‘ಚಾಮುಂಡಿ ಬೆಟ್ಟದ ಮೇಲೆ ಒಂದು ಸಾವಿರ ಬಾರಿ ನನ್ನ ಹುಡುಗಿ ಹೆಸರು ಬರೆದು ಅರೆಸ್ಟ್​ ಆಗಿದ್ದೆ’

ಚಕ್ರವರ್ತಿ ವ್ಯಕ್ತಿತ್ವ ಎಷ್ಟು ವಿಚಿತ್ರವೋ ಅವರ ಜೀವನದಲ್ಲಿ ನಡೆದ ಘಟನೆಗಳೂ ಕೂಡ ಅಷ್ಟೇ ವಿಚಿತ್ರ. ಅವರು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅರೆಸ್ಟ್ ಆದ ಬಗ್ಗೆ ಹೇಳಿಕೊಂಡಿದ್ದಾರೆ.

ಚಾಮುಂಡಿ ಬೆಟ್ಟದ ಮೇಲೆ ಒಂದು ಸಾವಿರ ಬಾರಿ ನನ್ನ ಹುಡುಗಿ ಹೆಸರು ಬರೆದು ಅರೆಸ್ಟ್​ ಆಗಿದ್ದೆ
ಪ್ರಶಾಂತ್​-ಚಕ್ರವರ್ತಿ
Edited By:

Updated on: Apr 29, 2021 | 3:39 PM

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ಯಾವ ಸಮಯದಲ್ಲಿ ಹೇಗಿರುತ್ತಾರೆ ಎಂದು ಹೇಳುವುದು ಕೊಂಚ ಕಷ್ಟವೇ. ಕೆಲವೊಮ್ಮೆ ಅವರು ಪ್ರೀತಿಯಿಂದ ಮಾತನಾಡಿದರೆ ಮರುಕ್ಷಣವೇ ರಾಂಗ್​ ಆಗುತ್ತಾರೆ. ಅವರ ವ್ಯಕ್ತಿತ್ವ ಎಷ್ಟು ವಿಚಿತ್ರವೋ ಅವರ ಜೀವನದಲ್ಲಿ ನಡೆದ ಘಟನೆಗಳೂ ಕೂಡ ಅಷ್ಟೇ ವಿಚಿತ್ರ. ಅವರು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅರೆಸ್ಟ್ ಆದ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಪ್ರೀತಿಸಿದ ಹುಡುಗಿಗಾಗಿ ಅನ್ನೋದು ವಿಚಿತ್ರ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟ ಪ್ರಿಯಾಂಕಾ ತಿಮ್ಮೇಶ್​ ಜತೆ ಚಕ್ರವರ್ತಿ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಮೂವರು ಹೆಚ್ಚು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಏಪ್ರಿಲ್​ 28ರ ಎಪಿಸೋಡ್​ನಲ್ಲೂ ಹೀಗೆಯೇ ಆಗಿದೆ. ಪ್ರಿಯಾಂಕಾ ಜತೆ ಮಾತನಾಡುವಾಗ ಚಕ್ರವರ್ತಿ ಕಾಲೇಜಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ನನ್ನ ಮೊದಲ ಪ್ರೀತಿ​ ಪರಿಮಳ ಅಂತ. ಹಾಸ್ಟೆಲ್ ಜೀವನ ಸಾಕಾಗಿ 12 ಜನರು ಒಂದೇ ರೂಂನಲ್ಲಿ ಇದ್ದೆವು. ಆಗ ನನಗೆ ಪರಿಮಳ ಎನ್ನುವ ಹುಡುಗಿ ಒಂದು ಚಾಲೆಂಜ್​ ಕೊಟ್ಟಳು. ಪರಿಮಳ ಎನ್ನುವ ಹೆಸರನ್ನು ನೋಟ್​ಬುಕ್​ ಅಲ್ಲದೆ, ಹೊರಗಡೆ ಎಲ್ಲಾದರೂ ಬರೆಯಬೇಕು. ಹಾಗೆ ಬರೆದರೆ ಕಾಫಿ ಕುಡಿಯೋಕೆ ಕರೆದುಕೊಂಡು ಹೋಗ್ತೀನಿ ಎಂದಿದ್ದಳು ಎಂದು ಚಾಲೆಂಜ್​ ಬಗ್ಗೆ ಚಕ್ರವರ್ತಿ ಮಾಹಿತಿ ನೀಡಿದ್ದಾರೆ.

ಆಯ್ತು ಬರೀತಿನಿ ಎಂದು ನಾನು ಚಾಲೆಂಜ್​ ಸ್ವೀಕರಿಸಿದೆ. ಚಾಮುಂಡಿ ಬೆಟ್ಟ ಹತ್ತಿ, ಅಲ್ಲಿದ್ದ ಕಲ್ಲು-ಬಂಡೆಗಳ ಮೇಲೆ ಪರಿಮಳ ಎಂದು ಬರೆದೆ. ಒಂದು ಸಾವಿರ ಬಾರಿ ಪರಿಮಳ ಎಂದು ಬರೆಯಲು ನನಗೆ 15 ದಿನಗಳೇ ಬೇಕಾದವು ಎಂದು ಚಕ್ರವರ್ತಿ ವಿವರಿಸಿದ್ದಾರೆ.

ಬರೆದಿದ್ದು ಪೂರ್ಣಗೊಂಡ ನಂತರ ಬೈಕ್​ನಲ್ಲಿ​ ಅವಳನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋದೆ. ನಾನು ಬರೆದಿರುವುದನ್ನು ನೋಡುತ್ತಾ ಬಂದಳು. ನಿನಗೇನು ಹುಚ್ಚಾ ಎಂದು ಕೇಳಿದಳು. ನಾನು ಹೌದು ಅಂದೆ. ಅವಳೇ ನನಗೆ ಪ್ರಪೋಸ್​ ಮಾಡಿದಳು. ನಾನು ಒಪ್ಪಿಕೊಂಡೆ. ಅದುವೇ ನನ್ನ ಮೊದಲ ಪ್ರೀತಿ.

ಇದಾದ ಒಂದು ವಾರದ ನಂತರ ಕಾಲೇಜು ಬಳಿ ಪೊಲೀಸರು ಬಂದರು. ಇದನ್ನು ಬರೆದಿದ್ದು ಯಾರು ಎಂದು ಕೇಳಿದರು. ನಾನೇ ಬರೆದಿದ್ದು ಎಂದು ಧೈರ್ಯವಾಗಿ ಹೇಳಿದೆ. ಪೊಲೀಸ್​ ಠಾಣೆಗೆ ಕರೆದೊಯ್ದರು. ನಾಲ್ಕೇಟು ಹೊಡೆದರು. ಸ್ಟೂಡೆಂಟ್​ ಎನ್ನುವ ಕಾರಣಕ್ಕೆ ನನ್ನನ್ನು ಬಿಟ್ಟು ಕಳುಹಿಸಿದರು ಎಂದು ಕಾಲೇಜು ಘಟನೆಯನ್ನು ಚಕ್ರವರ್ತಿ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ