Filmfare Awards 2023: 68ನೇ ಫಿಲ್ಮಫೇರ್ ನೋಡುವುದು ಹೇಗೆ? ಎಲ್ಲಿ? ಯಾವ ಒಟಿಟಿಯಲ್ಲಿ ಲೈವ್? ಟಿಕೆಟ್ ಬೆಲೆ ಎಷ್ಟು?
Filmfare Awards 2023 Schedule: 68ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಎಂದು? ಎಲ್ಲಿ ನಡೆಯಲಿದೆ? ಫಿಲ್ಮ್ಫೇರ್ ಪ್ರಶಸ್ತಿಯನ್ನು ನೋಡುವುದು ಹೇಗೆ? ಒಟಿಟಿಯಲ್ಲಿ ಪ್ರಸಾರವಾಗಲಿದೆಯೇ? ನೇರವಾಗಿ ನೋಡಲು ಟಿಕೆಟ್ ಬೆಲೆ ಎಷ್ಟು? ಟಿಕೆಟ್ ಬುಕ್ ಮಾಡುವುದು ಹೇಗೆ? ಪೂರ್ಣ ಮಾಹಿತಿ ಇಲ್ಲಿದೆ.
68ನೇ ಫಿಲ್ಮ್ಫೇರ್ (68th Filmfare) ಪ್ರಶಸ್ತಿ ವಿತರಣೆ ಕಾರ್ಯಕ್ರಮ ಇನ್ನೆರಡು ದಿನಗಳಲ್ಲಿ ನಡೆಯಲಿದೆ. ಏಪ್ರಿಲ್ 27 ರಂದು ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭವು ಮುಂಬೈನ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಶೋ ಅನ್ನು ಸಲ್ಮಾನ್ ಖಾನ್ (Salman Khan) ನಿರೂಪಣೆ ಮಾಡಲಿದ್ದು, ಬಾಲಿವುಡ್ನ ಹಲವು ಖ್ಯಾತನಾಮ ತಾರೆಯರು ಇವೆಂಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಫಿಲ್ಮ್ಫೇರ್ ಪ್ರಶಸ್ತಿಯು ಟಿವಿ ಹಾಗೂ ಒಟಿಟಿ ಎರಡರಲ್ಲೂ ಒಂದು ದಿನದ ಬಳಿಕ ಪ್ರಸಾರವಾಗಲಿದೆ. ಕಾರ್ಯಕ್ರಮದ ಲೈವ್ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶವಿದ್ದು, ಟಿಕೆಟ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ.ಏಪ್ರಿಲ್ 27 ರಂದು ಮುಂಬೈನಲ್ಲಿ ನಡೆಯುವ ಫಿಲ್ಮ್ಫೇರ್ ಶೋ ಮಾರನೇಯ ದಿನ ಅಂದರೆ ಏಪ್ರಿಲ್ 28ಕ್ಕೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಬಾರಿ ಒಟಿಟಿಯಲ್ಲಿಯೂ ಶೋ ಸ್ಟ್ರೀಮ್ ಆಗಲಿದ್ದು, ಏಪ್ರಿಲ್ 28ರಂದೇ ಕಲರ್ಸ್ ಫ್ಲಿಕ್ಸ್ ಹಾಗೂ ಜಿಯೊ ಸಿನಿಮಾ ಒಟಿಟಿಯಲ್ಲಿ ಕಾರ್ಯಕ್ರಮವನ್ನು ನೋಡಬಹುದಾಗಿದೆ.
ಇನ್ನು ಮುಂಬೈನ ಜಿಯೋ ವರ್ಲ್ಸ್ ಕನ್ವೆಷನ್ ಸೆಂಟರ್ನಲ್ಲಿ ಲೈವ್ ಆಗಿ ಏಪ್ರಿಲ್ 27ರಂದೇ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆಯಾದರೂ ಭಾರಿ ಮೊತ್ತದ ಬೆಲೆ ತೆತ್ತು ಟಿಕೆಟ್ ಖರೀದಿ ಮಾಡಬೇಕು. ಫಿಲ್ಮ್ಫೇರ್ ವೀಕ್ಷಣೆಗೆ ವಿತರಿಸಲಾಗುತ್ತಿರುವ ಟಿಕೆಟ್ನ ಆರಂಭಿಕ ಬೆಲೆಯೇ 15,000 ರುಪಾಯಿಗಳು. 15,000 ದಿಂದ ಆರಂಭಿಸಿ 3 ಲಕ್ಷದ ವರೆಗೆ ಟಿಕೆಟ್ ಲಭ್ಯವಿದ್ದು, ಹೆಚ್ಚು ಮೊತ್ತ ಪಾವತಿಸಿದಷ್ಟು ಸ್ಟೇಜ್ಗೆ ಹತ್ತಿರವಾದ ಸೀಟ್ ಲಭ್ಯವಾಗುತ್ತದೆ. ಟಿಕೆಟ್ಗಳನ್ನು ಬುಕ್ಮೈಶೋ ಮೂಲಕ ಆನ್ಲೈನ್ನಲ್ಲಿ ಖರೀದಿ ಮಾಡಬಹುದು. ಇದರ ಹೊರತಾಗಿ 3500 ರಿಂದ 5000 ವರೆಗಿನ ಟಿಕೆಟ್ ಸಹ ಲಭ್ಯವಿದ್ದು ಅದು ಕುರ್ಚಿಯಿಲ್ಲದೆ ನಿಂತು ನೋಡಬಹುದಾದ ಟಿಕೆಟ್ ಎನ್ನಲಾಗುತ್ತಿದೆ.
ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ 68ನೇ ಫಿಲ್ಮ್ಫೇರ್ ಆಯೋಜನೆ ಮಾಡಲಾಗಿದ್ದು, ಹಲವು ವರ್ಷಗಳ ಬಳಿಕ ಸಲ್ಮಾನ್ ಖಾನ್ ಫಿಲ್ಮ್ ಫೇರ್ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಹೆಚ್ಚಿನ ಮನೊರಂಜನೆಯನ್ನು ನಿರೀಕ್ಷಿಸಬಹುದು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇದ್ದರೂ ವೇದಿಕೆ ಏರಿ ನಿರೂಪಣೆ ಮಾಡುತ್ತಿರುವ ಕಾರಣ ಕಾರ್ಯಕ್ರಮದಲ್ಲಿ ಬಿಗಿ ಭದ್ರತೆ ಮತ್ತು ತಪಾಸಣೆಯನ್ನು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ:Filmfare Awards 2023: ಈ ವರ್ಷ ನಾಮನಿರ್ದೇಶನಗೊಂಡ ಸಿನಿಮಾ, ಕಲಾವಿದರ ಪಟ್ಟಿ ಇಲ್ಲಿದೆ
ಈ ಬಾರಿ ಹಲವು ಬಾಲಿವುಡ್ ಹಾಗೂ ಇತರೆ ಭಾಷೆಗಳ ಸಿನಿಮಾಗಳು ಹಾಗೂ ನಟರು ನಾಮಿನೇಷನ್ ಪಡೆದಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಹೆಚ್ಚು ನಾಮಿನೇಷನ್ ಪಡೆದಿವೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಹ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದು ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾ ಎಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Tue, 25 April 23