
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಾಳೆ (ಜುಲೈ 24) ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಹಲವು ಕಾರಣಗಳಿಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಇದೆ. ಶುರುವಾಗಿ ಆರು ವರ್ಷಗಳ ಬಳಿಕ ಈ ಸಿನಿಮಾ ತೆರೆ ಕಾಣುತ್ತಿದೆ. ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ಇದು. ಮೂರು ವರ್ಷಗಳ ಬಳಿಕ ಅವರು ಸೋಲೊ ನಾಯಕ ಆಗಿರುವ ಸಿನಿಮಾ ತೆರೆಗೆ ಬರುತ್ತಿದೆ. ಅದರ ಜೊತೆಗೆ ಪವನ್ ಕಲ್ಯಾಣ್ ನಟಿಸಿರುವ ಮೊದಲ ಐತಿಹಾಸಕ ಹಿನ್ನೆಲೆಯುಳ್ಳ ಸಿನಿಮಾ ಇದು.
ಸಿನಿಮಾದ ಬಗ್ಗೆ ನಿರೀಕ್ಷೆಗಳು ಒತ್ತಟ್ಟಿಗಾದರೆ ಸಿನಿಮಾದ ವಿರುದ್ಧ ಟೀಕೆಯೂ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ‘ಬಾಯ್ಕಾಟ್ ಎಚ್ಎಚ್ವಿಎಂ’ (BoycottHHVM) ಟ್ರೆಂಡ್ ಮಾಡಲಾಗುತ್ತಿದೆ. ಆಂಧ್ರ ಪ್ರದೇಶದ ವಿಪಕ್ಷವಾಗಿರುವ ವೈಸಿಪಿಯ ಸದಸ್ಯರು, ಜಗನ್ ಮೋಹನ್ ರೆಡ್ಡಿಯ ಅಭಿಮಾನಿಗಳು ಬಾಯ್ಕಾಟ್ ಟ್ರೆಂಡ್ ಮಾಡುತ್ತಿದ್ದಾರೆ. ಟ್ವಿಟ್ಟರ್ನಲ್ಲಿ ಸಿನಿಮಾ ವಿರುದ್ಧವಾಗಿ ಹಲವು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
‘ಸಿನಿಮಾ ಕಾರ್ಯಕ್ರಮದಲ್ಲಿ ರಾಜಕಾರಣ ಮಾಡುವ ಪವನ್ ಕಲ್ಯಾಣ್ಗೆ ಬುದ್ಧಿ ಕಲಿಸಲು ‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಬಾಯ್ಕಾಟ್ ಮಾಡಬೇಕಿದೆ. ಯಾವುದೇ ವೈಸಿಪಿ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಚಿತ್ರಮಂದಿರದಲ್ಲಿ ಹರಿ ಹರ ವೀರ ಮಲ್ಲು ಸಿನಿಮಾ ನೋಡಬೇಡಿ’ ಎಂದು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಕೆಲವರಂತೂ ‘ನಾನು ಹರಿ ಹರ ವೀರ ಮಲ್ಲು’ ಸಿನಿಮಾ ನೋಡುವುದಿಲ್ಲ ಮತ್ತು ಇನ್ನೂ 20 ಮಂದಿಯನ್ನು ನೋಡದಂತೆ ತಡೆಯುತ್ತೇನೆ’ ಎಂದು ಸವಾಲುಗಳನ್ನು ಹಾಕಿದ್ದಾರೆ.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಸಿನಿಮಾ ಟಿಕೆಟ್ ದರ: ಯಾವ ರಾಜ್ಯದಲ್ಲಿ ಎಷ್ಟಿದೆ?
ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿರುವ ಈ ‘ಹರಿ ಹರ ವೀರ ಮಲ್ಲು ಬಾಯ್ಕಾಟ್ ಟ್ರೆಂಡ್ ಬಗ್ಗೆ ಮಾತನಾಡಿರುವ ಪವನ್ ಕಲ್ಯಾಣ್, ‘ಯಾವ ಕಾರಣಕ್ಕೆ ಬಾಯ್ಕಾಟ್ ಮಾಡುತ್ತಾರಂತೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ಅವರಿಗೆ ಸಿನಿಮಾ ಬಾಯ್ಕಾಟ್ ಮಾಡಲು ಯಾವುದೇ ಪ್ರತ್ಯಕ್ಷ ಕಾರಣ ಇಲ್ಲ. ಅವರದ್ದು ಏನಿದ್ದರು ವೈಯಕ್ತಿಕ ದ್ವೇಷವಷ್ಟೆ. ಸಿನಿಮಾ ಬಿಡುಗಡೆ ಆಗುವುದು ಪಕ್ಕಾ, ಅಭಿಮಾನಿಗಳು ಸಿನಿಮಾ ನೋಡುವುದು ಪಕ್ಕಾ, ಅಂಥಹಾ ನಕಲಿ ಟ್ರೆಂಡ್ಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ