ಪಾಕಿಸ್ತಾನದಲ್ಲೂ ‘ಬಾರ್ಡರ್ 2’ ಸಿನಿಮಾ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯ

‘ಧುರಂಧರ್’ ಯಶಸ್ಸಿನ ಬಳಿಕ ‘ಬಾರ್ಡರ್ 2’ ಸಿನಿಮಾ ಕೂಡ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ನಟಿಸಿರುವ ವರುಣ್ ಧವನ್ ಅವರು ‘ಎಕ್ಸ್’ ಖಾತೆ ಮೂಲಕ ಫ್ಯಾನ್ಸ್ ಜೊತೆ ಸಂವಾದ ಮಾಡಿದ್ದಾರೆ. ಪಾಕಿಸ್ತಾನದಿಂದಲೂ ಅಭಿಮಾನಿಗಳು ವರುಣ್ ಧವನ್​​ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ವರಣ್ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದಲ್ಲೂ ‘ಬಾರ್ಡರ್ 2’ ಸಿನಿಮಾ ರಿಲೀಸ್ ಮಾಡುವಂತೆ ಫ್ಯಾನ್ಸ್ ಒತ್ತಾಯ
Border 2 Movie Poster

Updated on: Jan 06, 2026 | 9:13 PM

ಭಾರತ ಮತ್ತು ಪಾಕಿಸ್ತಾನದ ನಡುವೆ ವಾತಾವರಣ ಸರಿಯಿಲ್ಲ. ಪಾಕ್ (Pakistan) ನಡೆಸಿದ ಭಯೋತ್ಪಾದಕ ದಾಳಿಗಳ ಬಳಿಕ ಆ ದೇಶದ ಜೊತೆ ಭಾರತ ಬಹುತೇಕ ವ್ಯವಹಾರಗಳನ್ನು ಕಡಿತಗೊಳಿಸಿಕೊಂಡಿದೆ. ಭಾರತೀಯ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುವುದಿಲ್ಲ. ಅದೇ ರೀತಿ, ಅಲ್ಲಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಿತ್ರರಂಗದಲ್ಲಿ ಅವಕಾಶ ನಿರಾಕರಿಸಲಾಗಿದೆ. ಹಾಗಿದ್ದರೂ ಕೂಡ ‘ಬಾರ್ಡರ್ 2’ (Border 2) ಸಿನಿಮಾವನ್ನು ಪಾಕಿಸ್ತಾನದಲ್ಲಿ ರಿಲೀಸ್ ಮಾಡುವಂತೆ ಅಲ್ಲಿನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್ (Varun Dhawan), ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ಅನುರಾಗ್ ಸಿಂಗ್ ಅವರು ‘ಬಾರ್ಡರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 1971ರಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಯುದ್ಧದ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಆದ್ದರಿಂದ ಸಹಜವಾಗಿಯೇ ಪಾಕ್ ಮಂದಿಗೂ ಈ ಸಿನಿಮಾ ಮೇಲೆ ಕುತೂಹಲ ಇದೆ. ಭಾರತದಲ್ಲಿ ಹಾಗೂ ಇತರೆ ದೇಶಗಳಲ್ಲಿ ಈ ಸಿನಿಮಾ ಜನವರಿ 23ರಂದು ತೆರೆಕಾಣಲಿದೆ.

ಪಾಕಿಸ್ತಾನದಲ್ಲಿ ‘ಬಾರ್ಡರ್ 2’ ಬಿಡುಗಡೆ ಆಗುವುದಿಲ್ಲ. ಹಾಗಿದ್ದರೂ ಕೂಡ ಅಲ್ಲಿ ಇರುವ ವರುಣ್ ಧವನ್ ಅಭಿಮಾನಿಯೊಬ್ಬ ಸೋಶಿಯಲ್ ಮೀಡಿಯಾ ಮೂಲಕ ಈ ಬಗ್ಗೆ ವಿಚಾರಿಸಿದ್ದಾನೆ. ‘ಅಣ್ಣ.. ನಿಮ್ಮ ಸಿನಿಮಾ ಪಾಕಿಸ್ತಾನದಲ್ಲಿ ಯಾವಾಗ ಬಿಡುಗಡೆ ಆಗುತ್ತದೆ? ನಾನು ಸನ್ನಿ ಡಿಯೋಲ್ ಅಭಿಮಾನಿ. ಅವರಿಗೆ ನನ್ನ ಸಲಾಂ ತಿಳಿಸಿ’ ಎಂದು ಹೇಳಿದ್ದಾರೆ.

ಅದಕ್ಕೆ ವರುಣ್ ಧವನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘1971ರ ಯುದ್ಧ ಮತ್ತು ಅದರ ಸುತ್ತಮುತ್ತ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಸನ್ನಿ ಸರ್ ಅವರಿಗೆ ಪಾಕಿಸ್ತಾನದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳು ಇದ್ದಾರೆ ಎಂಬುದು ನನಗೆ ಖಂಡಿತವಾಗಿ ತಿಳಿದಿದೆ’ ಎಂದು ವರುನ್ ಧವನ್ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ರಿಲೀಸ್ ಆಯ್ತು ‘ಬಾರ್ಡರ್ 2’ ಸಿನಿಮಾ ಟೀಸರ್

1997ರಲ್ಲಿ ‘ಬಾರ್ಡರ್’ ಸಿನಿಮಾ ತೆರೆಕಂಡಿತ್ತು. ಅದರ ಸೀಕ್ವೆಲ್ ‘ಬಾರ್ಡರ್ 2’ ಈಗ ಬಿಡುಗಡೆ ಸಜ್ಜಾಗಿದೆ. ಸನ್ನಿ ಡಿಯೋಲ್, ಅಹಾನ್ ಶೆಟ್ಟಿ, ವರುಣ್ ಧವನ್, ದಿಲ್ಜಿತ್ ದೋಸಾಂಜ್, ಮೋನಾ ಸಿಂಗ್, ಸೋನಂ ಭಾಜ್ವ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸುನೀಲ್ ಶೆಟ್ಟಿ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.