
ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಹಿಂದಿ ಚಿತ್ರರಂಗದ ಸ್ಟಾರ್ ನಟರುಗಳಿಗೆ ಸಿನಿಮಾ ಮಾಡುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಅವರುಗಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ದಕ್ಷಿಣದ ನಿರ್ದೇಶಕರು ಸಿನಿಮಾ ಮಾಡಿದ್ದು ಮಾತ್ರವಲ್ಲದೆ ಹಿಟ್ ಸಹ ನೀಡಿದ್ದಾರೆ. ಆದರೆ ಹೀಗೆ ಬಾಲಿವುಡ್ಗೆ ಹೋದ ದಕ್ಷಿಣದ ಸಿನಿಮಾ ನಿರ್ದೇಶಕರು ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಸೇರಿದವರೇ ಆಗಿದ್ದರು. ಇದೀಗ ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ಬಾಲಿವುಡ್ನ ಸ್ಟಾರ್ ಯುವನಟನಿಗಾಗಿ ಸಿನಿಮಾ ಮಾಡಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿ ಸಖತ್ ಗಮನ ಸೆಳೆಯುತ್ತಿದೆ.
‘ಗೆಳೆಯ’, ‘ಬಿರುಗಾಳಿ’, ‘ಚಿಂಗಾರಿ’, ‘ಭಜರಂಗಿ’, ‘ಅಂಜನಿ ಪುತ್ರ’, ‘ಭಜರಂಗಿ 2’, ‘ವೇದ’ ಸೇರಿದಂತೆ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ಎ ಹರ್ಷ ಇದೀಗ ಬಾಲಿವುಡ್ಗೆ ಎಂಟ್ರಿ ನೀಡಿದ್ದಾರೆ. ಗೋಪಿಚಂದ್ ನಟನೆಯ ‘ಭೀಮ’ ಸಿನಿಮಾ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಎ ಹರ್ಷ ಅವರು ಈಗ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು, ಅಲ್ಲಿನ ಸ್ಟಾರ್ ಯುವ ನಟರಾಗಿರುವ ಟೈಗರ ಶ್ರಾಫ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಟೈಗರ್ ಶ್ರಾಫ್ ನಟಿಸುತ್ತಾ ಬಂದಿರುವ ‘ಭಾಗಿ’ ಸಿನಿಮಾ ಸರಣಿಯ ನಾಲ್ಕನೇ ಸಿನಿಮಾ ಅನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಹಿಂದಿನ ಎರಡು ‘ಭಾಗಿ’ ಸಿನಿಮಾಗಳು ಮೈಂಡ್ಲೆಸ್ ಆಕ್ಷನ್ ಸಿನಿಮಾಗಳಾಗಿದ್ದವು. ಆದರೆ ಎ ಹರ್ಷ ಅವರು ‘ಭಾಗಿ 4’ ಸಿನಿಮಾನಲ್ಲಿ ಭರ್ಜರಿ ಆಕ್ಷನ್ ಜೊತೆಗೆ ಒಂದು ಥ್ರಿಲ್ಲರ್ ಕತೆಯನ್ನು ಸಹ ಕಟ್ಟಿರುವುದು ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಇದನ್ನೂ ಓದಿ:ಟೈಗರ್ ಶ್ರಾಫ್ಗೆ ಸಿನಿಮಾ ನಿರ್ದೇಶಿಸಲಿರುವ ಕನ್ನಡದ ನಿರ್ದೇಶಕ
‘ಭಾಗಿ 4’ ಸಿನಿಮಾನಲ್ಲಿ ಟೈಗರ್ ಶ್ರಾಫ್ ಪ್ರೇಯಸಿಯಿಂದ ದೂರಾಗಿ ದೇವದಾಸ್ ಆಗಿರುವ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ನಿಂದ ತಿಳಿದು ಬರುತ್ತಿರುವುದೇನೆಂದರೆ ಟೈಗರ್ ಶ್ರಾಫ್ ಪ್ರೇಯಸಿ ನಿಧನ ಹೊಂದಿದ್ದಾಳೆ ಆದರೆ ಆಕೆಯ ನೆನಪು ಟೈಗರ್ಗೆ ಕಾಡುತ್ತಿದೆ. ಆದರೆ ಟೈಗರ್ ಪಾತ್ರದ ಹತ್ತಿರದವರು ಹೇಳುತ್ತಿರುವಂತೆ ಆತನಿಗೆ ಪ್ರೇಯಸಿಯೇ ಇಲ್ಲ, ಆಕೆಯ ಸಮಾಧಿಯೂ ಎಲ್ಲೂ ಇಲ್ಲ. ಅಸಲಿಗೆ ನಿಜವೇನು? ಟೈಗರ್ ಗರ್ಲ್ಫ್ರೆಂಡ್ ನಿಜಕ್ಕೂ ಇದ್ದಾಳಾ? ಅಥವಾ ಟೈಗರ್ ಸುತ್ತ ಇರುವವರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಕತೆ.
‘ಭಾಗಿ 4’ ಸಿನಿಮಾನಲ್ಲಿ ಟೈಗರ್ ಶ್ರಾಫ್ ಎದುರು ವಿಲನ್ ಆಗಿ ಸಂಜಯ್ ದತ್ ಅಬ್ಬರಿಸುತ್ತಿದ್ದಾರೆ. ಸಿನಿಮಾನಲ್ಲಿ ಹರ್ನಾಜ್ ಸಂಧು ಮತ್ತು ಸೋನಮ್ ಭಾಜ್ವಾ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಕಾಂತ್ ತಲಪಡೆ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿದ್ದಾರೆ. ಸಾಜಿದ್ ನಾಡಿಯಾವಾಲ ಅವರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ