ಬಾಲಿವುಡ್ನಲ್ಲಿ (Bollywood) ಹಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವ ಜನಪ್ರಿಯ ವಿಧು ವಿನೋದ್ ಚೋಪ್ರಾ ನಿರ್ಮಾಣ ಹಾಗೂ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “12th ಫೇಲ್” ಅಕ್ಟೋಬರ್ 27 ರಂದು ಹಿಂದಿ, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಕೆ.ಆರ್.ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.
12th ಫೇಲ್ ಚಿತ್ರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ” ಪರಿಂದ”, “1942 ಎ ಲವ್ ಸ್ಟೋರಿ” ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ವಿದು ನಿನೋದ್ ಚೋಪ್ರಾ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರೀಮಿಯರ್ ಶೋಗಳು ಈಗಾಗಲೇ ನಡೆದಿದ್ದು, ಹಲವು ವಿಮರ್ಶಕರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಆರ್ಜಿ ಸಂಸ್ಥೆಯ ಕಾರ್ತಿಕ್ ಗೌಡ ಮಾತನಾಡಿ, ”ಚಿಕ್ಕವಯಸ್ಸಿನಿಂದ ವಿಧು ವಿನೋದ್ ಚೋಪ್ರಾ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ನಾನು, ’12th ಫೇಲ್’ ಸಿನಿಮಾವನ್ನು ಕರ್ನಾಟಕದಾದ್ಯಂತ ನಾವು ಸುಮಾರು 100 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರವನ್ನು ರೋಹಿತ್ ಪದಕಿ ಸಾರಥ್ಯದಲ್ಲಿ ಕನ್ನಡಕ್ಕೆ ಡಬ್ ಮಾಡಲಾಗಿದೆ. ಕನ್ನಡದ ಹಾಡುಗಳನ್ನು ಕೇಳಿ ನಿರ್ದೇಶಕರು ಸಂತೋಷ ಪಟ್ಟಿದ್ದಾರೆ. ನಮ್ಮ ಮುಂದಿನ ಚಿತ್ರಗಳನ್ನು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕವೇ ಬಿಡುಗಡೆ ಮಾಡುವುದಾಗಿ ಮೂಲ ಸಿನಿಮಾದ ತಂಡದವರು ಹೇಳಿದ್ದಾರೆ. ಇದೊಂದು ಸದಭಿರುಚಿಯ ಸಿನಿಮಾಕ್ಕೆ ಇದಕ್ಕೆ ಎಲ್ಲರ ಪ್ರೋತ್ಸಾಹ ಬೇಕಾಗಿದೆ” ಎಂದರು.
ಇದನ್ನೂ ಓದಿ:ಮಾಸ್ ಸಿನಿಮಾ ’ಮಾರ್’: ಇದು ಪ್ಯಾನ್ ಇಂಡಿಯಾ ಪ್ರಯತ್ನ
ನಾಯಕ ವಿಕ್ರಾಂತ್ ಮಾಸ್ಸೆ ಮಾತನಾಡಿ ”ನಾನು ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಪಾತ್ರ ಬಹಳ ಚೆನ್ನಾಗಿದೆ. ವಿಧು ವಿನೋದ್ ಚೋಪ್ರಾ ಅವರು ಕರೆ ಮಾಡಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದಾಗ ತುಂಬಾ ಸಂತೋಷವಾಯಿತು. ಅಸಾಧ್ಯವನ್ನು ಸಾಧ್ಯವಾಗಿಸಿದ ಐ.ಪಿ.ಎಸ್ ಮನೋಜ್ ಕುಮಾರ್ ಶರ್ಮ ಅವರ ಜೀವನ್ನಾಧಾರಿತ ಈ ಚಿತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ” ಎಂದರು. ಮಿರ್ಜಾಪುರ್ ವೆಬ್ ಸರಣಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ.
ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮೇಧಾ ಶಂಕರ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಉತ್ತಮ ಸಂದೇಶವಿರುವ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ ಎಂದು ಮೇಧಾ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 12th ಫೇಲ್ ಸಿನಿಮಾವು ಅಕ್ಟೋಬರ್ 27ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Wed, 25 October 23