ಚಿರಂಜೀವಿ ಹಾಗೂ ಬಾಲಕೃಷ್ಣ ಕೆಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಪ್ರತಿಸ್ಪರ್ಧಿಗಳು. ಇಬ್ಬರಿಗೂ ಭಾರಿ ದೊಡ್ಡ ಅಭಿಮಾನಿ ವರ್ಗವಿದೆ. ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದು ಸಿನಿಮಾಗಳನ್ನು ಮಾಡಿಕೊಂಡು ಬರತ್ತಲಿದ್ದಾರೆ. ಅವರ ಅಭಿಮಾನಿಗಳು ಸಹ ಪರಸ್ಪರರ ಮೇಲೆ ಜಿದ್ದಿಗೆ ಬಿದ್ದು ಹಲವು ಬಾರಿ ಕೈ-ಕೈ ಮಿಲಾಯಿಸಿದ್ದಿದೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈಗ ವೃತ್ತಿ ಬದುಕಿನ ಸಂಧ್ಯಾ ಕಾಲದಲ್ಲಿ ಚಿರಂಜೀವಿ ಮತ್ತು ಬಾಲಕೃಷ್ಣ ಒಟ್ಟಿಗೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.
ಬಾಲಕೃಷ್ಣ, ಚಿತ್ರರಂಗಕ್ಕೆ ಕಾಲಿರಿಸಿ 50 ವರ್ಷವಾದ ಬೆನ್ನಲ್ಲೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕನ್ನಡದ ನಟರಾದ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ದುನಿಯಾ ವಿಜಯ್ ಸಹ ಭಾಗಿಯಾಗಿದ್ದರು. ಬಾಲಕೃಷ್ಣ ಅವರ ಸಿನಿಮಾ ಸಂಬಂಧಿ ಕಾರ್ಯಕ್ರಮಕ್ಕೆ ಚಿರಂಜೀವಿ ಬಂದು ದಶಕಗಳೇ ಆಗಿದ್ದವು. 50ನೇ ವರ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಿರಂಜೀವಿ ಕೆಲವು ಅಪರೂಪದ ವಿಷಯಗಳನ್ನು ಹೇಳುವ ಜೊತೆಗೆ ಬಾಲಯ್ಯ ಜೊತೆಗೆ ಒಟ್ಟಿಗೆ ನಟಿಸುವ ಇಚ್ಛೆಯನ್ನೂ ಸಹ ವ್ಯಕ್ತಪಡಿಸಿದರು.
ನಂದಮೂರಿ ತಾರಕ ರಾಮಾರಾವ್ ಅವರ ಶತಮಾನೋತ್ಸವ ಆಚರಣೆ ಮಾಡುತ್ತಿರುವ ವರ್ಷದಲ್ಲಿಯೇ ಬಾಲಕೃಷ್ಣ ಅವರ ಸುವರ್ಣೋತ್ಸವ ಆಚರಿಸುತ್ತಿರುವುದು ಅದ್ಭುತವಾದ ವಿಷಯ. ತಂದೆ ರಾಮಾರಾವ್ ಅವರು ಜಗತ್ತೇ ಮೆಚ್ಚಿರುವ ನಟನಾಗಿರುವಾಗ ಜನ ಬಾಲಯ್ಯನನ್ನು ತಂದೆಯೊಂದಿಗೆ ಹೋಲಿಸಿ ನೋಡುವುದು ಸಹಜ. ಆದರೆ ಬಾಲಯ್ಯ ಆ ಸವಾಲನ್ನು ಮೀರಿಸಿ, ತಂದೆಯಂತೆ ರಾಮ, ಕೃಷ್ಣ, ಶ್ರೀಕೃಷ್ಣದೇವರಾಯ ಇನ್ನೂ ಹತ್ತು ಹಲವಾರು ಪಾತ್ರಗಳಲ್ಲಿ ನಟಸಿ ತಂದೆಗೆ ತಕ್ಕ ಮಗ ಎನಿಸಿಕೊಂಡರು. ವಿಶೇಷವೆಂದರೆ ರಾಮಾರಾವ್ ಅವರು ಮಾಡದ ಪಾತ್ರವನ್ನೂ ಸಹ ಮಾಡಿದರು. ಅದುವೇ ಫ್ಯಾಕ್ಷನಿಸ್ಟ್ ಪಾತ್ರ’ ಎಂದರು ಚಿರಂಜೀವಿ.
ಇದನ್ನೂ ಓದಿ:ಕೇವಲ ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಹೆಚ್ ಸಿ ಬಾಲಕೃಷ್ಣ
‘ಫ್ಯಾಕ್ಷನಿಸ್ಟ್ ಪಾತ್ರಗಳಿಗೆ ಹೊಸ ರೂಪ ತಂದುಕೊಟ್ಟಿದ್ದು ಬಾಲಯ್ಯ, ರಾಯಲ ಸೀಮ ಹೀರೋ ಪಾತ್ರವನ್ನು ಅವರಷ್ಟು ಚೆನ್ನಾಗಿ ಇನ್ಯಾರೂ ಮಾಡಲು ಸಾಧ್ಯವಿಲ್ಲ. ಅವರ ‘ಸಮರ ಸಿಂಹಾ ರೆಡ್ಡಿ’ ಸಿನಿಮಾದಿಂದಲೇ ಸ್ಪೂರ್ತಿ ಪಡೆದು ನಾನು ‘ಇಂದ್ರ’ ಸಿನಿಮಾ ಮಾಡಿದೆ. ‘ಇಂದ್ರ’ ಸಿನಿಮಾ ಮಾಡಿದಾಗ, ಬಾಲಯ್ಯನನ್ನು ಮೀರಿಸಿ ಜನರಿಗೆ ಹತ್ತಿರವಾಗಲು ಸಾಧ್ಯವಾ ಎಂಬ ಅಳುಕಿತ್ತು. ಆದರೆ ಜನ ಆ ಸಿನಿಮಾವನ್ನೂ ಗೆಲ್ಲಿಸಿದರು. ಈಗ ಸಿನಿಮಾಗಳಿಗೆ ಸೀಕ್ವೆಲ್-ಪ್ರೀಕ್ವೆಲ್ ಬರುತ್ತಿವೆ. ಯಾರಾದರೂ ನಿರ್ದೇಶಕರು, ‘ಇಂದ್ರ’ ಮತ್ತು ‘ಸಮರಸಿಂಹಾ ರೆಡ್ಡಿ’ ಪಾತ್ರಗಳನ್ನು ಒಂದೇ ಸಿನಿಮಾದಲ್ಲಿ ಹಾಕಿ ಕತೆ ರೆಡಿ ಮಾಡಿದರೆ ನಾನಂತೂ ನಟಿಸಲು ರೆಡಿ ಎಂದರು. ಬಾಲಯ್ಯ ಸಹ ನಾನು ಸಹ ರೆಡಿ’ ಎಂದರು. ವೇದಿಕೆ ಮುಂಭಾಗದಲ್ಲಿ ಇದ್ದ ಬೊಯಪಾಟಿ ಶ್ರೀನು ಹಾಗೂ ಇನ್ನಿತರರಿಗೆ ಕತೆ ಮಾಡುವಂತೆ ಸವಾಲು ಸಹ ಹಾಕಿದರು.
ಇದನ್ನೂ ಓದಿ:ಶಾಸಕ ಪ್ರದೀಪ್ ಈಶ್ವರ್‌ಗೆ ಟಾಲಿವುಡ್‌ನಲ್ಲಿ ಬೇಡಿಕೆ, ಚಿರಂಜೀವಿ ಜೊತೆ ನಟಿಸಲು ಆಫರ್
ತಮ್ಮ ಬಂಧದ ಬಗ್ಗೆ ಮಾತನಾಡಿದ ಚಿರಂಜೀವಿ, ‘ನಾನು ಕಾಲೇಜಿನಲ್ಲದ್ದಾಗ ಎನ್ಟಿಆರ್, ನಾಗೇಶ್ವರರಾವ್ ಇನ್ನಿತರೆ ನಟರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಿದ್ದನ್ನು ಗಮನಿಸಿದ್ದೆ. ಆದರೆ ನಾನು ನಟನಾದಾಗ ಹೀಗೆ ಆಗಬಾರದೆಂದು, ದಕ್ಷಿಣದಲ್ಲಿ ನಾನು ಪಾರ್ಟಿ ಸಂಸ್ಕೃತಿ ಪ್ರಾರಂಭಿಸಿದೆ. ಯಾರದ್ದೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಂಡರೆ, ಹುಟ್ಟುಹಬ್ಬಗಳು ಆದರೆ ಆಗ ಇದ್ದ ಮುಖ್ಯ ನಟರೆಲ್ಲ ಅಲ್ಲಿ ಭೇಟಿ ಆಗಿ ಕೆಲ ಸಮಯ ಕಳೆಯುವಂತೆ ಮಾಡಿದೆ. ಆಗೆಲ್ಲ ಬಾಲಯ್ಯ, ವೆಂಕಟೇಶ್, ನಾಗಾರ್ಜುನ ಇನ್ನೂ ಹಲವರು ಪಾರ್ಟಿಗೆ ಬರುತ್ತಿದ್ದರು. ಆ ಮೂಲಕ ನಾವೆಲ್ಲ ಒಟ್ಟಿಗೆ ಇದ್ದೇವೆ ಎಂಬುದನ್ನು ಜನರಿಗೆ ತೋರಿಸುತ್ತಿದ್ದೆವು’ ಎಂದಿದ್ದಾರೆ ಚಿರಂಜೀವಿ.
‘ಬಾಲಯ್ಯ ಬಹಳ ವರ್ಷಗಳಿಂದಲೂ ನನಗೆ ಆತ್ಮೀಯ ಗೆಳೆಯ. ನಮ್ಮ ಮನೆಯ ಯಾವುದೇ ಕಾರ್ಯಕ್ರಮವಾದರೂ ತಪ್ಪದೆ ಬರುತ್ತಾರೆ ಮಾತ್ರವಲ್ಲ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ಯಾರಾದರೂ ಡ್ಯಾನ್ಸ್ ಮಾಡುತ್ತಿದ್ದರೆ, ಬಾ ನಾವು ಡ್ಯಾನ್ಸ್ ಮಾಡೋಣ ಎಂದು ಕರೆದುಕೊಂಡು ಹೋಗುತ್ತಾರೆ ಅಷ್ಟು ಉತ್ಸಾಹಿ ವ್ಯಕ್ತಿ. ಭಾರತೀಯ ಚಿತ್ರರಂಗದಲ್ಲಿ 50 ವರ್ಷಗಳ ನಂತರವೂ ಹೀರೋ ಆಗಿಯೇ ನಟಿಸುತ್ತಿರುವ ನಟರು ಇಬ್ಬರೇ ಇರುವುದು ಒಬ್ಬರು ಮಮ್ಮುಟಿ ಮತ್ತೊಬ್ಬರು ಬಾಲಯ್ಯ. ಅವರು ಇದೇ ರೀತಿ 75 ವರ್ಷದ ಸಂಭ್ರಮ ಸಹ ಆಚರಿಸಿಕೊಳ್ಳಲಿ’ ಎಂದು ಚಿರು ಶುಭ ಹಾರೈಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Tue, 3 September 24