‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ರಿಲೀಸ್ ಆಯ್ತು ‘ಬಾರ್ಡರ್ 2’ ಸಿನಿಮಾ ಟೀಸರ್
Border 2 Teaser: 1997ರಲ್ಲಿ ತೆರೆಕಂಡ ‘ಬಾರ್ಡರ್’ ಸಿನಿಮಾದ ಸೀಕ್ವೆಲ್ ಆಗಿ ‘ಬಾರ್ಡರ್ 2’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇಂಡಿಯಾ-ಪಾಕ್ ನಡುವಿನ ಯುದ್ಧದ ಕಥೆ ಇದರಲ್ಲಿದೆ. ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಮುಂತಾದವರು ‘ಬಾರ್ಡರ್ 2’ ಚಿತ್ರದಲ್ಲಿ ನಟಿಸಿದ್ದಾರೆ.

ದೇಶಭಕ್ತಿ ಕಥಾಹಂದರ ಹೊಂದಿರುವ ‘ಧುರಂಧರ್’ (Dhurandhar) ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ 10 ದಿನಗಳಲ್ಲಿ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಈ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ದೇಶಭಕ್ತಿಯ ಕಥೆ ಹೊಂದಿರುವ ಇನ್ನೊಂದು ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದೆ. ಹೌದು, ‘ಬಾರ್ಡರ್ 2’ (Border 2) ಸಿನಿಮಾದ ಟೀಸರ್ ಅನಾವರಣ ಆಗಿದೆ. ‘ಬಾರ್ಡರ್ 2’ ಚಿತ್ರದಲ್ಲಿ ವರುಣ್ ಧವನ್, ಅಹಾನ್ ಶೆಟ್ಟಿ, ದಿಲ್ಜಿತ್ ದೋಸಾಂಜ್, ಸನ್ನಿ ಡಿಯೋಲ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
‘ಬಾರ್ಡರ್’ ಸಿನಿಮಾ 1997ರಲ್ಲಿ ರಿಲೀಸ್ ಆಗಿತ್ತು. ಈಗ ಅದಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ‘ಬಾರ್ಡರ್ 2’ ಸಿನಿಮಾಗೆ ಅನುರಾಗ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. 1971ರಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಯುದ್ಧದ ಘಟನೆಗಳನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ಸಿದ್ಧವಾಗಿದೆ.
2 ನಿಮಿಷ 4 ಸೆಕೆಂಡ್ ಇರುವ ‘ಬಾರ್ಡರ್ 2’ ಟೀಸರ್ನಲ್ಲಿ ಯುದ್ಧದ ಸನ್ನಿವೇಶಗಳೇ ತುಂಬಿಕೊಂಡಿವೆ. ‘ಕೇಸರಿ’, ‘ಪಂಜಾಬ್ 1984’ ಸಿನಿಮಾಗಳ ಖ್ಯಾತಿಯ ಅನುರಾಗ್ ಸಿಂಗ್ ಅವರು ‘ಬಾರ್ಡರ್ 2’ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಮೂಡಿದೆ. ಗಣರಾಜ್ಯೋತ್ಸವದ ಪ್ರಯುಕ್ತ 2026ರ ಜನವರಿ 23ರಂದು ಈ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.
‘ಬಾರ್ಡರ್ 2’ ಟೀಸರ್:
ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಜೆ.ಪಿ. ದತ್ತ, ನಿಧಿ ದತ್ತ ಅವರು ‘ಬಾರ್ಡರ್ 2’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟೀಸರ್ ನೋಡಿದ ಕೆಲವರು ಈ ಸಿನಿಮಾದ ದೃಶ್ಯಗಳ ಗುಣಮಟ್ಟದ ಬಗ್ಗೆ ತಕರಾರು ತೆಗೆದಿದ್ದಾರೆ. ಬಹುತೇಕ ದೃಶ್ಯಗಳು ಸ್ಟುಡಿಯೋ ಒಳಗೆ ಗ್ರೀನ್ ಸ್ಕ್ರೀನ್ ಬಳಸಿ ಚಿತ್ರಿಸಿದಂತಿವೆ. ಇದರಿಂದ ದೃಶ್ಯಗಳಲ್ಲಿ ನೈಜತೆ ಕಾಣುತ್ತಿಲ್ಲ ಎಂಬ ಟೀಕೆ ಕೇಳಿಬಂದಿದೆ.
ಇದನ್ನೂ ಓದಿ: ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್
‘ಬಾರ್ಡರ್ 2’ ಸಿನಿಮಾದ ಟೀಸರ್ನಲ್ಲಿ ಸನ್ನಿ ಡಿಯೋಲ್ ಅವರ ಡೈಲಾಗ್ ಗಮನ ಸೆಳೆದಿದೆ. ‘ಆಕಾಶದಿಂದ, ಭೂಮಾರ್ಗದಿಂದ, ಸಮುದ್ರದಿಂದ ನೀವು ಭಾರತದ ಒಳಗೆ ನುಸುಳಲು ಪ್ರಯತ್ನಿಸಿದರೆ ಅಲ್ಲೊಬ್ಬ ಭಾರತೀಯ ಸೈನಿಕ ಎದುರಾಗುತ್ತಾನೆ’ ಎಂದು ಸನ್ನಿ ಡಿಯೋಲ್ ಅವರು ಆಕ್ರೋಶಭರಿತವಾಗಿ ಡೈಲಾಗ್ ಹೊಡೆದಿದ್ದಾರೆ. ಈ ಸಿನಿಮಾಗೆ ಈಗ ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




