ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಜೀವ ಬೆದರಿಕೆ ಇದೆ. ಕೆಲವೇ ದಿನಗಳ ಹಿಂದೆ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಮುಂಬೈನ ಬಾಂದ್ರಾದಲ್ಲಿ ಇರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ (Galaxy Apartment) ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ್ದರು. ಈ ಘಟನೆ ಬಳಿಕ ಸಲ್ಮಾನ್ ಖಾನ್ ಅವರ ಕುಟುಂಬದವರಿಗೆ ಭಯ ಆಗಿರುವುದು ನಿಜ. ಇದೇ ಹಿನ್ನೆಲೆಯಲ್ಲಿ ಕೆಲವು ಸುದ್ದಿಗಳು ಕೇಳಿಬಂದಿವೆ. ಗುಂಡಿನ ದಾಳಿ ನಂತರ ಸಲ್ಮಾನ್ ಖಾನ್ ಅವರು ಆ ಮನೆ ಖಾಲಿ ಮಾಡುತ್ತಾರಾ ಎಂಬ ಅನುಮಾನ ಕೂಡ ಕೆಲವರಿಗೆ ಇದೆ. ಆ ಕುರಿತು ಸಲ್ಲು ಸಹೋದರ ಅರ್ಬಾಜ್ ಖಾನ್ (Arbaaz Khan) ಪ್ರತಿಕ್ರಿಯೆ ನೀಡಿದ್ದಾರೆ. ‘ಜೂಮ್’ ವಾಹಿನಿ ನಡೆಸಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಸದ್ಯಕ್ಕಂತೂ ಆ ಮನೆ ಖಾಲಿ ಮಾಡುವ ಆಲೋಚನೆ ಸಲ್ಮಾನ್ ಖಾನ್ ಅವರಿಗೆ ಇಲ್ಲ ಎಂಬುದನ್ನು ಅರ್ಬಾಜ್ ಖಾನ್ ಅವರು ಸ್ಪಷ್ಟಪಡಿಸಿದ್ದಾರೆ. ‘ಮನೆ ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋದರೆ ಕೊಲೆ ಬೆದರಿಕೆ ನಿಲ್ಲುತ್ತದೆ ಅಂತ ನಿಮಗೆ ಅನಿಸುತ್ತದೆಯೇ? ಹೌದು ಎಂಬುದಾದರೆ ಹಾಗೆಯೇ ಮಾಡಬಹುದಿತ್ತು. ಆದರೆ ವಾಸ್ತವ ಹಾಗಿಲ್ಲ. ನಮ್ಮ ತಂದೆ ಆ ಮನೆಯಲ್ಲಿ ಹಲವು ವರ್ಷ ವಾಸಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಅನೇಕ ವರ್ಷಗಳ ಕಾಲ ವಾಸ ಮಾಡಿದ್ದಾರೆ. ಅದು ಅವರ ಮನೆ. ಮನೆ ಖಾಲಿ ಮಾಡಿಕೊಂಡು ಹೋದರೆ ನಿಮ್ಮನ್ನು ಬಿಟ್ಟು ಬಿಡುತ್ತೇವೆ ಅಂತ ಯಾರೂ ಹೇಳಿಲ್ಲ. ಒಂದು ವೇಳೆ ಆ ರೀತಿ ಇದ್ದಿದ್ದರೆ ಅವರು ಮನೆ ಖಾಲಿ ಮಾಡುವ ಆಲೋಚನೆ ಮಾಡುತ್ತಿದ್ದರೇನೋ’ ಎಂದು ಅರ್ಬಾಜ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ದುಬೈಗೆ ತೆರಳಿದ ಸಲ್ಮಾನ್ ಖಾನ್
ಗುಂಡಿನ ದಾಳಿ ಬಳಿಕ ಸಲ್ಮಾನ್ ಖಾನ್ ಮನೆಯವರು ಹೇಳಿಕೆ ಬಿಡುಗಡೆ ಮಾಡಿದ್ದರು. ‘ಇಬ್ಬರು ಅಪರಿಚಿತರು ಗುಂಡಿನ ದಾಳಿ ಮಾಡಿದ್ದು ಆಘಾತಕಾರಿ ಸಂಗತಿ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಆತಂಕವಾಗಿದೆ. ದುರದೃಷ್ಟಕರ ಸಂಗತಿ ಏನೆಂದರೆ, ಕೆಲವರು ನಮ್ಮ ಫ್ಯಾಮಿಲಿಯ ಆಪ್ತರು ಅಂತ ಹೇಳಿಕೊಂಡು ಮಾಧ್ಯಮಗಳಲ್ಲಿ ಲಘುವಾದ ಹೇಳಿಕೆ ನೀಡುತ್ತಿದ್ದಾರೆ. ಈ ಘಟನೆಯು ಒಂದು ಪ್ರಚಾರದ ಗಿಮಿಕ್ ಹಾಗೂ ಇದರಿಂದ ಸಲ್ಮಾನ್ ಖಾನ್ ಕುಟುಂಬದವರ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಆದರೆ ಅದೆಲ್ಲ ನಿಜವಲ್ಲ. ಅಂಥವರ ಮಾತಗಳನ್ನು ಗಂಭೀರವಾಗಿ ಪರಿಗಣಿಸಬೇಡಿ’ ಎಂದು ಸಲ್ಲು ಕುಟುಂಬದವರು ಹೇಳಿಕೆಯಲ್ಲಿ ತಿಳಿಸಿದ್ದರು.
‘ಸಲೀಂ ಖಾನ್ (ಸಲ್ಮಾನ್ ಖಾನ್ ತಂದೆ) ಕುಟುಂಬದಲ್ಲಿನ ಯಾರೂ ಸಹ ಮಾಧ್ಯಮಗಳಿಗೆ ಈ ಘಟನೆಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಮಯದಲ್ಲಿ ಕುಟುಂಬದವರು ಪೊಲೀಸರ ತನಿಖೆಗೆ ಪೂರ್ತಿ ಸಹಕಾರ ನೀಡುತ್ತಿದ್ದಾರೆ. ನಮಗೆ ಮುಂಬೈ ಪೊಲೀಸರ ಮೇಲೆ ನಂಬಿಕೆಯಿದೆ. ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಬೆಂಬಲ ಹಾಗೂ ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದ’ ಎಂದು ಅರ್ಬಾಜ್ ಖಾನ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.