ಮುಂಬೈ: ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು (ಅಕ್ಟೋಬರ್ 27) ಮುಂದುವರೆಸಲಿದೆ. ಮಧ್ಯಾಹ್ನ 2.30ಕ್ಕೆ ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ ನಿನ್ನೆ ಸೆಷನ್ಸ್ ಕೋರ್ಟ್ನಿಂದ ಜಾಮೀನು ಮಂಜೂರಾಗಿದೆ. ಹೀಗಾಗಿ ಅದೇ ಮಾನದಂಡದಲ್ಲಿ ಆರ್ಯನ್ ಖಾನ್ಗೂ ಜಾಮೀನು ನೀಡಲು ವಕೀಲರು ಕೋರ್ಟ್ಗೆ ಮನವಿ ಮಾಡುವ ಸಾಧ್ಯತೆ ಇದೆ.
ನಿನ್ನೆ ನಡೆದ ವಿಚಾರಣೆಯಲ್ಲಿ ಆರ್ಯನ್ ಪರ ವಾದ ಮಾಡಿರುವ ವಕೀಲರಾದ ಮುಕುಲ್ ರೋಹಟಗಿ, ಆರ್ಯನ್ ಖಾನ್ ನಿಂದ ಡ್ರಗ್ಸ್ ವಶಪಡಿಸಿಕೊಂಡಿಲ್ಲ. ಆರ್ಯನ್ ಖಾನ್ಗೆ ಡ್ರಗ್ಸ್ ಸೇವನೆ ಬಗ್ಗೆ ವೈದ್ಯಕೀಯ ಪರೀಕ್ಷೆಯನ್ನೇ ನಡೆಸಿಲ್ಲ. ಬೇರೆಯವರ ಬಳಿ ಡ್ರಗ್ಸ್ ಇದ್ದರೆ ಅದಕ್ಕೆ ಆರ್ಯನ್ ಖಾನ್ ಹೊಣೆಯಲ್ಲ. ಆರ್ಯನ್ ಖಾನ್, ವಾಟ್ಸಾಪ್ ಚಾಟ್ಗೂ ಈ ಕೇಸ್ಗೂ ಸಂಬಂಧ ಇಲ್ಲ. ಆರ್ಯನ್ ಖಾನ್ ಬಂಧನವೇ ಆಕ್ರಮ ಎಂದು ವಾದ ಮಂಡಿಸಿದ್ದರು. ಇಂದು ಎನ್ಸಿಬಿ ಪರ ಎಎಸ್ಜಿ ಅನಿಲ್ ಸಿಂಗ್ ವಾದಮಂಡನೆ ಮಾಡಲಿದ್ದಾರೆ. ವಾದ ಪ್ರತಿವಾದ ಇಂದು ಮುಕ್ತಾಯವಾಗುವ ನಿರೀಕ್ಷೆ ಇದ್ದು, ಬಳಿಕ ಜಾಮೀನು ಅರ್ಜಿಯ ಬಗ್ಗೆ ಬಾಂಬೆ ಹೈಕೋರ್ಟ್ ಆದೇಶ ನೀಡಲಿದೆ.
ಈ ಮೊದಲು ಎರಡು ಬಾರಿ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿತ್ತು. ಅಕ್ಟೋಬರ್ 2ರಂದು ಕ್ರೋಸ್ ಶಿಪ್ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಸದ್ಯ ಆರ್ಯನ್ ಖಾನ್ ಆರ್ಥರ್ ರೋಡ್ ಜೈಲಿನಲ್ಲಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನದ ಅವಧಿ ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿದೆ.
ಎನ್ಸಿಬಿ ಅಧಿಕಾರಿಗಳಿಂದ ಸಮೀರ್ ವಾಂಖೆಡೆ ವಿಚಾರಣೆ:
ಸಮೀರ್ ವಾಂಖೆಡೆ ವಿರುದ್ಧ ಲಂಚ ವಸೂಲಿ ಆರೋಪ ಪ್ರಕರಣಕ್ಕೆ ಸಂಬಂದಪಟ್ಟಂತೆ ಇಂದು ಎನ್ಸಿಬಿ ಅಧಿಕಾರಿಗಳಿಂದ ಸಮೀರ್ ವಾಂಖೆಡೆ ವಿಚಾರಣೆ ನಡೆಯಲಿದೆ. ಡೆಪ್ಯುಟಿ ಡೈರೆಕ್ಟರ್ ಜನರಲ್ ಜ್ಞಾನೇಂದ್ರ ಸಿಂಗ್ ನೇತೃತ್ವದಲ್ಲಿ ಐವರು ಎನ್ಸಿಬಿ ಅಧಿಕಾರಿಗಳಿಂದ ವಿಚಾರಣೆ ನಡೆಯಲಿದೆ. ಕೆ.ಪಿ ಗೋಸಾವಿ ಹಾಗೂ ಪ್ರಭಾಕರ್ ಸೈಲ್ ಅವರನ್ನೂ ಕೂಡ ಎನ್ಸಿಬಿ ತಂಡ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ:
Aryan Khan: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್; ಮುಂದಿನ ವಿಚಾರಣೆ ಯಾವಾಗ?