‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ

ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆ ಬರೆದಿರುವ ‘ಧುರಂಧರ್’ ಸಿನಿಮಾವನ್ನು ನೋಡಿ ವಿವೇಕ್ ಅಗ್ನಿಹೋತ್ರಿ ಮೆಚ್ಚಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಅವರನ್ನು ವಿವೇಕ್ ಮನಸಾರೆ ಹೊಗಳಿದ್ದಾರೆ. ಚಿತ್ರದ ಬಗ್ಗೆ ತಮ್ಮ ವಿಮರ್ಶೆ ನೀಡಿದ್ದಾರೆ. ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ ಈವರೆಗೂ 774 ಕೋಟಿ ರೂಪಾಯಿ ಆಗಿದೆ. ಈಗಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ
Vivek Agnihotri, Aditya Dhar

Updated on: Jan 05, 2026 | 7:45 PM

ಆದಿತ್ಯ ಧಾರ್ ನಿರ್ದೇಶನ ಮಾಡಿದ ‘ಧುರಂಧರ್’ (Dhurandhar) ಸಿನಿಮಾವನ್ನು ನೋಡಿ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ವಿಮರ್ಶೆ ತಿಳಿಸುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಈಗ ‘ಧುರಂಧರ್’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಆದಿತ್ಯ ಧಾರ್ (Aditya Dhar) ಅವರ ನಿರ್ದೇಶನ, ಕಲಾವಿದರ ನಟನೆ ಹಾಗೂ ತಂತ್ರಜ್ಞರ ಕೆಲಸವನ್ನು ವಿವೇಕ್ ಅಗ್ನಿಹೋತ್ರಿ ಅವರು ಮನಸಾರೆ ಹೊಗಳಿದ್ದಾರೆ.

‘2 ತಿಂಗಳ ಬಳಿಕ ಭಾರತಕ್ಕೆ ವಾಪಸ್ ಬಂದಿದ್ದೇನೆ. ಈಗ ಮಾಡಿದ ಮೊದಲ ಕೆಲಸ ಎಂದರೆ ಧುರಂಧರ್ ಸಿನಿಮಾ ನೋಡಿದ್ದು. ಅದ್ಭುತ ಮತ್ತು ಹೆಮ್ಮೆ – ಈ ಎರಡೇ ಪದಗಳು ನನ್ನ ಮನಸ್ಸಿಗೆ ಬಂದಿದ್ದು. ಈ ರೀತಿಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂಬುದು ಸಿನಿಮಾ ಮೇಕಿಂಗ್ ಬಲ್ಲವರಿಗೆ ಮಾತ್ರ ಗೊತ್ತು. ಈ ರೀತಿಯ ಸಿನಿಮಾ ತಂತಾನೇ ಆಗುವುದಿಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ.

‘ಪ್ರೊಡಕ್ಷನ್ ಡಿಸೈನ್ ಬಹಳ ಚೆನ್ನಾಗಿದೆ, ಸಂಗೀತ ಅತ್ಯದ್ಭುತವಾಗಿದೆ. ವೀಕಾಸ್ ನೌಲಂಕಾ ಅವರ ಛಾಯಾಗ್ರಹಣ ಹೊಸ ಛಾಯಾಗ್ರಾಹಕರಿಗೆ ಪಠ್ಯಪುಸ್ತಕದ ರೀತಿ ಇದೆ. ನಟನೆ ಬಗ್ಗೆ ಹೆಚ್ಚು ಹೇಳಲೇಬೇಕು. ಚಿಕ್ಕ ಚಿಕ್ಕ ಪಾತ್ರಧಾರಿಗಳು ಕೂಡ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ಧುರಂಧರ್ ಸಿನಿಮಾದ ನಿಜವಾದ ಗೆಲುವು. ಎಲ್ಲ ವಿಭಾಗಗಳು ಚೆನ್ನಾಗಿ ಸಿಂಕ್ ಆಗಿವೆ. ಇದು ಆಕಸ್ಮಿಕವಾಗಿ ಆಗುವುದಿಲ್ಲ’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

‘ಇದು ಸಂಪೂರ್ಣವಾಗಿ ನಿರ್ದೇಶಕರ/ಬರಹಗಾರರ ಸಿನಿಮಾ ಎಂಬುದು ಗೊತ್ತಾಗುತ್ತದೆ. ಆದಿತ್ಯ ಧಾರ್ ಅವರೇ, ನಾನು ಯಾವಾಗಲೂ ನಿಮ್ಮ ಕೆಲಸವನ್ನು ಮೆಚ್ಚಿದ್ದೇನೆ. ಮುಖ್ಯವಾಗಿ ನೀವು ಸಿನಿಮಾ ಮಾಡುವ ಸ್ಕೇಲ್ ಮತ್ತು ಡಿಸೈನ್ ದೊಡ್ಡದಾಗಿರುತ್ತದೆ. ಇದು ಇನ್ನೊಂದು ಲೆವೆಲ್​​ನಲ್ಲಿದೆ. ನಾನು ಬಹಳ ಹೆಮ್ಮೆಯಿಂದ ಸಿನಿಮಾ ನೋಡಿದೆ. ಇದು ಭಾರತೀಯ ಚಿತ್ರರಂಗದ ಹೆಮ್ಮೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೊಗಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್​ಕುಮಾರ್

‘ನೀವು ಧನ್ಯ. ನಿಜಕ್ಕೂ ನೀವು ದೇವರ ಮಗ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ. ಹೀಗೆ ಮುಂದುವರಿಯಿರಿ. ಇನ್ನೂ ಎತ್ತರಕ್ಕೆ ಬೆಳೆಯಿರಿ. ಯುವ ಜನತೆ ಇಂಥ ಕೆಲಸ ಮಾಡಿದಾಗ ಭಾರತೀಯ ಚಿತ್ರರಂಗ ಬೆಳೆಯುತ್ತದೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಆದಿತ್ಯ ಧಾರ್​​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ ಈಗಾಗಲೇ 774 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.