ನಟಿ ತೃಪ್ತಿ ದಿಮ್ರಿ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿದ್ದೇ ‘ಅನಿಮಲ್’ ಸಿನಿಮಾ ಮೂಲಕ. ಅದಕ್ಕೂ ಮುನ್ನ ‘ಬುಲ್ ಬುಲ್’, ‘ಕಲಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರೂ ಕೂಡ ಭಾರಿ ಜನಪ್ರಿಯತೆ ಸಿಕ್ಕಿರಲಿಲ್ಲ. ಆದರೆ ‘ಅನಿಮಲ್’ ಸಿನಿಮಾದಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಆದರೆ ಈ ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ವಿಮರ್ಶಕರು ತಕರಾರು ತೆಗೆದಿದ್ದರು. ಇದನ್ನು ಮಹಿಳಾ ವಿರೋಧಿ ಸಿನಿಮಾ ಎಂದು ಕೂಡ ಹೇಳಲಾಗಿತ್ತು. ಆದರೆ ಈ ಮಾತುಗಳಿಗೆ ತೃಪ್ತಿ ದಿಮ್ರಿ ಅವರು ಸಹಮತ ಸೂಚಿಸಿಲ್ಲ.
ಫಿಲ್ಮ್ಫೇರ್ಗೆ ತೃಪ್ತಿ ದಿಮ್ರಿ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರಿಗೆ ಒಂದು ಮುಖ್ಯವಾದ ಪ್ರಶ್ನೆ ಎದುರಾಗಿದೆ. ‘ಕಲಾ ರೀತಿಯ ಮಹಿಳಾ ಪ್ರಧಾನ ಸಿನಿಮಾ ಮಾಡಿದ ಬಳಿಕ ಅನಿಮಲ್ ರೀತಿಯ ಮಹಿಳಾ ವಿರೋಧಿ ಸಿನಿಮಾವನ್ನು ನೀವು ಒಪ್ಪಿಕೊಂಡಿದ್ದು ಯಾಕೆ’ ಎಂಬುದು ಪ್ರಶ್ನೆ. ಅದಕ್ಕೆ ತಮ್ಮದೇ ರೀತಿಯಲ್ಲಿ ತೃಪ್ತಿ ದಿಮ್ರಿ ಅವರು ಉತ್ತರ ನೀಡಿದ್ದಾರೆ.
‘ನಾವು ಯಾವುದೇ ಸಿನಿಮಾವನ್ನು ಸ್ತ್ರೀ ವಿರೋಧಿ ಎಂಬ ರೀತಿಯಲ್ಲಿ ನೋಡುವುದಿಲ್ಲ. ಸಿನಿಮಾಗಳಿಗೆ ನಾನು ಅಂತಹ ಹಣೆಪಟ್ಟಿ ನೀಡುವುದಿಲ್ಲ. ಬುಲ್ ಬುಲ್ ಮತ್ತು ಕಲಾ ಸಿನಿಮಾವನ್ನು ಮಾಡುವಾಗ ನಾನು ಸ್ತ್ರೀವಾದಿ ಸಿನಿಮಾ ಮಾಡುತ್ತಿದ್ದೇನೆ ಅಂತ ಯೋಚಿಸಿರಲಿಲ್ಲ. ನಾನು ಪಾತ್ರಗಳ ಜೊತೆ ಕನೆಕ್ಟ್ ಆಗುತ್ತೇನೆ. ನಿರ್ದೇಶಕರ ಮೇಲೆ ನಂಬಿಕೆ ಇಡುತ್ತೇನೆ. ಆ ಸಿನಿಮಾ ಮಾಡಬೇಕು ಅಂತ ನನಗೆ ಅನಿಸಬೇಕು ಅಷ್ಟೇ’ ಎಂದು ತೃಪ್ತಿ ದಿಮ್ರಿ ಹೇಳಿದ್ದಾರೆ.
‘ನನಗೆ ಅನಿಮಲ್ ಸಿನಿಮಾದ ಆಫರ್ ಬಂದಾಗ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ನನ್ನನ್ನು ಭೇಟಿಯಾಗಿ ಕಥೆ ವಿವರಿಸಿದರು. ಅವರು ಕಥೆಯ ಬಗ್ಗೆ ನನಗೆ ಹೆಚ್ಚೇನೂ ಹೇಳಿರಲಿಲ್ಲ. ನನ್ನ ಪಾತ್ರವನ್ನು ವಿವರಿಸಿದರು. ನನಗೆ ಇಷ್ಟ ಆಗಿದ್ದು ಏನೆಂದರೆ, ಈವರೆಗೂ ನಾನು ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ಕಥೆಯ ಅಂತ್ಯದಲ್ಲಿ ಆ ಪಾತ್ರಗಳಿಗೆ ಪ್ರೇಕ್ಷಕರು ಕರುಣೆ ತೋರುತ್ತಾರೆ. ಆದರೆ ಈಗ ಮಾಡಬೇಕಿರುವುದು ಬೇರೆ ಆಗಿತ್ತು’ ಎಂದಿದ್ದಾರೆ ತೃಪ್ತಿ ದಿಮ್ರಿ.
ಇದನ್ನೂ ಓದಿ: ‘ಅನಿಮಲ್ ಸಿನಿಮಾ ಮಾಡಿದವರು ವಿಕೃತ ಮನಸ್ಸಿನವರು’: ಜಾವೇದ್ ಅಖ್ತರ್
‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಅನೇಕ ದೃಶ್ಯಗಳಿಗೆ ಕೆಲವರಿಂದ ಖಂಡನೆ ವ್ಯಕ್ತವಾಯಿತು. ಮಹಿಳೆಯರಿಗೆ ಅವಹೇಳನ ಆಗುವಂತಹ ದೃಶ್ಯಗಳು ಇವೆ ಎಂದು ಟೀಕಿಸಲಾಯಿತು. ಜಾವೇದ್ ಅಖ್ತರ್ ಅವರಂತಹ ಹಿರಿಯರು ಈ ಸಿನಿಮಾವನ್ನು ಖಂಡಿಸಿದರು. ಇಂಥ ಕೆಲವು ಕಾರಣಗಳಿಂದಾಗಿ ‘ಅನಿಮಲ್’ ಸಿನಿಮಾ ಸುದ್ದಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.