
ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಬಂದ ಮೇಲೆ ರೀಮೇಕ್ ಸಂಸ್ಕೃತಿ ಬಹಳ ಕಡಿಮೆ ಆಗಿದೆ. ಮೊದಲೆಲ್ಲ ದಕ್ಷಿಣದಲ್ಲಿ ಹಿಟ್ ಆದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಕೋಟಿಗಳಲ್ಲಿ ಬಾಚಿಕೊಳ್ಳುತ್ತಿದ್ದರು ಅಲ್ಲಿಯ ನಿರ್ದೇಶಕರು. ಹಿಂದಿಯಲ್ಲಿ ಹಿಟ್ ಆದ ಸಿನಿಮಾಗಳು ದಕ್ಷಿಣದ ಭಾಷೆಗೂ ಬರುತ್ತಿದ್ದವು. ಈಗದು ಕಡಿಮೆ ಆಗಿದೆ. ಆದರೆ ಈಗ ತುಸು ಹಳೆಯ ದಕ್ಷಿಣದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲೂ ನಿರ್ಮಾಪಕ ಕರಣ್ ಜೋಹರ್ ಒಂದರ ಹಿಂದೊಂದು ಇಂಥಹಾ ಸಾಹಸ ಮಾಡುತ್ತಿದ್ದಾರೆ. ಇದೀಗ ತೆಲುಗಿನ ಸಾಧಾರಣ ಹಿಟ್ ಸಿನಿಮಾ ಒಂದನ್ನು ಹಿಂದಿಯಲ್ಲಿ ಮರು ನಿರ್ಮಾಣ ಮಾಡಲಾಗುತ್ತಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ನಟಿಸಿದ್ದ ಎರಡನೇ ಸಿನಿಮಾ ‘ಡಿಯರ್ ಕಾಮ್ರೆಡ್’. ಈ ಸಿನಿಮಾ 2019 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಚೆನ್ನಾಗಿಯೇ ಇತ್ತಾದರೂ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗೆಲುವು ಕಾಣಲಿಲ್ಲ. ಆಗಿನ ಕಾಲಕ್ಕೆ ಈ ಸಿನಿಮಾ 33 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಸಿನಿಮಾದ ವಿಷಯ, ಕೆಲವು ದೃಶ್ಯಗಳು ಬಹಳ ಪರಿಣಾಮಕಾರಿಯಾಗಿತ್ತು. ಇಂದಿಗೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಕೆಲ ದೃಶ್ಯಗಳು ಹರಿದಾಡುತ್ತಿರುತ್ತವೆ. ಇದೀಗ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ.
ಕರಣ್ ಜೋಹರ್ ಅವರು ‘ಡಿಯರ್ ಕಾಮ್ರೆಡ್’ ಸಿನಿಮಾದ ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಅವರೇ ಹಿಂದಿಯಲ್ಲಿ ಸಿನಿಮಾವನ್ನು ಮರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಪಾತ್ರದಲ್ಲಿ ಯುವ ನಟ ಸಿದ್ಧಾಂತ್ ಚತುರ್ವೇಧಿ ನಟಿಸುತ್ತಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವುದು ಪ್ರತಿಭಾ ರಂತಾ. ಸೂಪರ್ ಹಿಟ್ ಸಿನಿಮಾ ‘ಲಾಪತಾ ಲೇಡೀಸ್’ನಲ್ಲಿ ಪ್ರತಿಭಾ ಅವರು ಫುಷ್ಪಾ ರಾಣಿ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಮೂರನೇ ಸಿನಿಮಾ ಆಗಿರಲಿದೆ.
ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಯಾವಾಗ? ಎಲ್ಲಿ?
‘ಡಿಯರ್ ಕಾಮ್ರೆಡ್’ ಸಿನಿಮಾ, ಕ್ರಿಕೆಟ್ ಆಟಗಾರ್ತಿ ಹಾಗೂ ಆಕೆಯ ಬಾಯ್ಫ್ರೆಂಡ್ ಕುರಿತ ಕತೆಯನ್ನು ಒಳಗೊಂಡಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಬಾಯ್ಫ್ರೆಂಡ್ ಜೊತೆಗೂಡಿ ಕ್ರಿಕೆಟ್ ಆಟಗಾರ್ತಿ ಹೋರಾಡುವ ಕತೆಯನ್ನು ‘ಡಿಯರ್ ಕಾಮ್ರೆಡ್’ ಒಳಗೊಂಡಿತ್ತು. ಹಿಂದಿಯಲ್ಲಿ ಇದೀಗ ಇದೇ ಸಿನಿಮಾವನ್ನು ಕೆಲ ಬದಲಾವಣೆಗಳೊಂದಿಗೆ ತೆರೆಗೆ ತರಲಾಗುತ್ತದೆಯಂತೆ.
ಕೆಲ ತಿಂಗಳ ಹಿಂದೆ ಆಗಸ್ಟ್ ನಲ್ಲಿ ಕರಣ್ ಜೋಹರ್ ನಿರ್ಮಾಣದ ‘ದಡಕ್ 2’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ತಮಿಳಿನ ‘ಪರಿಯೇರುಮ್ ಪೆರುಮಾಳ್’ ಸಿನಿಮಾದ ರೀಮೇಕ್ ಆಗಿತ್ತು. ಆ ಸಿನಿಮಾನಲ್ಲಿಯೂ ಸಿದ್ಧಾಂತ್ ಚತುರ್ವೇಧಿ ನಾಯಕನಾಗಿ ನಟಿಸಿದ್ದರು. ಇದೀಗ ಸಿದ್ಧಾಂತ್ ಮತ್ತೊಂದು ರೀಮೇಕ್ನಲ್ಲಿ ನಟಿಸಲು ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ