ಶ್ರೀರಾಮನಿಗೆ ಅಪಮಾನ ಆರೋಪ: ನಯನತಾರಾ ವಿರುದ್ಧ ಪ್ರಕರಣ ದಾಖಲು

Nayanthara: ನಯನತಾರಾ ನಟಿಸಿರುವ ‘ಅನ್ನಪೂರ್ಣಿ’ ಸಿನಿಮಾ ವಿವಾದ ಎಬ್ಬಿಸಿದ್ದು, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ನಯನತಾರಾ, ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶ್ರೀರಾಮನಿಗೆ ಅಪಮಾನ ಆರೋಪ: ನಯನತಾರಾ ವಿರುದ್ಧ ಪ್ರಕರಣ ದಾಖಲು

Updated on: Jan 11, 2024 | 7:10 PM

ನಟಿ ನಯನತಾರಾ (Nayanthara) ವಿರುದ್ಧ ಶ್ರೀರಾಮನಿಗೆ (Sri Ram) ಅಪಮಾನ ಮಾಡಿರುವ ಆರೋಪ ಹೊರಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ನಯನತಾರಾ ನಟಿಸಿರುವ ‘ಅನ್ನಪೂರ್ಣಿ’ ಹೆಸರಿನ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಪ್ರಭು ಶ್ರೀರಾಮನಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ನಯನತಾರಾ ಹಾಗೂ ಸಿನಿಮಾಕ್ಕೆ ಸಂಬಂಧಿಸಿದ ಏಳು ಜನರ ವಿರುದ್ಧ ಮಧ್ಯಪ್ರದೇಶದ ಜಬಲ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲ ದಿನದ ಹಿಂದೆ ಮುಂಬೈನಲ್ಲಿಯೂ ಸಹ ಸಿನಿಮಾದ ವಿರುದ್ಧ ಪ್ರಕರಣ ದಾಖಲಾಗಿದೆ.

ನಯನತಾರಾ ನಟಿಸಿರುವ ‘ಅನ್ನಪೂರ್ಣಿ’ ಹೆಸರಿನ ಸಿನಿಮಾ ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಅಷ್ಟೇನು ಒಳ್ಳೆಯ ಪ್ರದರ್ಶನ ಕಾಣಲಿಲ್ಲ ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆದರೆ ಸಿನಿಮಾಕ್ಕೆ ವಿರೋಧವೂ ವ್ಯಕ್ತವಾಯಿತು. ಸಿನಿಮಾದಲ್ಲಿ ಶ್ರೀರಾಮನ ಅಪಮಾನ ಮಾಡಲಾಗಿದೆ. ಹಿಂದೂ ಸಮುದಾಯದ ಭಾವನೆಗಳಿಗೆ, ಶ್ರೀರಾಮನ ಭಕ್ತರ ಭಾವನೆಗಳಿಗೆ ಧಕ್ಕೆ ಬರುವ ಅಂಶಗಳಿವೆ ಎಂಬ ಆರೋಪ ಎದುರಾಗಿದೆ.

‘ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿಗಳ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖವಿದೆ’ ಎಂಬ ಸಂಭಾಷಣೆ ಸಿನಿಮಾದಲ್ಲಿದೆ. ಈ ಸಂಭಾಷಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ ಸಿನಿಮಾದಲ್ಲಿರುವ ಇತರೆ ಕೆಲವು ದೃಶ್ಯಗಳ ಬಗ್ಗೆಯೂ ಆಕ್ಷೇಪ ಎತ್ತಲಾಗಿದೆ. ಬ್ರಾಹ್ಮಣ ಯುವತಿ ಮಾಂಸಾಹಾರದ ಖಾದ್ಯಗಳನ್ನು ಮಾಡುವುದು, ನಮಾಜು ಮಾಡುವ ದೃಶ್ಯಗಳೂ ಇವೆ. ಇದರ ಬಗ್ಗೆಯೂ ಆಕ್ಷೇಪ ಎತ್ತಲಾಗಿದ್ದು, ಈ ಸಿನಿಮಾ ‘ಲವ್ ಜಿಹಾದ್’ಗೆ ಪ್ರೇರೇಪಣೆ ನೀಡುತ್ತಿದೆ ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ.

ಇದನ್ನೂ ಓದಿ:‘ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ’; ನಯನತಾರಾ ಸಿನಿಮಾ ಡೈಲಾಗ್ ವಿರುದ್ಧ ಎದ್ದಿದೆ ಅಪಸ್ವರ

ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಎಂಬುವರು ಕೆಲ ದಿನದ ಹಿಂದೆ ಸಿನಿಮಾದ ವಿರುದ್ಧ ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು. ಇದೀಗ ಮಧ್ಯ ಪ್ರದೇಶದ ಜಬಲ್‌ಪುರ ಪೊಲೀಸ್ ಠಾಣೆಯಲ್ಲಿ ಸಿನಿಮಾದ ನಟಿ ನಯನತಾರಾ, ನಿರ್ದೇಶಕ ನೀಲೇಶ್ ಕೃಷ್ಣನ್, ನೆಟ್​ಫ್ಲಿಕ್ಸ್​ ಇಂಡಿಯಾದ ಕಂಟೆಂಟ್ ಹೆಡ್ ಮೋನಿಯಾ, ಸಿನಿಮಾದ ನಿರ್ಮಾಪಕ ಹೀಗೆ ಒಟ್ಟು ಏಳು ಜನರ ವಿರುದ್ಧ ಹಿಂದೂ ಸೇವಾ ಪರಿಷತ್ ದೂರು ದಾಖಲಿಸಲಾಗಿದೆ.

ಸಿನಿಮಾದ ಬಗ್ಗೆ ವಿವಾದ ಏಳುತ್ತಿದ್ದಂತೆ ನೆಟ್​ಫ್ಲಿಕ್ಸ್ ‘ಅನ್ನಪೂರ್ಣಿ’ ಸಿನಿಮಾವನ್ನು ತನ್ನ ಒಟಿಟಿ ವೇದಿಕೆಯಿಂದ ತೆಗೆದು ಹಾಕಿದೆ. ಜೀ ಸ್ಟುಡಿಯೋ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಈ ಸಿನಿಮಾವನ್ನು ಹಿಂದೂ ಹಾಗೂ ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶದಿಂದ ಮಾಡಿಲ್ಲ ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Thu, 11 January 24