ಅಭಿಮಾನಿಗೆ ಲಿಪ್ಲಾಕ್ ಮಾಡಿ ‘ನಾನಂಥವನಲ್ಲ’ ಎಂದ ಖ್ಯಾತ ಗಾಯಕ
Udit Narayan: ಬಾಲಿವುಡ್ ಮಾತ್ರವೇ ಅಲ್ಲದೆ ಸುಮಾರು 13 ಭಾಷೆಗಳ ಸಿನಿಮಾಗಳಲ್ಲಿ ಹಾಡು ಹಾಡಿರುವ ಉದಿತ್ ನಾರಾಯಣ್ ಅವರು ಭಾರತೀಯ ಚಿತ್ರರಂಗದ ಹಿರಿಯ ಮತ್ತು ಗೌರವಾನ್ವಿತ ಗಾಯಕರು. ಆದರೆ ಇತ್ತೀಚೆಗೆ ಅವರು ಅಭಿಮಾನಿಗಳೊಟ್ಟಿಗೆ ನಡೆದುಕೊಂಡಿರುವ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ಗಾಯಕ.

ಉದಿತ್ ನಾರಾಯಣ್ ಭಾರತದ ಖ್ಯಾತ ಗಾಯಕ. ದಶಕಗಳಿಂದಲೂ ಭಾರತೀಯ ಚಿತ್ರರಂಗದ ಮೇರು ಗಾಯಕ ಎನಿಸಿಕೊಂಡಿದ್ದಾರೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಬಳಿಕ ಚಿತ್ರರಂಗದ ಹಿರಿಯ ಮತ್ತು ಗೌರವಾನ್ವಿತ ಗಾಯಕ ಎನಿಸಿಕೊಂಡಿರುವವರು, ಆದರೆ ಇತ್ತೀಚೆಗೆ ನಡೆದಿರುವ ಘಟನೆಯೊಂದು ಅವರ ಇಷ್ಟು ವರ್ಷದ ಗೌರವವನ್ನು ಮಣ್ಣುಪಾಲು ಮಾಡುತ್ತಿದೆ. ಇದೀಗ ಆ ಕೆಟ್ಟ ಘಟನೆ ಬಗ್ಗೆ ಸ್ವತಃ ಉದಿತ್ ನಾರಾಯಣ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಉದಿತ್ ನಾರಾಯಣ್ ಅವರು ಇತ್ತೀಚೆಗಷ್ಟೆ ಲೈವ್ ಕಾನ್ಸರ್ಟ್ ಒಂದನ್ನು ನಡೆಸಿಕೊಟ್ಟರು. ಕಾನ್ಸರ್ಟ್ ವೇಳೆ ವೇದಿಕೆ ಬಳಿ ಇದ್ದ ಯುವತಿಯೊಬ್ಬಾಕೆ ಹಿರಿಯ ಗಾಯಕನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು ಉದಿತ್ ನಾರಾಯಣ್ ಸಹ ವೇದಿಕೆ ಮೇಲೆ ಕುಳಿತುಕೊಂಡೆ ಅಭಿಮಾನಿಗೆ ಸೆಲ್ಫಿ ನೀಡಿದರು. ಆದರೆ ಆ ವೇಳೆ ಮಹಿಳಾ ಅಭಿಮಾನಿ ಉದಿತ್ ನಾರಾಯಣ್ ಅವರ ಕೆನ್ನೆಗೆ ಮುತ್ತು ಕೊಟ್ಟಳು. ಕೂಡಲೇ ಉದಿತ್ ನಾರಾಯಣ್, ಆ ಮಹಿಳಾ ಅಭಿಮಾನಿಯನ್ನು ಹಿಡಿದು ಎಳೆದುಕೊಂಡು ತುಟಿಗೆ ತುಟಿ ಒತ್ತಿ ಮುತ್ತು ಕೊಟ್ಟೇ ಬಿಟ್ಟರು.
ಉದಿತ್ ನಾರಾಯಣ್, ಮಹಿಳಾ ಅಭಿಮಾನಿಗೆ ಮುತ್ತು ಕೊಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರಂತೂ ವಿಡಿಯೋ ಬಗ್ಗೆ ಭಿನ್ನ ಭಿನ್ನ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಇಷ್ಟು ವರ್ಷಗಳಿಂದ ಸಂಪಾದಿಸಿಕೊಂಡು, ಕಾಪಾಡಿಕೊಂಡು ಬಂದಿದ್ದ ಗೌರವವನ್ನು ಉದಿತ್ ನಾರಾಯಣ್ ಒಂದೇ ಸೆಕೆಂಡ್ನಲ್ಲಿ ಮಣ್ಣುಪಾಲು ಮಾಡಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು, ‘ವಯಸ್ಸಾದಂತೆ ಉದಿತ್ ನಾರಾಯಣ್ಗೆ ಚಪಲ ಹೆಚ್ಚಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಉದಿತ್ ನಾರಾಯಣ್ ಅವರು ವಿಪರೀತ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ:ಖ್ಯಾತ ಗಾಯಕಿ ಜೊತೆ ಮೊಹಮ್ಮದ್ ಸಿರಾಜ್ ಪಾರ್ಟಿ: ಫೋಟೋ ವೈರಲ್ ಬಳಿಕ ಸ್ಪಷ್ಟನೆ
ಘಟನೆ ಬಗ್ಗೆ ಉದಿತ್ ನಾರಾಯಣ್ ಇದೀಗ ಮಾತನಾಡಿದ್ದಾರೆ, ‘ನಾವು ಆ ರೀತಿಯ ಜನ, ಡೀಸೆಂಟ್ ವ್ಯಕ್ತಿತ್ವ ಉಳ್ಳ ಜನ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಒಬ್ಬೊಬ್ಬ ಅಭಿಮಾನಿಗಳು ಒಂದೊಂದು ರೀತಿ ಪ್ರೀತಿ ವ್ಯಕ್ತಪಡಿಸುತ್ತಾರೆ. ಅಭಿಮಾನಿ ವ್ಯಕ್ತಪಡಿಸಿದ ಪ್ರೀತಿಗೆ ನಾನು ಪ್ರತಿಕ್ರಿಯಿಸಿದೆನೇ ವಿನಃ ಉದ್ದೇಶಪೂರ್ವಕಾಗಿ ಮಾಡಿದ್ದಲ್ಲ, ಇಂಥಹಾ ವಿಷಯಗಳಿಗೆ ಯಾರೂ ಹೆಚ್ಚು ಗಮನ ಹರಿಸಬಾರದು’ ಎಂದಿದ್ದಾರೆ.
ಕಳೆದ 46 ವರ್ಷಗಳಿಂದಲೂ ಉದಿತ್ ನಾರಾಯಣ್ ಸಿನಿಮಾ ಹಾಡುಗಳನ್ನು ಹಾಡುತ್ತಾ ಬಂದಿದ್ದಾರೆ. ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ಉದಿತ್ ನಾರಾಯಣ್ ನೀಡಿದ್ದಾರೆ. ಹಿಂದಿ ಮಾತ್ರವೇ ಅಲ್ಲದೆ ಕನ್ನಡ ಸೇರಿದಂತೆ ಸುಮಾರು 12 ಭಾಷೆಗಳ ಸಿನಿಮಾಗಳಲ್ಲಿ ಉದಿತ್ ನಾರಾಯಣ್ ಹಾಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಉದಿತ್ ನಾರಾಯಣ್ ಈ ವರೆಗೆ ರೆಕಾರ್ಡ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ