‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಅಶ್ಲೀಲತೆ: ಸಿಬಿಎಫ್​​ಸಿ ಮುಖ್ಯಸ್ಥ ಹೇಳಿದ್ದೇನು?

Toxic movie scene: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವರು ಮೂಗು ಮುರಿದಿದ್ದಾರೆ. ಈಗಾಗಲೇ ಮಕ್ಕಳ ಆಯೋಗ, ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಸಿಬಿಎಫ್​​ಸಿಗೆ ಸಹ ಈ ಬಗ್ಗೆ ದೂರು ನೀಡಲಾಗಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರವನ್ನೇ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದೀಗ ಸ್ವತಃ ಸಿಬಿಎಫ್​​ಸಿಯ ಮುಖ್ಯಸ್ಥ ಪ್ರಸೂನ್ ಜೋಶಿ ‘ಟಾಕ್ಸಿಕ್’ ಸಿನಿಮಾ ಟೀಸರ್​ ಬಗ್ಗೆ ಮಾತನಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಅಶ್ಲೀಲತೆ: ಸಿಬಿಎಫ್​​ಸಿ ಮುಖ್ಯಸ್ಥ ಹೇಳಿದ್ದೇನು?
Toxic

Updated on: Jan 21, 2026 | 4:07 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿ ಕೆಲ ವಾರಗಳಾಗಿವೆ. ಟೀಸರ್, ಈಗಾಗಲೇ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸಹ ಕೋಟ್ಯಂತರ ಮಂದಿ ‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿದ್ದಾರೆ. ಟೀಸರ್​​ನ ಗುಣಮಟ್ಟವನ್ನು ಬಹುವಾಗಿ ಕೊಂಡಾಡಿದ್ದಾರಾದರೂ ಕೆಲವರು, ಟೀಸರ್​​ನಲ್ಲಿ ಅನವಶ್ಯಕ ಅಶ್ಲೀಲತೆ ಇದೆ ಎಂದು ಮೂಗು ಮುರಿದಿದ್ದಾರೆ. ಕೆಲವರು ಈಗಾಗಲೇ ಮಕ್ಕಳ ಆಯೋಗ, ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಸಿಬಿಎಫ್​​ಸಿಗೆ ಸಹ ಈ ಬಗ್ಗೆ ದೂರು ನೀಡಲಾಗಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರವನ್ನೇ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದೀಗ ಸ್ವತಃ ಸಿಬಿಎಫ್​​ಸಿಯ ಮುಖ್ಯಸ್ಥ ಪ್ರಸೂನ್ ಜೋಶಿ ‘ಟಾಕ್ಸಿಕ್’ ಸಿನಿಮಾ ಟೀಸರ್​ ಬಗ್ಗೆ ಮಾತನಾಡಿದ್ದಾರೆ.

‘ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ನೀಡದ ಹೊರತು ನಾನು ಆ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಆದರೆ ಕೆಲವೊಮ್ಮೆ, ಯೂಟ್ಯೂಬ್ ಮತ್ತು ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ನೋಡುವ ಬಹಳಷ್ಟು ವಿಷಯಗಳು ಸೆನ್ಸಾರ್ ಆಗಿರುವುದಿಲ್ಲ, ಆದರೆ ಜನರು ಅದು ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಆಗಿ ಬಂದಿದೆ ಎಂದು ಭಾವಿಸುತ್ತಾರೆ. ಆದರೆ ಅದು ಸೆನ್ಸಾರ್ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ’ ಎಂದಿದ್ದಾರೆ. ಆ ಮೂಲಕ ‘ಟಾಕ್ಸಿಕ್’ ಟೀಸರ್​​​ನಲ್ಲಿ ಸೆನ್ಸಾರ್ ಆಗಬಹುದಾದ ಅಂಶಗಳು ಇವೆಯೆಂದು ಪರೋಕ್ಷವಾಗಿ ಹೇಳಿದ್ದಾರೆ.

ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಬಾರದು ಎಂಬ ಆಗ್ರಹ ಇದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾನು ಈಗಲೇ ಏನನ್ನೂ ಖಡಾ ಖಂಡಿತವಾಗಿ ಹೇಳಲು ಬರುವುದಿಲ್ಲ. ಡಿಜಿಟಲ್ ಮಾಧ್ಯಮಗಳಲ್ಲಿ ಜನ ನೋಡುವ ಬಹಳಷ್ಟು ವಿಷಯಗಳು ಸೆನ್ಸಾರ್ ಪ್ರಕ್ರಿಯೆಯ ಮೂಲಕ ಹಾದು ಹೋಗಿರುವುದಿಲ್ಲ. ಆದರೆ ಜನ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಪಡೆದಿವೆ ಎಂದುಕೊಂಡು ಒಟಿಟಿ, ಯೂಟ್ಯೂಬ್​​ಗಳಲ್ಲಿ ಸಿನಿಮಾಗಳನ್ನು ನೋಡುತ್ತಾರೆ, ಇದು ಸರಿಯಲ್ಲ, ಅನ್ಯಾಯ’ ಎಂದಿದ್ದಾರೆ ಆ ಮೂಲಕ ಒಟಿಟಿ ಮತ್ತು ಯೂಟ್ಯೂಬ್ ಕಂಟೆಂಟ್​​ಗಳೂ ಸಹ ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸೂಸ್ ಜೋಶಿ ಅವರಿಗೆ ‘ಜನ ನಾಯಗನ್’ ಸಿನಿಮಾದ ಬಗ್ಗೆ ಕೇಳಲಾದ ಪ್ರಶ್ನೆಯ ಬಗ್ಗೆ ಉತ್ತರಿಸಲು ನಿರಾಕರಿಸಿದ ಪ್ರಸೂನ್ ಜೋಶಿ, ‘ಆ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ಹಾಗಾಗಿ ಆ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.

ಇದನ್ನೂ ಓದಿ:ನನ್ನ ಸಿನಿಮಾ ನೋಡಿ ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್; ಅಪರೂಪದ ಫೋಟೋ ವೈರಲ್

‘ಟಾಕ್ಸಿಕ್’ ಸಿನಿಮಾದ ಟೀಸರ್ ಕುರಿತಾಗಿ ಕರ್ನಾಟಕ ಎಎಪಿ ಮಹಿಳಾ ಘಟಕದ ಸದಸ್ಯೆಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ಸಿಬಿಎಫ್​​ಸಿಗೆ ಕರೆ ಮಾಡಿದ್ದು, ‘ಟಾಕ್ಸಿಕ್’ ಸಿನಿಮಾನಲ್ಲಿ ಸಾಕಷ್ಟು ಅಶ್ಲೀಲ ದೃಶ್ಯಗಳಿದ್ದು, ಇದು ಮಕ್ಕಳು, ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗಾಗಿ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಅನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಯಶ್ ಹಾಗೂ ಕೆವಿಎನ್​​ ಒಟ್ಟಾಗಿ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ