
ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು (Vijay) ನಟಿ ಮತ್ತು ಖ್ಯಾತ ವಿಜೆ ರಮ್ಯಾ ಸುಬ್ರಮಣಿಯನ್ ಭೇಟಿಯಾಗಿದ್ದಾರೆ. ಸಿಎಂ ಭೇಟಿಯಾದ ಫೋಟೋವನ್ನು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಅವರಿಗೆ ತಡವಾಗಿ ಜನ್ಮದಿನದ ಶುಭಾಶಯ ಕೋರಿ ದೊಡ್ಡ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಮೇಲೂ ವಿಜಯ್ ಅವರ ಗುಣ ಬದಲಾಗಿಲ್ಲ ಎಂದು ರಮ್ಯಾ ಹೊಗಳಿದ್ದಾರೆ. ಸದ್ಯ ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.
‘ಆರು ತಿಂಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಅವರ ಕೊನೆಯ ಸಿನಿಮಾದ ಕಾರ್ಯಕ್ರಮವನ್ನು ನಾನು ನಿರೂಪಣೆ ಮಾಡಿದ್ದೆ. ನಿನ್ನೆ ಸಂಜೆ ನಾನು ನಮ್ಮ ಮುಖ್ಯಮಂತ್ರಿಯವರನ್ನು ಭೇಟಿಯಾದೆ. ಕಾಲ ಬದಲಾಗಿದೆ. ಅವರ ಬಿರುದುಗಳು ಬದಲಾಗಿವೆ. ಇತಿಹಾಸವೇ ಬದಲಾಗಿದೆ. ಆದರೆ ವಿಜಯ್ ಮಾತ್ರ ಬದಲಾಗಿಲ್ಲ. ಬಹುಶಃ ಇದೇ ಅವರ ದೊಡ್ಡ ಶಕ್ತಿ’ ಎಂದು ರಮ್ಯಾ ಬರೆದಿದ್ದಾರೆ.
‘ಕಳೆದ ಎರಡು ದಶಕಗಳಿಂದ ನಾನು ಅವರನ್ನು ನೋಡುತ್ತಿದ್ದೇನೆ. ಅವರು ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಅದಕ್ಕೆ ಅವರ ಸ್ಟಾರ್‌ಡಮ್ ಕಾರಣವಲ್ಲ. ಅವರು ಯಾವುದೇ ಕಾರ್ಯಕ್ರಮದಲ್ಲಿದ್ದರೂ ಬೇರೆಯವರಿಗೆ ಹೆಚ್ಚು ಗೌರವ ನೀಡುತ್ತಾರೆ’ ಎಂದು ರಮ್ಯಾ ಗುಣಗಾನ ಮಾಡಿದ್ದಾರೆ.
‘ವಿಜಯ್ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಎದುರಿಗಿರುವವರು ಹೇಳುವುದನ್ನು ತಾಳ್ಮೆಯಿಂದ ಕೇಳುತ್ತಾರೆ. ಎಲ್ಲರ ಮೇಲೂ ಕಾಳಜಿ ತೋರಿಸುತ್ತಾರೆ. ಅವರು ಸದಾ ಭರವಸೆಯನ್ನು ನೀಡುತ್ತಾರೆ. ಈ ಜಗತ್ತಿನಲ್ಲಿ ಅವರು ಒಬ್ಬ ನಿಜವಾದ ಜಂಟಲ್‌ಮನ್ ತರಹ ನಡೆದುಕೊಳ್ಳುತ್ತಾರೆ’ ಎಂದು ರಮ್ಯಾ ಹೇಳಿದ್ದಾರೆ.
‘ಇಂದು ಅವರು ಮುಖ್ಯಮಂತ್ರಿಯಾಗಿದ್ದರೂ ನಮ್ಮ ಭೇಟಿಯ ಶೈಲಿ ಮೊದಲಿನಂತೆಯೇ ಇತ್ತು. ಅದೇ ನಗು ಮತ್ತು ಅದೇ ಪ್ರೀತಿ ನಮ್ಮ ನಡುವೆ ಇತ್ತು’ ಎಂದು ರಮ್ಯಾ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್: ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣ
‘ನನ್ನ ಪ್ರೀತಿಯ ಸಿಎಂ ಜೋಸೆಫ್ ವಿಜಯ್ ಅವರಿಗೆ ಜನ್ಮದಿನದ ಶುಭಾಶಯಗಳು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ 40 ದಿನ ಪೂರೈಸಿದ್ದಕ್ಕೆ ಅಭಿನಂದನೆಗಳು’ ಎಂದು ರಮ್ಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ನಟಿ ರಮ್ಯಾ ಅವರು ಚಿತ್ರರಂಗದಲ್ಲಿ ನಟನೆಯ ಜೊತೆಗೆ ಹಲವು ದೊಡ್ಡ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.