ಸೂಪರ್ ಹಿಟ್ ‘ಬೇಬಿ’ ಸಿನಿಮಾದ ವಿರುದ್ಧ ಪ್ರಕರಣ ದಾಖಲು, ಇಕ್ಕಟ್ಟಿನಲ್ಲಿ ಚಿತ್ರತಂಡ
Baby Movie: ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಬೇಬಿ’ ವಿರುದ್ಧ ಗಂಭೀರ ಆರೋಪ ಎದುರಾಗಿದ್ದು, ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.

ವಿಜಯ್ ದೇವರಕೊಂಡ (Vijay Deverakonda) ಸಹೋದರ ಆನಂದ್ ದೇವರಕೊಂಡ (Anand Deverakonda) ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಬೇಬಿ’ ಸಿನಿಮಾ 2023ರ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಯ್ತು. ಅತ್ಯಂತ ಕಡಿಮೆ ಬಜೆಟ್ನಲ್ಲಿ ಯಾವುದೇ ಸ್ಟಾರ್ ನಟ, ನಟಿಯರಿಲ್ಲದೆ ಒಂದು ಸಾಮಾಜಿಕ ವಿಷಯವನ್ನು ಇಟ್ಟುಕೊಂಡು ಮಾಡಲಾಗಿದ್ದ ಈ ಸಿನಿಮಾವನ್ನು ಯುವಕರು ಬಹುವಾಗಿ ಮೆಚ್ಚಿದರು. ಸಿನಿಮಾದ ಕಥಾವಸ್ತು, ಅದನ್ನು ಟ್ರೀಟ್ ಮಾಡಿರುವ ರೀತಿಯ ಬಗ್ಗೆ ಅಪಸ್ವರಗಳು ಎದ್ದವಾದರೂ ಸಿನಿಮಾ ದೊಡ್ಡ ಹಿಟ್ ಆಯ್ತು. ಆದರೆ ಇದೀಗ ‘ಬೇಬಿ’ ಚಿತ್ರತಂಡದ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು ಸಿನಿಮಾ ತಂಡದ ವಿರುದ್ಧ ದೂರು ದಾಖಲಾಗಿದೆ.
‘ಬೇಬಿ’ ಸಿನಿಮಾದ ಕತೆಯನ್ನು ನಿರ್ದೇಶಕರು ಬೇರೊಂದು ಕಿರುಚಿತ್ರದಿಂದ ಕದ್ದಿದ್ದಾರೆ. ‘ಬೇಬಿ’ ಸಿನಿಮಾದ ಕತೆ ಸ್ವಂತದ್ದಲ್ಲವೆಂದು ಕಿರುಚಿತ್ರ ನಿರ್ದೇಶಕರೊಬ್ಬರು ಆರೋಪ ಮಾಡಿದ್ದು ದೂರು ದಾಖಲಿಸಿದ್ದಾರೆ. ಹೈದರಾಬಾದ್ನ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಶಿರಿನ್ ಸಾಯಿಶ್ರೀರಾಮ್ ಹೆಸರಿನ ಕಿರುಚಿತ್ರ ನಿರ್ದೇಶಕನೊಬ್ಬ ‘ಬೇಬಿ’ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ದೂರು ನೀಡಿದ್ದು, ‘ಬೇಬಿ’ ಸಿನಿಮಾವು ತಮ್ಮ ಕಿರುಚಿತ್ರದ ಕತೆಯನ್ನು ಕದ್ದು ಮಾಡಲಾದ ಸಿನಿಮಾ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ತೀನಿ ಅನ್ನೋದು ಸುಳ್ಳು..
ಶಿರಿನ್ ಸಾಯಿಶ್ರೀರಾಮ್ ಹೇಳಿರುವಂತೆ ತಾವು ‘ಪ್ರೇಮಿಂಚೊದ್ದು’ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿ, ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದು, ‘ಬೇಬಿ’ ಸಿನಿಮಾದ ನಿರ್ದೇಶಕ ಸಾಯಿ ರಾಜೇಶ್ ಹಾಗೂ ನಿರ್ಮಾಪಕ ಶ್ರೀನಿವಾಸ್ ಕುಮಾರ್ ಅವರುಗಳು ನನ್ನ ಅನುಮತಿ ಇಲ್ಲದೆ ಕತೆಯನ್ನು ತೆಗೆದುಕೊಂಡು ತಮ್ಮ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಿರ್ದೇಶಕ ಶಿರಿನ್ ಸಾಯಿಶ್ರೀರಾಮ್ ಈ ಮೊದಲು ‘ಬೇಬಿ’ ಸಿನಿಮಾದ ನಿರ್ದೇಶಕ ಸಾಯಿ ರಾಜೇಶ್ ಅವರಿಗೆ ‘ಕನ್ನ ಪ್ಲೀಸ್’ ಹೆಸರಿನ ಕತೆಯನ್ನು ಹೇಳಿದ್ದರಂತೆ. ಅದಾದ ಬಳಿಕ ಅದೇ ಕತೆಯನ್ನು ‘ಪ್ರೇಮಿಂಚೊದ್ದು’ ಹೆಸರಿನಲ್ಲಿ ಕಿರುಸಿನಿಮಾ ಮಾಡಿದ್ದರಂತೆ. ಆದರೆ ಸಾಯಿ ರಾಜೇಶ್ ತಾವು ಹೇಳಿದ ಕತೆಯನ್ನು ನಿರ್ಮಾಪಕ ಎಸ್ಕೆಎನ್ಗೆ ಹೇಳಿರುವುದಾಗಿ ಶಿರಿನ್ ಸಾಯಿಶ್ರೀರಾಮ್ ಆರೋಪ ಮಾಡಿದ್ದಾರೆ.
‘ಬೇಬಿ’ ಸಿನಿಮಾವು ಒಬ್ಬಳೇ ಯುವತಿ ಒಂದೇ ಸಮಯದಲ್ಲಿ ಇಬ್ಬರು ಯುವಕರನ್ನು ಪ್ರೇಮಿಸುವ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಯುವತಿಯರನ್ನು ಕೀಳಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸಿನಿಮಾದಲ್ಲಿ ನೀಡಲಾಗಿರುವ ಸಂದೇಶವೂ ಸಹ ಸೂಕ್ತವಾಗಿಲ್ಲ, ಇದು ಯುವತಿಯರ ವಿರುದ್ಧ ದ್ವೇಷ ಹೆಚ್ಚಿಸುವಂತಿದೆ ಎಂಬ ಆರೋಪ ಕೇಳಿ ಬಂದಿತ್ತು. ಏನೇ ಆದರೂ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ದೊಡ್ಡ ಹಿಟ್ ಆಯ್ತು. ಈಗ ಹಿಂದಿಗೂ ಸಹ ಈ ಸಿನಿಮಾ ರೀಮೇಕ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ