Armaan Kohli: ಡ್ರಗ್ಸ್​ ಕೇಸ್​ ಆರೋಪಿ ಅರ್ಮಾನ್​ ಕೊಹ್ಲಿ ಯಾರು? ಹಿನ್ನೆಲೆ ಏನು? ಮಾಡಿಕೊಂಡ ವಿವಾದ ಒಂದೆರಡಲ್ಲ

| Updated By: ಮದನ್​ ಕುಮಾರ್​

Updated on: Aug 29, 2021 | 3:45 PM

Armaan Kohli: ಚಿತ್ರರಂಗದಲ್ಲಿ ಅರ್ಮಾನ್​ ಕೊಹ್ಲಿ ಯಶಸ್ಸು ಪಡೆದಿದ್ದಕ್ಕಿಂತ ಕಾಂಟ್ರವರ್ಸಿ ಮಾಡಿಕೊಂಡಿದ್ದೇ ಹೆಚ್ಚು. ಹಲವು ನಟಿಯರ ಮೇಲೆ ಹಲ್ಲೆ ಮಾಡಿದ್ದ ಅವರು ಈಗ ಡ್ರಗ್ಸ್​ ಕೇಸ್​ನಲ್ಲಿ ಆರೋಪಿ ಆಗಿದ್ದಾರೆ.

Armaan Kohli: ಡ್ರಗ್ಸ್​ ಕೇಸ್​ ಆರೋಪಿ ಅರ್ಮಾನ್​ ಕೊಹ್ಲಿ ಯಾರು? ಹಿನ್ನೆಲೆ ಏನು? ಮಾಡಿಕೊಂಡ ವಿವಾದ ಒಂದೆರಡಲ್ಲ
ಸಲ್ಮಾನ್​ ಖಾನ್​ ಜೊತೆ ಅರ್ಮಾನ್​ ಕೊಹ್ಲಿ
Follow us on

ಬಾಲಿವುಡ್​ ನಟ ಅರ್ಮಾನ್​ ಕೊಹ್ಲಿ (Armaan Kohli) ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ನಿವಾಸದಲ್ಲಿ ಡ್ರಗ್ಸ್​ ಪತ್ತೆ ಆಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಅರ್ಮಾನ್​ ಕೊಹ್ಲಿ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅವರು ದಶಕಗಳ ಹಿಂದೆಯೇ ಬಾಲಿವುಡ್​ನ ಸೂಪರ್​ ಸ್ಟಾರ್​ ಆಗಿರಬೇಕಿತ್ತು. ಆದರೆ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ಅವರು ಚಿತ್ರರಂಗದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲೇ ಇಲ್ಲ. ಹಲವು ಸಿನಿಮಾಗಳಲ್ಲಿ ನಟಿಸಿದ ಅವರು ಇತ್ತೀಚಿನ ವರ್ಷಗಳಲ್ಲಿ ತೆರೆಮರೆಗೆ ಸರಿದಿದ್ದರು. ಈಗ ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಬಳಿಕ ಅವರ ಹೆಸರು ಮತ್ತೆ ಚಾಲ್ತಿಗೆ ಬಂದಿದೆ.

 

ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದ ಅರ್ಮಾನ್​:

ಬಾಲಿವುಡ್​ ನಿರ್ದೇಶಕ ರಾಜ್​ಕುಮಾರ್​ ಕೊಹ್ಲಿ ಹಾಗೂ ನಟಿ ನಿಶಿ ಅವರ ಪುತ್ರ ಅರ್ಮಾನ್​ ಕೊಹ್ಲಿ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1992ರಲ್ಲಿ ಅವರ ತಂದೆಯೇ ನಿರ್ದೇಶಿಸಿದ ‘ವಿರೋಧಿ’ ಸಿನಿಮಾ ಮೂಲಕ ಅವರು ಹೀರೋ ಆದರು. ನಂತರ ಅನೇಕ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದರು. ಹಿಂದಿ ಬಿಗ್​ ಬಾಸ್​ ಸೀಸನ್​ 7ರಲ್ಲಿ ಅವರು ಸ್ಪರ್ಧಿಸಿದ್ದರು. 98 ದಿನಗಳ ಕಾಲ ಪೈಪೋಟಿ ನೀಡಿದ್ದರು. ಈಗ ಡ್ರಗ್ಸ್​ ಕೇಸ್​ನಲ್ಲಿ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ.

ತಪ್ಪು ನಿರ್ಧಾರಗಳಿಂದ ಮಿಸ್​ ಆಯ್ತು ಗೆಲುವು:

ಶಾರುಖ್​ ನಟನೆಯ ಮೊದಲ ಸಿನಿಮಾ ‘ದೀವಾನಾ’ 1992ರಲ್ಲಿ ತೆರೆಕಂಡು ಹಿಟ್​ ಆಯಿತು. ಆ ಚಿತ್ರಕ್ಕೆ ಶಾರುಖ್​ಗಿಂತಲೂ ಮೊದಲು ಆಯ್ಕೆ ಆಗಿದ್ದೇ ಅರ್ಮಾನ್​. ಆದರೆ ಚಿತ್ರತಂಡದ ಜೊತೆ ಕಿರಿಕ್​ ಮಾಡಿಕೊಂಡು ಅವರು ಅರ್ಧಕ್ಕೆ ಹೊರನಡೆದಿದ್ದರು. ಪರಿಣಾಮ ಆ ಅವಕಾಶ ಶಾರುಖ್​ಗೆ ಸಿಕ್ಕಿತು. ಆ ಸಿನಿಮಾದಿಂದಲೇ ಶಾರುಖ್​ ಸ್ಟಾರ್ ಎನಿಸಿಕೊಂಡರು. ನಂತರ ಶಾರುಖ್​ ನಟಿಸಿದ್ದ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದಲ್ಲೂ ಅರ್ಮಾನ್​ಗೆ ಒಂದು ಪ್ರಮುಖ ಪಾತ್ರ ನೀಡಲಾಗಿತ್ತು. ಅದನ್ನೂ ಕೂಡ ಅವರು ನಿರಾಕರಿಸಿ ತಪ್ಪು ಮಾಡಿದರು. ಹೀಗೆ ಅರ್ಮಾನ್​ ತಿರಸ್ಕರಿಸಿದ ಶೇ.80ರಷ್ಟು ಸಿನಿಮಾಗಳು ಸೂಪರ್​ ಹಿಟ್​ ಆದವು. ಅವರು ಬಿಟ್ಟ ಪಾತ್ರಗಳನ್ನು ನಿಭಾಯಿಸಿದ ಹಲವು ಕಲಾವಿದರ ಸೂಪರ್​ ಸ್ಟಾರ್​ಗಳಾದರು!

ಅರ್ಮಾನ್​ ವೃತ್ತಿಜೀವನಲ್ಲಿವೆ ಹಲವಾರು ಕಿರಿಕ್​ಗಳು:

2013ರಲ್ಲಿ ಅರ್ಮಾನ್​ ಅವರ ಹಿಂದಿ ಬಿಗ್​ ಬಾಸ್​ ಸೀಸನ್​ 7ರಲ್ಲಿ ಭಾಗವಹಿಸಿದ್ದರು. ತೀವ್ರ ಮುಂಗೋಪದ ಕಾರಣಕ್ಕಾಗಿ ಅವರು ಇತರೆ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡಿದ್ದರು. ನಟಿ ಸೋಫಿಯಾ ಹಯಾತ್​ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಮಾಡೆಲ್​ ನೀರೂ ರಂಧಾವಾ ಜೊತೆ ಅರ್ಮಾನ್​ ಡೇಟಿಂಗ್​ ಮಾಡುತ್ತಿದ್ದರು. ಅವರ ಮೇಲೂ ಹಲ್ಲೆ ಮಾಡಿದ್ದರು. ಆ ಕುರಿತು ನೀರೂ ಅವರು ದೂರು ನೀಡಿದ್ದರು.

2008ರ ಸಮಯದಲ್ಲಿ ನಟಿ ಮುನ್​ಮುನ್​ ದತ್ತಾ ಜೊತೆ ಅರ್ಮಾನ್​ ಪ್ರೀತಿಯಲ್ಲಿ ಮುಳುಗಿದ್ದರು. ಆ ಸಂಬಂಧ ಕೂಡ ಬ್ರೇಕಪ್​ನಲ್ಲಿ ಅಂತ್ಯವಾಯ್ತು. ಅರ್ಮಾನ್​ ಅವರು ದೈಹಿಕವಾಗಿ ಹಲ್ಲೆ ಮಾಡುತ್ತಾರೆ ಎಂದು ಮುನ್​ಮುನ್ ದತ್ತಾ ಆರೋಪಿಸಿದ್ದರು. ಬಿಗ್​ ಬಾಸ್​ನಲ್ಲಿದ್ದಾಗ ನಟಿ ತನಿಶಾ ಮುಖರ್ಜಿ ಜೊತೆ ಅರ್ಮಾನ್​ ಹೆಚ್ಚು ಕ್ಲೋಸ್​ ಆಗಿದ್ದರು. ಆ ಸಂದರ್ಭದಲ್ಲಿ ಅವರು ಕೆಟ್ಟದಾಗಿ ನಡೆದುಕೊಂಡಿದ್ದನ್ನು ವೀಕ್ಷಕರು ಗಮನಿಸಿದ್ದರು.

ಇದನ್ನೂ ಓದಿ:

ಶಾರುಖ್​ ಸ್ಟಾರ್​ ಆಗಲು ಕಾರಣವೇ ಡ್ರಗ್ಸ್​ ಕೇಸ್​ ಆರೋಪಿ ಅರ್ಮಾನ್​ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ

Armaan Kohli: ಡ್ರಗ್ಸ್​ ಕೇಸ್​ನಲ್ಲಿ ನಟ ಅರ್ಮಾನ್​ ಕೊಹ್ಲಿ ಬಂಧನ; ಮನೆಯಲ್ಲಿ ಮಾದಕ ವಸ್ತು​ ಪತ್ತೆ