
ಸಿನಿಮಾ ರಂಗ (Movie Industry) ನಂಬಿಕೊಂಡು ಹಲವಾರು ಮಂದಿ ಜೀವನ ನಡೆಸುತ್ತಿದ್ದಾರೆ. ಭಾರತದಲ್ಲಿ ಸಿನಿಮಾ ಉದ್ಯಮ, ಲಕ್ಷಾಂತರ ಕೋಟಿ ಮೌಲ್ಯದ ಉದ್ಯಮ. ಆದರೆ ಈ ಉದ್ಯಮದಲ್ಲಿ ಹೆಚ್ಚು ಲಾಭ ಪಡೆಯುವವರು ಸ್ಟಾರ್ ನಟ, ನಟಿಯರು, ನಿರ್ಮಾಪಕರು. ಆದರೆ ಸಿನಿಮಾ ಉದ್ಯಮದ ಪ್ರಧಾನ ವರ್ಗವಾದ ಪ್ರದರ್ಶಕರು ಅಂದರೆ ಚಿತ್ರಮಂದಿರ ಮಾಲೀಕರುಗಳು ದೊಡ್ಡ ಮಟ್ಟದ ಹಣ ಪಡೆಯುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ನಿರ್ಮಾಪಕ ಲಾಭದಲ್ಲಿರುತ್ತಾನೆ ಆದರೆ ಚಿತ್ರಮಂದಿರಗಳು ನಷ್ಟ ಅನುಭವಿಸುತ್ತವೆ. ಸಿನಿಮಾ ಪ್ರದರ್ಶಕರು ಮತ್ತು ನಿರ್ಮಾಪಕರ ನಡುವೆ ಲಾಭ ಹಂಚಿಕೆ ವಿಷಯವಾಗಿ ಹಲವು ವರ್ಷಗಳಿಂದಲೂ ತಕರಾರು, ಭಿನ್ನಾಭಿಪ್ರಾಯ ನಡೆದೇ ಬರುತ್ತಿದೆ. ಇದೀಗ ಚಿತ್ರಪ್ರದರ್ಶಕರು ಸಿನಿಮಾ ಪ್ರದರ್ಶಿಸದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಎಲ್ಲೆಡೆ ಅಲ್ಲ ಬದಲಿಗೆ ಆಂಧ್ರ ಮತ್ತು ತೆಲಂಗಾಣದಲ್ಲಿ.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಿನಿಮಾ ಪ್ರದರ್ಶಕರುಗಳು ಇಂದು (ಮೇ 18) ಸಿನಿಮಾ ವಿತರಕರು, ನಿರ್ಮಾಪಕರುಗಳೊಟ್ಟಿಗೆ ಸಭೆ ನಡೆಸಿದ್ದು, ತಮ್ಮ ಬೇಡಿಕೆಗಳನ್ನು ಸಿನಿಮಾ ನಿರ್ಮಾಪಕರು ಮತ್ತು ವಿತರಕರ ಮುಂದೆ ಇಟ್ಟಿದ್ದರು. ಆದರೆ ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಗದ ಕಾರಣ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಂಧ್ರ ಮತ್ತು ತೆಲಂಗಾಣದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವ ಘೋಷಣೆಯನ್ನು ಪ್ರದರ್ಶಕರು ಹೊರಡಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಹಲವಾರು ಮಂದಿ ಸಿನಿಮಾ ಪ್ರದರ್ಶಕರು ಭಾಗಿ ಆಗಿದ್ದರು. ಸಭೆಯಲ್ಲಿ ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರಾದ ದಿಲ್ ರಾಜು ಮತ್ತು ಸುರೇಶ್ ಕುಮಾರ್ ಅವರು ಸಹ ಇದ್ದರು. ಈಗ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ನಡೆಯುತ್ತಿವೆ. ಆದರೆ ಮಲ್ಟಿಪ್ಲೆಕ್ಸ್ಗಳು ಲಾಭ ಹಂಚಿಕೆ ಆಧಾರದಲ್ಲಿ ಸಿನಿಮಾ ಪ್ರದರ್ಶಿಸುತ್ತಿವೆ. ಮಲ್ಟಿಪ್ಲೆಕ್ಸ್ ಮಾದರಿಯಲ್ಲಿಯೇ ತಾವೂ ಲಾಭ ಹಂಚಿಕೆ ಆಧಾರದಲ್ಲಿಯೇ ಸಿನಿಮಾ ಪ್ರದರ್ಶಿಸುತ್ತೀವಿ ಎಂದು ಪ್ರದರ್ಶಕರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ:ಈ ವಾರ ಒಟಿಟಿ ಬಂದಿರುವ ಕೆಲ ಹಿಟ್ ಸಿನಿಮಾಗಳಿವು
ಮಲ್ಟಿಪ್ಲೆಕ್ಸ್ಗಳಿಗಿಂತಲೂ ಕಡಿಮೆ ಲಾಭ ಪ್ರಮಾಣವನ್ನು ಕೊಡಿ ಎಂದೇ ಪ್ರದರ್ಶಕರು ಕೇಳುತ್ತಿದ್ದಾರಾದರೂ ಸಿನಿಮಾ ವಿತರಕರು ಮತ್ತು ನಿರ್ಮಾಪಕರು ಪ್ರದರ್ಶಕರ ಈ ಬೇಡಿಕೆಗೆ ಒಪ್ಪುತ್ತಿಲ್ಲ ಇದೇ ಕಾರಣಕ್ಕೆ ಆಂಧ್ರ ಮತ್ತು ತೆಲಂಗಾಣದ ಸಿನಿಮಾ ಪ್ರದರ್ಶಕರು ಜೂನ್ 1 ರಿಂದ ಸಿನಿಮಾ ಪ್ರದರ್ಶನ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಒಟ್ಟಿಗೆ 1500 ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇದ್ದು, ಜೂನ್ 1 ರಿಂದ ಎಲ್ಲವೂ ಬಂದ್ ಆಗಲಿದೆ.
ಜೂನ್ ತಿಂಗಳಲ್ಲಿ ಕೇರಳದ ಚಿತ್ರಮಂದಿರಗಳು ಸಹ ಬಂದ್ ಆಚರಣೆ ಮಾಡಲಿವೆ. ಕೇರಳದಲ್ಲಿಯೂ ಸಹ ಸಿನಿಮಾ ಪ್ರದರ್ಶಕರು ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಜೊತೆಗೆ ಸರ್ಕಾರದ ಬಳಿಯೂ ಸಹ ಕೇರಳ ಪ್ರದರ್ಶಕರು ಕೆಲ ಬೇಡಿಕೆಗಳನ್ನು ಇರಿಸಿದ್ದಾರೆ ಎಲ್ಲದರ ಈಡೇರಿಕೆಗೆ ಒತ್ತಾಯಿಸಿ ಕೇರಳ ಸಿನಿಮಾ ಪ್ರದರ್ಶಕರು ಸಹ ಜೂನ್ 1 ರಿಂದ ಚಿತ್ರಮಂದಿರ ಬಂದ್ ಮಾಡುವ ಘೋಷಣೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ