ಶ್ರೇಯಾ ಘೋಷಾಲ್​ಗೂ ಅನುಮತಿ ಇಲ್ಲದೇ ಕಿಸ್ ಮಾಡಿದ್ದ ಉದಿತ್ ನಾರಾಯಣ್; ವಿಡಿಯೋ ಸಾಕ್ಷಿ

ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಅನಗತ್ಯವಾಗಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರ ತುಟಿಗೆ ಬಲವಂತವಾಗಿ ಮುತ್ತು ಕೊಡುವ ಮೂಲಕ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಉದಿತ್ ನಾರಾಯಣ್ ಇಂಥ ವರ್ತನೆ ತೋರಿಸಿದ್ದು ಇದೇ ಮೊದಲೇನಲ್ಲ. ಶ್ರೇಯಾ ಘೋಷಾಲ್​, ಅಲ್ಕಾ ಯಾಗ್ನಿಕ್ ಅವರಂತಹ ಗಾಯಕಿಯರಿಗೂ ಉದಿತ್ ಕಿಸ್ ಮಾಡಿದ್ದರು.

ಶ್ರೇಯಾ ಘೋಷಾಲ್​ಗೂ ಅನುಮತಿ ಇಲ್ಲದೇ ಕಿಸ್ ಮಾಡಿದ್ದ ಉದಿತ್ ನಾರಾಯಣ್; ವಿಡಿಯೋ ಸಾಕ್ಷಿ
Udit Narayan, Shreya Ghoshal, Alka Yagnik

Updated on: Feb 02, 2025 | 3:31 PM

ಬಹುಭಾಷೆಯ ಸಿನಿಮಾಗಳಲ್ಲಿ ಹಾಡುವ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಉದಿತ್ ನಾರಾಯಣ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಆದರೆ ಅಂಥ ಅಭಿಮಾನಿಗಳಿಗೆಲ್ಲ ಮುಜುಗರ ಎನಿಸುವಂತಹ ಕೆಲಸವನ್ನು ಉದಿತ್ ನಾರಾಯಣ್ ಮಾಡಿದ್ದಾರೆ. ವೇದಿಕೆಯಲ್ಲಿ ಹಾಡು ಹೇಳುತ್ತಿರುವಾಗ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾಭಿಮಾನಿಯ ಜೊತೆ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಭಿಮಾನಿಯ ತುಟಿಗೆ ಉದಿತ್ ನಾರಾಯಣ್ ಕಿಸ್ ಮಾಡಿದ್ದಾರೆ. ಅದಕ್ಕೆ ಜನರಿಂದ ಖಂಡನೆ ವ್ಯಕ್ತವಾಗಿದೆ. ಅದರ ಜೊತೆಗೆ ಉದಿತ್ ನಾರಾಯಣ್ ಅವರ ಇಂತಹ ಕೆಲವು ಹಳೆಯ ವಿಡಿಯೋಗಳು ಕೂಡ ಈಗ ಮತ್ತೆ ವೈರಲ್ ಆಗುತ್ತಿವೆ.

ಅನುಮತಿ ಇಲ್ಲದೆಯೇ ಹೆಣ್ಮಕ್ಕಳಿಗೆ ಮುತ್ತು ನೀಡುವುದು ಉದಿತ್ ನಾರಾಯಣ್ ಅವರ ಹಳೆಯ ಚಾಳಿ. ಈ ಹಿಂದೆ ಅವರು ವೇದಿಕೆ ಕಾರ್ಯಕ್ರಮಗಳಲ್ಲಿ ಖ್ಯಾತ ಗಾಯಕಿಯರಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್ ಮುಂತಾದವರಿಗೆ ಕಿಸ್ ಮಾಡಿದ್ದರು. ಆಗ ಆ ಗಾಯಕಿಯರು ಮುಜುಗರಪಟ್ಟುಕೊಂಡಿದ್ದರು. ಆದರೆ ಹಿರಿಯ ಗಾಯಕ ಎಂಬ ಕಾರಣಕ್ಕೆ ಏನೂ ಹೇಳಲಾಗದೇ ಸುಮ್ಮನಾಗಿದ್ದರು.

ಇದನ್ನೂ ಓದಿ: ಅಭಿಮಾನಿಗೆ ಲಿಪ್​ಲಾಕ್ ಮಾಡಿ ‘ನಾನಂಥವನಲ್ಲ’ ಎಂದ ಖ್ಯಾತ ಗಾಯಕ

ನೆಟ್ಟಿಗರು ಈ ವಿಡಿಯೋಗಳನ್ನು ಈಗ ಹುಡುಕಿ ತಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವು ವೈರಲ್ ಆಗುತ್ತಿವೆ. ‘ಇಂಡಿಯನ್ ಐಡಲ್’ ರಿಯಾಲಿಟಿ ಶೋ ವೇದಿಕೆಯಲ್ಲಿ ಅಲ್ಕಾ ಯಾಗ್ನಿಕ್ ಅವರು ಹಾಡುತ್ತಿದ್ದರು. ಅವರ ಬಳಿಗೆ ಹೋದ ಉದಿತ್ ನಾರಾಯಣ್ ಅವರು ಕೆನ್ನೆಗೆ ಮುತ್ತು ನೀಡಿದ್ದರು. ಅದರಿಂದ ಅಲ್ಕಾ ಯಾಗ್ನಿಕ್ ಅವರಿಗೆ ಕಿರಿಕಿರಿ ಆಗಿತ್ತು. ಇನ್ನೊಂದು ಬಾರಿ ಕೂಡ ಇದೇ ರೀತಿ ಆಗಿತ್ತು.

‘ಜಬ್ ತಕ್ ಹೈ ಜಾನ್’ ಸಿನಿಮಾದ ಹಾಡಿಗೆ ಶ್ರೇಯಾ ಘೋಷಾಲ್ ಅವರಿಗೆ ‘ಅತ್ಯುತ್ತಮ ಗಾಯಕಿ’ ಪ್ರಶಸ್ತಿ ಬಂದಿತ್ತು. ಅದನ್ನು ಸ್ವೀಕರಿಸಲು ವೇದಿಕೆಗೆ ಬಂದಾಗ ಅವರಿಗೆ ಉದಿತ್ ನಾರಾಯಣ್ ಕಿಸ್ ಮಾಡಿದ್ದರು. ಆ ಕ್ಷಣದಲ್ಲಿ ಶ್ರೇಯಾ ಘೋಷಾಲ್ ಅವರಿಗೆ ತುಂಬ ಶಾಕ್ ಆಗಿತ್ತು.

‘ಈ ಮನುಷ್ಯ ವೇದಿಕೆ ಮೇಲೆ ಕಿಸ್​ ಮಾಡಿದಷ್ಟು ನಾನು ನನ್ನ ಇಡೀ ಜೀವನದಲ್ಲಿ ಮಾಡಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಇದು ನಿಜಕ್ಕೂ ಅಸಹ್ಯಕರ ವರ್ತನೆ’ ಎಂದು ಕೂಡ ಜನರು ಚಾಟಿ ಬೀಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.