗಳನ್ನು ಬಳಸಿ ತಯಾರಿಸಿದ ಬಗೆಬಗೆಯ ಬಟ್ಟೆಗಳನ್ನು ಅವರು ಧರಿಸಿದ್ದುಂಟು.
ಇದನ್ನೂ ಓದಿ: Urfi Javed: ಉರ್ಫಿ ಜಾವೇದ್ ಬಟ್ಟೆ ನೋಡಿ ಹೌಹಾರಿದ ಹೋಟೆಲ್ ಸಿಬ್ಬಂದಿ; ‘ನೋ ಎಂಟ್ರಿ’ ಎಂದಿದ್ದಕ್ಕೆ ನಟಿ ಗರಂ
ಯಾರು ಎಷ್ಟೇ ಟೀಕೆ ಮಾಡಿದರೂ ಉರ್ಫಿ ಜಾವೇದ್ ಅವರ ಹುಚ್ಚಾಟಕ್ಕೆ ಬ್ರೇಕ್ ಬಿದ್ದಿಲ್ಲ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಕೂಡ ಹೆಚ್ಚುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 41 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಅವರು ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳಿಗೆ ಲಕ್ಷಾಂತರ ಲೈಕ್ಸ್ ಬರುತ್ತವೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳ ವಲಯದಲ್ಲೂ ಉರ್ಫಿ ಜಾವೇದ್ ಬಗ್ಗೆ ಚರ್ಚೆ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಖ್ಯಾತಿ ಪಡೆದಿದ್ದಾರೆ. ಕಿರುತೆರೆಯಲ್ಲಿ ನಟಿಯಾಗಿ ಮಿಂಚಬೇಕು ಎಂಬುದು ಉರ್ಫಿ ಜಾವೇದ್ ಅವರ ಆಸೆ ಆಗಿತ್ತು. ಆದರೆ ಅಲ್ಲಿ ಅವರಿಗೆ ಸೂಕ್ತ ಅವಕಾಶ ಸಿಗಲಿಲ್ಲ. ಬಳಿಕ ಅವರು ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಸ್ಪರ್ಧಿಸಿ ಜನರಿಗೆ ಪರಿಚಯಗೊಂಡರು. ಈಗ ಬಟ್ಟೆ ವಿಚಾರದಲ್ಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.