
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ (BIFFes) ಉದ್ಘಾಟಿಸಿ ಮಾತನಾಡಿದರು. ‘ಈ ಬಾರಿ 70 ದೇಶಗಳ ಆಯ್ದ ಸುಮಾರಿ 240 ಸಿನಿಮಾಗಳ ಪ್ರದರ್ಶನ ಆಗಲಿದೆ. ರಾಯಬಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿದ್ದೇನೆ. ಅವರು ಬರೀ ಸಿನಿಮಾಗೆ ಸೀಮಿತ ಆಗಿಲ್ಲ. ಸಾಮಾಜಿಕ ಹೋರಾಟದಲ್ಲಿ ಕೂಡ ಭಾಗಿ ಆಗಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಕಳೆದ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಥೀಮ್ನಲ್ಲಿ ಚಿತ್ರೋತ್ಸವ ಮಾಡಲಾಗಿತ್ತು. ಈಗ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಿದ್ದೇನೆ. ಚಲನಚಿತ್ರ ಬರೀ ಮನರಂಜನೆಗೆ ಸೀಮಿತವಾಗಿರುವುದು ಅಲ್ಲ. ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದುವ ಕೆಲಸ ಆಗಬೇಕು’ ಎಂದು ಸಿದ್ದರಾಮಯ್ಯ (CM Siddaramaiah) ಹೇಳಿದರು.
‘ಸಮಾಜದಲ್ಲಿ ಇಂದು ಅಸಮಾನತೆ, ಬಡತನ ಇದೆ. ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಇದ್ದಾರೆ. ಅವರ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ಜಗತ್ತಿನ ಮುಂದೆ ಇಡಬೇಕು. ಈ ಕೆಲಸವನ್ನು ರಾಜ್ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ಮಾಡಿದ್ದನ್ನು ನಾವು ನೋಡಿದ್ದೇನೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾಕೆ ಮಾಡುತ್ತೇವೆ ಎಂದರೆ, ಬೇರೆ ದೇಶಗಳ ಜನಜೀವನ, ರಾಜಕೀಯ, ಸಮಾಜ, ಪುರುಷರು-ಮಹಿಳೆಯರ ಸ್ಥಿತಿಗತಿ ಮುಂತಾದ್ದನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
‘ಚಲನಚಿತ್ರೋತ್ಸವ ಒಂದು ಸುವರ್ಣ ಅವಕಾಶ. ಈ ಅವಕಾಶ ಬಳಸಿಕೊಂಡು ನಾವು ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಬೇಕು. ಸಮಾಜದಲ್ಲಿ ಬದಲಾವಣೆ ಆಗದೇ ಇದ್ದರೆ ಸಿನಿಮಾಗಳು ಕೇವಲ ಮನರಂಜನೆಗೆ ಇರುವ ವಸ್ತುಗಳು ಆಗುತ್ತವೆ. ನಾವೆಲ್ಲ ಮನುಷ್ಯರು. ಮನುಷ್ಯರಾಗಿಯೇ ಬಾಳಬೇಕಾಗಿರುವುದು ಅತ್ಯಂತ ಅವಶ್ಯಕ’ ಎಂದರು ಸಿದ್ದರಾಮಯ್ಯ.
‘ನಾವು ಪ್ರತಿ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಾನತೆಯ ಸಮಾಜ ಕಟ್ಟಲು ಸಾಧ್ಯತೆ ಆಗುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ಕೆಲಸವನ್ನು ಸಿನಿಮಾ ಮಾಧ್ಯಮದ ಮೂಲಕ ಮಾಡಬೇಕು. ಬೇರೆ ದೇಶಗಳಲ್ಲಿ ಯಾಕೆ ಬದಲಾವಣೆ ಆಗಿದೆ? ನಮ್ಮಲ್ಲಿ ಯಾಕೆ ಬದಲಾವಣೆ ಆಗಿಲ್ಲ ಎಂಬುದನ್ನು ಸಿನಿಮಾಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು’ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ನೋಡಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ವಿಡಿಯೋ ನೋಡಿ..
‘ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ಸಿನಿಮಾರಂಗದ ಅಭಿವೃದ್ಧಿಗೆ ನೀಡುತ್ತೇವೆ. ನಮ್ಮ ಬದುಕನ್ನು ಹಸನು ಮಾಡುವಂತಹ ಸಿನಿಮಾಗಳು ಕನ್ನಡದಲ್ಲಿ ಬರಲಿ. ಈ ಚಲನಚಿತ್ರೋತ್ಸವ ಯಶಸ್ವಿ ಆಗಲಿ. ಜೈಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಪೂರ್ಣಗೊಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.