ಒಟಿಟಿ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ‘ಹನುಮಾನ್ ಅಂಶ್’ ಸಿನಿಮಾ: ಕಹಿ ಅನುಭವ ತೆರೆದಿಟ್ಟ ನಿರ್ದೇಶಕ

ಈಗ ಎಲ್ಲರೂ ‘ಹನುಮಾನ್ ಅಂಶ್’ ಸಿನಿಮಾವನ್ನು ಹೊಗಳುತ್ತಿದ್ದಾರೆ. ಆದರೆ ಆರಂಭದಲ್ಲಿ ಈ ಚಿತ್ರಕ್ಕೆ ಒಟಿಟಿ ಸಂಸ್ಥೆಯಿಂದ ತಿರಸ್ಕಾರ ಎದುರಾಗಿತ್ತು. ಆ ಬಗ್ಗೆ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಮಾತನಾಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆದ ಬಳಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ವಿವರಿಸಿದ್ದಾರೆ.

ಒಟಿಟಿ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ‘ಹನುಮಾನ್ ಅಂಶ್’ ಸಿನಿಮಾ: ಕಹಿ ಅನುಭವ ತೆರೆದಿಟ್ಟ ನಿರ್ದೇಶಕ
Hanuman Ansh Poster

Updated on: Sep 04, 2026 | 8:54 PM

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಭಾರಿ ಮೆಚ್ಚುಗೆ ಗಳಿಸಿ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ‘ಹನುಮಾನ್ ಅಂಶ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಸವಾಲುಗಳನ್ನು ಎದುರಿಸಿತ್ತು. ಇದೀಗ ಈ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಪ್ರಮುಖ ಒಟಿಟಿ ಸಂಸ್ಥೆಯೊಂದು ತಮ್ಮ ಕಥೆಯನ್ನು ತಿರಸ್ಕರಿಸಿದ್ದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ‘ಇಂಡಿಯಾ ಟಿವಿ’ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ವಿಶಾಲ್ ಚತುರ್ವೇದಿ ಅವರು ಈ ಬಗ್ಗೆ ವಿವರಿಸಿದ್ದಾರೆ..

ನೀಮ್ ಕರೋಲಿ ಬಾಬಾ (ಮಹಾರಾಜ್‌ ಜಿ) ಅವರ ಜೀವನಾಧಾರಿತ ಕಥೆಯನ್ನು ಒಟಿಟಿ ಸಂಸ್ಥೆಯೊಂದಕ್ಕೆ ಪಿಚ್ ಮಾಡಲು ಹೋದಾಗ ನಡೆದ ಘಟನೆಯ ಬಗ್ಗೆ ವಿಶಾಲ್ ಚತುರ್ವೇದಿ ಅವರು ಮಾತನಾಡಿದ್ದಾರೆ. ‘ನಾನು ಒಟಿಟಿ ಸಂಸ್ಥೆಗೆ ಕಥೆ ಹೇಳಲು ಹೋದಾಗ, ಅವರು ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಬಲ್ಲ ಭಾರತೀಯ ಕಥೆ ಎಂದು ಒಪ್ಪಿಕೊಂಡರು. ನಾನು ಮಹಾರಾಜ್ ಜಿ ಅವರ ಕಥೆಯನ್ನು ವಿವರಿಸುವಾಗ ಭಾವುಕನಾಗಿ ಕಣ್ಣೀರು ಹಾಕಿದ್ದೆ’ ಎಂದು ಹೇಳಿದ್ದಾರೆ.

ಜಾಗತಿಕವಾಗಿ ಕೋಟ್ಯಂತರ ಜನರ ಮೇಲೆ ಪ್ರಭಾವ ಬೀರಿದ ಆಧ್ಯಾತ್ಮಿಕ ಗುರುವಿನ ಕಥೆಯನ್ನು ಭಾರತೀಯ ಚಿತ್ರರಂಗ ಇದುವರೆಗೆ ಏಕೆಗೆ ತೋರಿಸಲಿಲ್ಲ ಎಂಬ ಪ್ರಶ್ನೆ ತಮ್ಮನ್ನು ಕಾಡಿತ್ತು ಎಂದು ವಿಶಾಲ್ ಚತುರ್ವೇದಿ ತಿಳಿಸಿದ್ದಾರೆ. ಒಟಿಟಿ ಸಂಸ್ಥೆಯು ಕಥೆಯನ್ನು ರಿಜೆಕ್ಟ್ ಮಾಡಿದ ರೀತಿ ತಮಗೆ ತೀವ್ರ ಅಸಮಾಧಾನ ತಂದಿತ್ತು ಎಂದು ಅವರು ಹೇಳಿದ್ದಾರೆ.

‘ಸಿನಿಮಾ ಮಾಡುವವರಾಗಿ ನಾವು ಸಾವಿರಾರು ಬಾರಿ ತಿರಸ್ಕೃತರಾಗಿದ್ದೇವೆ. ಅದು ಈ ವೃತ್ತಿಯ ಭಾಗ. ಆದರೆ ಅವರು ಈ ಕಥೆಯನ್ನು ತಿರಸ್ಕರಿಸಿದ ರೀತಿ ಮತ್ತು ಅವರ ಮನಸ್ಥಿತಿ ನನಗೆ ಸರಿ ಎನಿಸಲಿಲ್ಲ. ಆ ನರೆಟಿವ್ ಅನ್ನು ಮುರಿಯುವುದು ನನಗೆ ಅಗತ್ಯ ಎನಿಸಿತು’ ಎಂದು ವಿಶಾಲ್ ಚತುರ್ವೇದಿ ಅವರು ಹೇಳಿದ್ದಾರೆ. ಈಗ ಅವರಿಗೆ ಚಿತ್ರಮಂದಿರದಲ್ಲಿ ಸಿಕ್ಕ ಗೆಲುವಿನಿಂದ ಖುಷಿ ಆಗಿದೆ.

ಇದನ್ನೂ ಓದಿ: ಚಪ್ಪಲಿ ಬಿಚ್ಚಿಟ್ಟು ‘ಹನುಮಾನ್ ಅಂಶ್’ ಸಿನಿಮಾ ನೋಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ವೈರಲ್

ಬಾಕ್ಸ್ ಆಫೀಸ್‌ನಲ್ಲಿ ‘ಹನುಮಾನ್ ಅಂಶ್’ ಕಲೆಕ್ಷನ್
ಆರಂಭದಲ್ಲಿ ಕೇವಲ 10 ಲಕ್ಷ ರೂಪಾಯಿ ಗಳಿಕೆ ಮಾಡಿ, ನಿಧಾನಗತಿಯಲ್ಲಿ ಪ್ರಯಾಣ ಬೆಳೆಸಿದ್ದ ‘ಹನುಮಾನ್ ಅಂಶ್’ ಸಿನಿಮಾ, ನಂತರ ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರದಿಂದ 4ನೇ ವಾರದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ 27ನೇ ದಿನದ ವೇಳೆಗೆ ಈ ಸಿನಿಮಾ ಭಾರತದಲ್ಲಿ ಸುಮಾರು 61.88 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಗಳಿಕೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us