ಸಿನಿಮಾಟೊಗ್ರಫಿ ಕಾಯ್ದೆ (Cinematography Act) ತಿದ್ದುಪತಿ ಮಸೂದೆಗೆ ಕೇಂದ್ರ ಸಂಪುಟ (Union Cabinet) ಸಭೆ ಒಪ್ಪಿಗೆ ನೀಡಿದೆ. ಸಿನಿಮಾ ಪೈರಸಿ (Piracy) ಹಾಗೂ ವಯೋಮಾನ ಆಧರಿತ ಸಿನಿಮಾ ವೀಕ್ಷಣೆ ಸೇರಿದಂತೆ ಇನ್ನೂ ಕೆಲವು ಬದಲಾವಣೆಗಳಿಗಾಗಿ ತಿದ್ದಪಡಿಯನ್ನು ಮಾಡಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಸೂದೆಯ ಅಂಗೀಕಾರವಾಗಿದ್ದು ಪೈರಸಿಯಿಂದ ಹೈರಾಣಾಗಿರುವ ಚಿತ್ರರಂಗಕ್ಕೆ ತುಸು ನೆಮ್ಮದಿಯನ್ನು ನೀಡಲಿದೆ.
ತಿದ್ದುಪಡಿ ಮಸೂದೆಯ ಪ್ರಕಾರ, ಇನ್ನು ಮುಂದೆ ಸಿನಿಮಾದ ಪೈರೆಟೆಡ್ ದೃಶ್ಯಗಳನ್ನು, ತುಣುಕುಗಳನ್ನು, ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ. ಮಾತ್ರವಲ್ಲದೆ, ಪೈರಸಿ ಮಾಡುವವರ ವಿರುದ್ಧವೂ ಕಠಿಣ ಕ್ರಮಕ್ಕೆ ಮಸೂದೆಯು ಅವಕಾಶ ನೀಡಿದೆ. ಪೈರಸಿ ಮಾಡಿದ ಅಪರಾಧಿಗೆ ನೀಡಲಾಗುತ್ತಿದ್ದ ಮೂರು ತಿಂಗಳ ಶಿಕ್ಷೆಯನ್ನು ಮೂರು ವರ್ಷಗಳಿಗೆ ಏರಿಸುವುದು ಒಳಗೊಂಡಂತೆ ಇನ್ನೂ ಕೆಲವು ಬದಲಾವಣೆಗಳು ಮಸೂದೆಯಲ್ಲಿ ಅಡಕವಾಗಿವೆ.
ಇಷ್ಟು ವರ್ಷಗಳಿಂದ ಚಾಲ್ತಿಯಲ್ಲಿದ್ದ ಸಿನಿಮಾದ ಪ್ರಮಾಣ ಪತ್ರ ವಿತರಣೆ ವ್ಯವಸ್ಥೆಯಲ್ಲಿಯೂ ಮಸೂದೆಯಿಂದಾಗಿ ಬದಲಾಗಲಿದೆ. ಯು/ಎ/ಯುಎ ಮಾದರಿಯ ಪ್ರಮಾಣ ಪತ್ರ ಈವರೆಗೆ ಚಾಲ್ತಿಯಲ್ಲಿತ್ತು, ಆದರೆ ಮಸೂದೆಯನ್ವಯ ಇನ್ನು ಮುಂದೆ ವಯೋಮಾನ ಆಧರಿತ ಪ್ರಮಾಣ ಪತ್ರ ನೀಡಲಿದೆ ಸಿಬಿಎಫ್ಸಿ.
ಸಿಬಿಎಫ್ಸಿ ಪ್ರಮಾಣ ಪತ್ರ ಇಲ್ಲದೆ ಸಿನಿಮಾ ಪ್ರದರ್ಶಿಸುವುದು, ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿದ ಬಳಿಕ ಪ್ರದರ್ಶನದ ಸಮಯದಲ್ಲಿ ಸಿನಿಮಾದ ಕಂಟೆಂಟ್ನಲ್ಲಿ ಬದಲಾವಣೆ ಮಾಡುವುದು ಇತ್ಯಾದಿಗಳನ್ನು ತಡೆಯುವ ಕುರಿತಾದ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ:Vikrant Rona Piracy: ಸರ್ಕಾರಿ ಶಾಲೆಯಲ್ಲೇ ‘ವಿಕ್ರಾಂತ್ ರೋಣ’ ಪೈರಸಿ; ಮಕ್ಕಳಿಗೆ ಸಿನಿಮಾ ತೋರಿಸಿದ ವಿಡಿಯೋ ವೈರಲ್
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್, ಮಸೂದೆಯನ್ನು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು, ಈ ಮಸೂದೆ ರಚನೆಗೆ ಸಾಕಷ್ಟು ಅನುಭವಿಗಳ ಸಲಹೆಗಳನ್ನು ಪಡೆಯಲಾಗಿದೆ. ಈ ಮಸೂದೆಯು ಸಿನಿಮಾ ರಂಗದವರ ನಿರೀಕ್ಷೆಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ, ಯಾವುದೇ ವಿವಾದಕ್ಕೆ ಆಸ್ಪದ ಇಲ್ಲದೆ ಎಲ್ಲರೂ ಒಪ್ಪುವಂತಹಾ ತಿದ್ದಪಡಿ ಮಸೂದೆ ಇದಾಗಿದೆ ಎಂದಿದ್ದಾರೆ.
2019 ರಲ್ಲಿ ಆಗಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಆ ಬಳಿಕ ಆ ಮಸೂದೆಗೆ ಹಲವು ಬದಲಾವಣೆಗಳನ್ನು ಮಾಡಲಾಗಿ ಇದೀಗ ಹೊಸ ಮಸೂದೆಯನ್ನು ಸಂಪುಟ ಸಭೆಯು ಅಂಗೀಕರಿಸಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಸಂಸತ್ನ ಅಂಗೀಕಾರ ಪಡೆಯಲಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ