ಬೆಂಗಳೂರು: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar Death) ನಿಧನರಾದ ಹಿನ್ನೆಲೆಯಲ್ಲಿ ಅವರ ಸೋದರಿ, ಗಾಯಕಿ ಆಶಾ ಭೋಸ್ಲೆ ಅವರಿಗೆ ಕರೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸಾಂತ್ವನ ಹೇಳಿದರು. ‘ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವಿನ ದುಃಖ ಭರಿಸುವ ಶಕ್ತಿಯನ್ನು ದೇವರು ತಮಗೆ ಕರುಣಿಸಲಿ’ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಮಾತುಕತೆ ವೇಳೆ ಲತಾ ಮಂಗೇಶ್ಕರ್ ಅವರು ಕರ್ನಾಟಕದೊಂದಿಗೆ ಹೊಂದಿದ್ದ ಒಡನಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡರು. ತಮ್ಮ ಹಲವು ಸಂಬಂಧಿಕರು ಇಂದಿಗೂ ಕರ್ನಾಟಕದಲ್ಲಿ ನೆಲೆಸಿದ್ದಾರೆ ಎಂದು ಆಶಾ ಹೇಳಿದರು. ದೇವರು ಲತಾ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಬೊಮ್ಮಾಯಿ ಕೋರಿದರು.
ಸಿಎಂ ಅಭಿಮಾನದ ಲತಾ ಹಾಡು
ಇದಕ್ಕೂ ಮೊದಲು ಲತಾ ಮಂಗೇಶ್ಕರ್ ಅವರ ಹಾಡುಗಳ ಪೈಕಿ ತಮ್ಮ ನೆಚ್ಚಿನ ಹಾಡೊಂದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಲ್ಲೇಖಿಸಿದರು. ‘ಯೇ ಮೇರೆ ವತನ್ ಕೆ ಲೋಗೋ..’ ಹಾಡನ್ನು ಕೇಳಿದರೆ ಇಂದಿಗೂ ಕಣ್ಣೀರು ಬರುತ್ತದೆ. ದೇಶಭಕ್ತಿ ಉಕ್ಕಿ ಹರಿಯುತ್ತದೆ ಎಂದು ಹೇಳಿದ್ದರು.
‘ಲತಾ ಅವರು ಅಷ್ಟು ಪ್ರೇರಣಾದಾಯಕವಾಗಿ ಅವರು ಅದನ್ನು ಹಾಡಿದ್ದರು. ಎಲ್ಲಿಯವರೆಗೆ ಈ ಭೂಮಿ ಮೇಲೆ ಸಂಗೀತ ಇರುತ್ತದೆಯೋ ಅಲ್ಲಿಯವರೆಗೆ ಲತಾ ಮಂಗೇಶ್ಕರ್ ಅವರು ಎಲ್ಲರ ಮನಸ್ಸಿನಲ್ಲಿ ಸ್ಥಾನ ಹೊಂದಿರುತ್ತಾರೆ. ಅವರ ಹೆಸರು ಚಿರಸ್ಥಾಯಿ ಆಗಿರುತ್ತದೆ. ನಾವೆಲ್ಲ ಅವರ ಹಾಡನ್ನು ಕೇಳಿಕೊಂಡು ಬೆಳೆದವರು. ಭಾರತದ ಒಂದಿಲ್ಲೊಂದು ಕಡೆ ಅವರ ಹಾಡು ಸದಾ ಕೇಳಿಸುತ್ತಲೇ ಇರುತ್ತದೆ. ನಮ್ಮ ಭಾರತದ ಕೋಗಿಲೆ ಇವತ್ತು ಹಾಡನ್ನು ನಿಲ್ಲಿಸಿರುವುದು ತೀವ್ರ ನೋವಿನ ಸಂಗತಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲೂ 2 ದಿನ ಶೋಕಾಚರಣೆಗೆ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಇಂದು ಮತ್ತು ನಾಳೆ ರಾಜ್ಯದಲ್ಲಿ ಶೋಕಾಚರಣೆ. ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ರದ್ದು. ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲು ಸೂಚನೆ.#LataMangeshkar pic.twitter.com/hlPCtXdKDF
— CM of Karnataka (@CMofKarnataka) February 6, 2022
ಲತಾ ಮಂಗೇಶ್ಕರ್ ನಿಧನಕ್ಕೆ ಕಾರಣ
ಕೊವಿಡ್ ಮತ್ತು ನ್ಯೂಮೋನಿಯ ಕಾರಣದಿಂದ ಇತ್ತೀಚೆಗೆ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ 92 ವರ್ಷ ವಯಸ್ಸಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಯಿತು. ಹಲವು ದಿನಗಳ ಕಾಲ ಅವರು ಐಸಿಯುನಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಡುವೆಯೂ ಲತಾ ಮಂಗೇಶ್ಕರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Lata Mangeshkar Funeral: ನೆಚ್ಚಿನ ಗಾಯಕಿಗೆ ದುಃಖದ ವಿದಾಯ; ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಮಂಗೇಶ್ಕರ್ ಅಂತ್ಯಸಂಸ್ಕಾರ
Published On - 10:25 pm, Sun, 6 February 22