ಸೆ.19ರಂದು ಬೆಂಗಳೂರಲ್ಲಿ ಲತಾ ಮಂಗೇಶ್ಕರ್ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ತಯಾರಿ ನಡೆಯುತ್ತಿದೆ. ಕಾರ್ಯಕ್ರಮದ ಪೋಸ್ಟರ್ ಹಾಗೂ ಆಹ್ವಾನ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಹಿರಿಯ ನಟಿ ಭವ್ಯಾ, ನಟ ಪ್ರಥಮ್, ಕಮಲ್ ರಾಜ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮದ ಪೋಸ್ಟರ್ ಹಾಗೂ ಆಹ್ವಾನ ಪತ್ರಿಕೆ ಅನಾವರಣ ಮಾಡಲಾಯಿತು.

ಸೆ.19ರಂದು ಬೆಂಗಳೂರಲ್ಲಿ ಲತಾ ಮಂಗೇಶ್ಕರ್ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ
Chitti Ayee Hai Press Meet

Updated on: Sep 17, 2026 | 3:33 PM

ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಶೀರ್ಷಿಕೆಯಡಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದರ ತಯಾರಿ ಭರದಿಂದ ಸಾಗಿದೆ. ನಟ, ಗಾಯಕ, ನಿರ್ಮಾಪಕ ಹಾಗೂ ವಿತರಕ ಕಮಲ್ ರಾಜ್ (ಕಲೀಂ ಪಾಷಾ) ಅವರು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮ ಸೆ.19ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಆಡಿಟೋರಿಯಂನಲ್ಲಿ ನಡೆಯಲಿದೆ. ಇದರಲ್ಲಿ ಭಾರತೀಯ ಸಂಗೀತ, ಸಿನಿಮಾ, ಉದ್ಯಮ, ರಾಜಕೀಯ, ಕ್ರೀಡೆ ಮುಂತಾದ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ.

ಹಿರಿಯ ನಟಿ ಶ್ರೀಮತಿ ಭವ್ಯಾ ಅವರು ‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ‘ಭಾರತೀಯ ಸಂಗೀತ ಲೋಕದ ವಿವಿಧ ಪ್ರಾಕಾರದ ಸಂಗೀತ ಹಾಗೂ ಗೀತೆಗಳನ್ನು ಈ ಕಾರ್ಯಕ್ರಮದ ಮೂಲಕ ಒಂದೇ ವೇದಿಕೆಗೆ ತರುತ್ತಿರುವುದು ಕರ್ನಾಟಕದ ಮಟ್ಟಿಗೆ ಹೊಸ ಪ್ರಯೋಗ. ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮ ತುಂಬ ಅರ್ಥಪೂರ್ಣವಾಗಿ ಮೂಡಿಬರುತ್ತಿದೆ. ಎಲ್ಲಾ ಥರದ ಸಂಗೀತವನ್ನೂ ಆಸ್ವಾದಿಸುವವರಿಗೆ ಈ ಕಾರ್ಯಕ್ರಮ ಹೊಸ ಅನುಭವ ನೀಡಲಿದೆ. ಇಂಥ ಕಾರ್ಯಕ್ರಮ ಆಯೋಜಿಸಿರುವ ಕಮಲ್ ರಾಜ್ (ಕಲೀಂ ಪಾಷಾ) ಅವರ ಪ್ರಯತ್ನ ಮೆಚ್ಚುವಂತಿದೆ’ ಎಂದು ಭವ್ಯಾ ಹೇಳಿದರು.

ಕಮಲ್ ರಾಜ್ ಅವರು ಮಾತನಾಡಿ, ‘ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಂಸ್ಮರಣೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್ ಅವರ ಸೋದರಿ ಉಷಾ ಮಂಗೇಶ್ಕರ್ ಮತ್ತು ಅವರ ಕುಟುಂಬ ವರ್ಗದವರು ಭಾಗಿಯಾಗಲಿದ್ದಾರೆ. ಭಾರತದ ವಿವಿಧ ಭಾಷೆಯ ಅನೇಕ ಗಾಯಕರು ಹತ್ತಾರು ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ಇದು ಬೆಂಗಳೂರು ಹಾಗೂ ಸಮಸ್ತ ಕರ್ನಾಟಕದ ಸಂಗೀತ ಪ್ರೇಮಿಗಳಿಗೆ ಹೆಮ್ಮೆಯ ಐತಿಹಾಸಿಕ ಕ್ಷಣವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಇದು ಕೇವಲ ಸಂಗೀತ ಕಾರ್ಯಕ್ರಮವಲ್ಲ. ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ನನ್ನ ಕಲಾಯಾತ್ರೆಯನ್ನು ಪ್ರೋತ್ಸಾಹಿಸಿದ, ನನ್ನ ಧ್ವನಿಯನ್ನು ನಂಬಿದ ಮತ್ತು ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬ ಸಂಗೀತಪ್ರೇಮಿಗೂ ಈ ಸಂಗೀತ ಸಂಜೆಯನ್ನು ಅರ್ಪಿಸುತ್ತಿದ್ದೇವೆ’ ಎಂದು ಕಮಲ್ ರಾಜ್ ಅವರು ಹೇಳಿದರು.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗಾಗಿ ವಿಶೇಷ ಹಾಡುಗಳನ್ನು ರೆಕಾರ್ಡ್ ಮಾಡಿಟ್ಟಿದ್ದ ಲತಾ ಮಂಗೇಶ್ಕರ್

‘ಚಿಟ್ಟೀ ಆಯೀ ಹೈ’ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಕ್ಷೇತ್ರದ ಅನೇಕ ಸಂಗೀತಗಾರರು, ಚಿತ್ರರಂಗದ ಅನೇಕ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಈ ಸಂಗೀತ ಸಂಜೆಯಲ್ಲಿ ಶಾಸ್ತ್ರೀಯ ಸಂಗೀತ, ವಿವಿಧ ಭಾಷೆಗಳ ಕಾಲಾತೀತ ಗೀತೆಗಳು, ಜನಪದ ಸೊಗಡಿನ ಸಂಗೀತ ಸಂಗಮ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us