ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು

ತೆಲುಗಿನ ‘ದಿ ರಾಜಾ ಸಾಬ್’ ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದ ವೇಳೆ ಈ ಕಹಿ ಘಟನೆ ನಡೆದಿದೆ. ಈ ಸಿನಿಮಾದ ನಟಿ ನಿಧಿ ಅಗರ್​ವಾಲ್ ಜೊತೆ ಕೆಲವರು ಅನುಚಿತವಾಗಿ ವರ್ತಿಸಿದ್​ದಾರೆ. ವಿಡಿಯೋ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ಈಗಾಗಲೇ ತನಿಖೆ ಆರಂಭಿಸಿದ್ದಾರೆ.

ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು
Nidhi Agarwal

Updated on: Dec 18, 2025 | 7:25 PM

ನಟಿ ನಟಿ ನಿಧಿ ಅಗರ್​​ವಾಲ್ (Nidhi Agarwal) ಅವರಿಗೆ ಕಿರುಕುಳ ನೀಡಲಾಗಿದೆ. ಹೈದರಾಬಾದ್​​ನಲ್ಲಿ ನಡೆದ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಮಾಲ್​​ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ನಿಧಿ ಅಗರ್​ವಾಲ್ ಅವರು ಪಾಲ್ಗೊಂಡಿದ್ದರು. ಆ ವೇಳೆ ಸಿಕ್ಕಾಪಟ್ಟೆ ಜನ ಸೇರಿದ್ದರು. ನಿಧಿ ಅಗರ್​ವಾಲ್ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆಗ ಕೆಲವರು ಅವರ ಜೊತೆ ಅನುಚಿತವಾಗಿ ವರ್ತಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ‘ಸಹನಾ ಸಹನಾ..’ ಹಾಡು ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಪ್ರಭಾಸ್ ಮತ್ತು ನಿಧಿ ಅಗರ್​ವಾಲ್ ಅವರು ಕಾಣಿಸಿಕೊಂಡಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಖುಷಿಯಿಂದ ನಿಧಿ ಅಗರ್​ವಾಲ್ ಅವರಿಗೆ ಕಹಿ ಅನುಭವ ಆಗಿದೆ. ಜನಸಂದಣಿಯಲ್ಲಿ ಅವರ ಜೊತೆ ಕೆಲವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ.

ನಿಧಿ ಅಗರ್​ವಾಲ್ ಅವರನ್ನು ಜನರು ಮುತ್ತಿಗೆ ಹಾಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಜನರಿಂದ ಕಿರಿಕಿರಿ ಅನುಭವಿಸಿದ ನಿಧಿ ಅವರನ್ನು ಬಾಡಿಗಾರ್ಡ್​​ಗಳು ರಕ್ಷಿಸಿದ್ದಾರೆ. ಅವರನ್ನು ಕರೆದುಕೊಂಡು ಬಂದು ಕಾರಿನಲ್ಲಿ ಕೂರಿಸುವ ವೇಳೆಗೆ ಬಾಡಿಗಾರ್ಡ್​​ಗಳು ಸುಸ್ತಾಗಿದ್ದಾರೆ. ಕಾರಿನೊಳಗೆ ಬಂದು ಕುಳಿತ ನಿಧಿ ಅಗರ್​ವಾಲ್ ಅವರು ವಿಪರೀತ ಕೋಪ ಮಾಡಿಕೊಂಡಿರುವುದು ಕಾಣಿಸಿದೆ.

ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸೂಕ್ತ ಅನುಮತಿ ಪಡೆಯದೆಯೇ ಕಾರ್ಯಕ್ರಮ ನಡೆಸಿದ ಆಯೋಜಕರ ಮೇಲೆ ಕೇಸ್ ದಾಖಲಾಗಿದೆ. ಬುಧವಾರ (ಡಿಸೆಂಬರ್ 17) ಸಂಜೆ 5 ಗಂಟೆಗೆ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಗಂಟೆಗಳ ಕಾಲ ತಡವಾಯಿತು. ಅಷ್ಟು ಹೊತ್ತಿಗಾಗಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಇದನ್ನೂ ಓದಿ: ಸಿಕ್ಕಿದ್ದೇ ಚಾನ್ಸ್ ಅಂತ ಕಂಡ ಕಂಡಲ್ಲಿ ಮುಟ್ಟಿದ್ರು; ಮಾಲ್​​ನಲ್ಲಿ ನಟಿಗೆ ಕಿರುಕುಳ

ನಿಧಿ ಅಗರ್​ವಾಲ್ ಅವರಿಗೆ ಈ ಘಟನೆಯಿಂದ ತುಂಬ ಬೇಸರ ಆಗಿದೆ. ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬಗ್ಗೆ ನಿಧಿ ಅಗರ್​ವಾಲ್ ಅವರು ಇನ್ನೂ ಹೇಳಿಕೆ ನೀಡಿಲ್ಲ. ಜನರು ನಡೆದುಕೊಂಡ ರೀತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.