ಬಾಲಿವುಡ್ನಲ್ಲಿ (Bollywood) ಈಗ ದಕ್ಷಿಣ ಭಾರತದ ಸಿನಿಮಾಗಳು ಪಾರುಪತ್ಯ ಸಾಧಿಸಿವೆ. ಆದರೆ, ಮೊದಲು ಈ ರೀತಿ ಇರಲಿಲ್ಲ. ಬಾಲಿವುಡ್ ಎಂದರೆ ಭಾರತೀಯ ಚಿತ್ರರಂಗ, ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂದು ಬಿಂಬಿಸಲಾಗಿತ್ತು. ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಾದೇಶಿಕ ಸಿನಿಮಾಗಳು ಎನ್ನುವ ಹಣೆಪಟ್ಟಿ ಕಟ್ಟಲಾಗಿತ್ತು. ಇದರಿಂದ ಸ್ಟಾರ್ ನಟ ಚಿರಂಜೀವಿಗೆ (Chiranjeevi) ಅವಮಾನ ಆಗಿತ್ತು. ದಕ್ಷಿಣದವರನ್ನು ಈ ರೀತಿ ಕಡೆಗಣಿಸಿದ್ದಕ್ಕೆ ತುಂಬಾನೇ ಬೇಸರ ಆಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದಾರೆ. ಒಂದು ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಅದು 1989ರಲ್ಲಿ ನಡೆದ ಘಟನೆ. ಚಿರಂಜೀವಿ ನಟನೆಯ ‘ರುದ್ರವೇಣಿ’ ಸಿನಿಮಾಗೆ ‘ನರ್ಗೀಸ್ ದತ್ ಅವಾರ್ಡ್’ ಸಿಕ್ಕಿತ್ತು. ಈ ಅವಾರ್ಡ್ ಪಡೆಯಲು ಅವರು ದೆಹಲಿಗೆ ತೆರಳಿದ್ದರು. ಈ ಕಾರ್ಯಕ್ರಮದ ಹಿಂದಿನ ದಿನ ಒಂದು ಟೀ ಪಾರ್ಟಿ ಏರ್ಪಡಿಸಲಾಗಿತ್ತು. ಇದರಲ್ಲಿ ಚಿರಂಜೀವಿ ಭಾಗಿ ಆಗಿದ್ದರು.
ಪಾರ್ಟಿ ಏರ್ಪಡಿಸಿದ್ದ ಸ್ಥಳದಲ್ಲಿ ಪೃಥ್ವಿರಾಜ್ ಕಪೂರ್ ಅವರಿಂದ ಹಿಡಿದು ಅಮಿತಾಭ್ ಬಚ್ಚನ್ವರೆಗೆ ಎಲ್ಲಾ ಬಾಲಿವುಡ್ ಸ್ಟಾರ್ ನಟರ ಫೋಟೋಗಳಿದ್ದವು. ಅವರು ಮಾಡಿದ ಸಾಧನೆ ಏನು ಎಂಬುದನ್ನು ಬರೆಯಲಾಗಿತ್ತು. ಆದರೆ, ದಕ್ಷಿಣ ಭಾರತದ ಖ್ಯಾತ ನಟರ ಫೋಟೋಗಳು ಅಲ್ಲಿ ಇರಲಿಲ್ಲ.
‘ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಏನನ್ನಾದರೂ ಬರೆದಿರುತ್ತಾರೋ ಎಂಬುದನ್ನು ನೋಡಿದೆ. ಆದರೆ, ಅಲ್ಲಿ ಜಯಲಲಿತಾ-ಎಂಜಿಆರ್ ಒಟ್ಟಾಗಿ ಇರುವ ಒಂದು ಸ್ಟಿಲ್ ಹಾಗೂ ಪ್ರೇಮ್ ನಜೀರ್ ಫೋಟೋವನ್ನು ಹಾಕಿ, ಇದಕ್ಕೆ ಅವರು ಅದನ್ನು ದಕ್ಷಿಣ ಭಾರತದ ಸಿನಿಮಾ ಎಂದು ಕರೆದಿದ್ದರು. ದಿಗ್ಗಜರಾದ ರಾಜ್ಕುಮಾರ್, ವಿಷ್ಣುವರ್ಧನ್, ಎನ್.ಟಿ. ರಾಮರಾವ್, ನಾಗೇಶ್ವರರಾವ್, ಶಿವಾಜಿ ಗಣೇಶನ್ ಅಥವಾ ನಮ್ಮ ಇಂಡಸ್ಟ್ರಿಯ ಖ್ಯಾತ ಚಿತ್ರ ನಿರ್ದೇಶಕರನ್ನು ಅವರು ಗುರುತಿಸಲಿಲ್ಲ. ಆ ಕ್ಷಣ ನನಗೆ ತುಂಬಾ ಅವಮಾನವಾಯಿತು. ಅವರು ಹಿಂದಿ ಚಿತ್ರರಂಗವನ್ನು ಭಾರತೀಯ ಸಿನಿಮಾ ಎಂದು ಬಿಂಬಿಸಿದರು. ಇತರ ಚಿತ್ರಗಳನ್ನು ಪ್ರಾದೇಶಿಕ ಸಿನಿಮಾಗಳು ಎಂದು ವರ್ಗೀಕರಿಸಿದರು ಮತ್ತು ಗೌರವವನ್ನು ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಚಿರಂಜೀವಿ.
‘ಆರ್ಆರ್ಆರ್ ಚಿತ್ರದಿಂದ ನಮ್ಮ ನಿರ್ದೇಶಕರು, ನಟರು ಹಾಗೂ ಇಲ್ಲಿನ ಬರಹಗಾರರನ್ನು ಅವರು ಗುರುತಿಸುವಂತಾಯಿತು. ಯಶ್ ನಟನೆಯ ಕೆಜಿಎಫ್ 2 ಹಾಗೂ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಮಾಡಿದ ಸಾಧನೆ ಕೂಡ ದೊಡ್ಡದು. ಈ ಮೂರು ಚಿತ್ರಗಳ ಯಶಸ್ಸಿನಿಂದ ನಮ್ಮ ಹೀರೋಗಳು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?
Published On - 1:55 pm, Thu, 28 April 22