ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ವಿಷಯವನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಮಾಡಿದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಜನಪ್ರಿಯತೆ ಹೆಚ್ಚಾಯಿತು. ಅಲ್ಲದೇ ಅವರನ್ನು ಅನೇಕ ವಿವಾದಗಳು ಕೂಡ ಬೆನ್ನೇರಿದವು. ಆ ಬಳಿಕ ಅವರಿಗೆ ಸರ್ಕಾರದ ವತಿಯಿಂದ ವೈ ಕೆಟಗರಿ ಭದ್ರತೆ (Y Category Security) ನೀಡಲಾಯಿತು. ಈಗ ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಒಂದು ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಬೆಳಗ್ಗೆ ವಾಕಿಂಗ್ ಹೊರಟ ಅವರನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದಾರೆ. ಗನ್ ಹಿಡಿದು ಅವರ ಹಿಂದೆಯೇ ತೆರಳುತ್ತ ಭದ್ರತೆ ನೀಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಹಲವು ಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರಿಗೆ ಈ ಭದ್ರತೆ ನೀಡುವ ಅವಶ್ಯಕತೆ ಇದೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ‘ಅಯ್ಯೋ ನಮ್ಮ ತೆರಿಗೆ ಹಣ ಹೀಗೆಲ್ಲ ವ್ಯಯವಾಗುತ್ತಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ದರ್ಪ ತೋರಿಸುವ ಸಲುವಾಗಿಯೇ ವಿವೇಕ್ ಅಗ್ನಿಹೋತ್ರಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.
ಇದನ್ನೂ ಓದಿ: Vivek Agnihotri: ಹೆಡ್ಲೈನ್ ಓದಿ ಯಾಮಾರಿದ ವಿವೇಕ್ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇ ಬೇರೆ
‘ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡ ತೋರಿಸಿದ್ದಕ್ಕಾಗಿ ತೆರೆಬೇಕಾದ ಬೆಲೆ ಇದು. ಹಿಂದೂಗಳು ಬಹುಸಂಖ್ಯೆಯಲ್ಲಿ ಇರುವ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ! ನನ್ನದೇ ದೇಶದಲ್ಲಿ ಬಂಧಿ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ವಿವೇಕ್ ಅಗ್ನಿಹೋತ್ರಿ ಅವರು ಒಂದಿಲ್ಲೊಂದು ವಿಚಾರಕ್ಕೆ ಚರ್ಚೆ ಆಗುತ್ತಿದ್ದಾರೆ.
The price one has to pay to show the Genocide of Hindus in Kashmir. In a Hindu majority country.
Freedom of expression, ha! #ImprisonedInOwnCountry #Fatwa pic.twitter.com/9AZUdbTyca— Vivek Ranjan Agnihotri (@vivekagnihotri) December 23, 2022
‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಭಾರಿ ಯಶಸ್ಸಿನ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು ಕೈಗೆತ್ತಿಕೊಂಡಿರುವ ಹೊಸ ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ಹೆಸರು ಇಡಲಾಗಿದೆ. 2020ರಲ್ಲಿ ಕೊರೊನಾ ವೈರಸ್ ಹಾವಳಿ ಎದುರಾದಾಗ ಅದರ ವಿರುದ್ಧ ಭಾರತ ಹೇಗೆ ಹೋರಾಟ ನಡೆಸಿತು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲು ವಿವೇಕ್ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ: Vivek Agnihotri: ಶಾರುಖ್ ನಟನೆಯ ‘ಬೇಷರಂ ರಂಗ್’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ
ವ್ಯಾಕ್ಸಿನ್ ಕುರಿತು ಮಾಡಲು ಹೊರಟಿರುವ ಈ ಚಿತ್ರವು ಮೋದಿ ಸರ್ಕಾರವನ್ನು ಹೊಗಳುವ ಪ್ರಚಾರದ ಸಿನಿಮಾ ಆಗಲಿದೆ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಈ ಚಿತ್ರವನ್ನು ಮಾಡಲಾಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Fri, 23 December 22