ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಜೊತೆಗೆ ತೆಲುಗು ಪ್ರೇಕ್ಷಕರಿಗೆ ವಿಶೇಷ ನಂಟಿದೆ. ಸನ್ರೈಸರ್ಸ್ ಹೈದರಾಬಾದ್ಗಾಗಿ ಆಡಿದ್ದ ವಾರ್ನರ್ ಬಗ್ಗೆ ಸಹಜವಾಗಿಯೇ ತೆಲುಗು ಜನರಿಗೆ ಪ್ರೀತಿ ಇದೆ. ವಾರ್ನರ್ ಸಹ ಕೋವಿಡ್ ಸಮಯದಲ್ಲಿ ಒಂದರ ಹಿಂದೊಂದು ತೆಲುಗು ಸಿನಿಮಾದ ಹಾಡುಗಳಿಗೆ, ಡೈಲಾಗ್ಗಳಿಗೆ ರೀಲ್ಸ್, ವಿಡಿಯೋಗಳನ್ನು ಮಾಡಿ ಹಂಚಿಕೊಂಡಿದ್ದರು. ತೆಲುಗು ಸಿನಿಮಾಗಳ ದೊಡ್ಡ ಅಭಿಮಾನಿಯಾಗಿದ್ದ ಡೇವಿಡ್ ವಾರ್ನರ್ ಹಲವಾರು ತೆಲುಗು ಸಿನಿಮಾಗಳಿಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಇದನ್ನೆಲ್ಲ ನೋಡಿ ವಾರ್ನರ್ ಅನ್ನು ತೆಲುಗು ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂದು ಮೊದಲಿನಿಂದಲೂ ಜನ ಒತ್ತಾಯಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೆ ಡೇವಿಡ್ ವಾರ್ನರ್ ಹಾಗೂ ರಾಜಮೌಳಿ ಯನ್ನು ಒಟ್ಟಿಗೆ ಸೇರಿಸಿ ಜಾಹೀರಾತೊಂದನ್ನು ಕ್ರೆಡ್ನವರು ಮಾಡಿದ್ದರು. ಡೇವಿಡ್ ವಾರ್ನರ್ ಅನ್ನು ತೆಲುಗು ಸಿನಿಮಾಗಳಿಗೆ ತೆಗೆದುಕೊಂಡರೆ ಎಷ್ಟು ಸಮಸ್ಯೆ ಆಗುತ್ತದೆಂದು ತಮಾಷೆಯಾಗಿ ತೋರಿಸುವ ಜಾಹೀರಾತು ಅದಾಗಿತ್ತು.
ಆದರೆ ಈಗ ನಿಜವಾಗಿಯೂ ಡೇವಿಡ್ ವಾರ್ನರ್ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಕೆಲ ದಿನದ ಹಿಂದೆ ಡೇವಿಡ್ ವಾರ್ನರ್ ಬಿಳಿ ಬಣ್ಣದ ಶರ್ಟ್ ಪ್ಯಾಂಟ್ ಧರಿಸಿ ಬಂದೂಕೊಂದನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗಲೇ ಡೇವಿಡ್ ವಾರ್ನರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಖಾತ್ರಿ ಆಗಿರಲಿಲ್ಲ. ಕೆಲವರು ‘ಪುಷ್ಪ2’ ಎಂದಿದ್ದರು. ಆದರೆ ಅದು ನಿಜವಲ್ಲ.
ಇದನ್ನೂ ಓದಿ:David Warner: ಚಾನ್ಸೇ ಇಲ್ಲ ಡೇವಿಡ್ ವಾರ್ನರ್ಗೆ ನಿರಾಸೆ..!
ಡೇವಿಡ್ ವಾರ್ನರ್, ತೆಲುಗಿನ ಜನಪ್ರಿಯ ನಟ ‘ಜಯಂ’ ಖ್ಯಾತಿಯ ನಿತಿನ್ ನಟಿಸುತ್ತಿರುವ ‘ರಾಬಿನ್ಹುಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಡೇವಿಡ್ ವಾರ್ನರ್ ‘ರಾಬಿನ್ ಹುಡ್’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಸಿನಿಮಾದ ಮುಖ್ಯ ವಿಲನ್ ಸಹ ಆಗಿದ್ದಾರೆ ಡೇವಿಡ್ ವಾರ್ನರ್ ಎನ್ನಲಾಗುತ್ತಿದೆ. ಡೇವಿಡ್ ವಾರ್ನರ್ಗಾಗಿ ಆಕ್ಷನ್ ಜೊತೆಗೆ ಕೆಲವು ಹಾಸ್ಯ ದೃಶ್ಯಗಳನ್ನು ಸಹ ಸೃಷ್ಟಿಸಲಾಗಿದೆಯಂತೆ.
ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಹಲವು ಭಾರತೀಯ ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ವಿದೇಶಿ ಕ್ರಿಕೆಟಿಗರು ಭಾರತದ ಸಿನಿಮಾದಲ್ಲಿ ಅದರಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಿಲ್ಲ. ಇದೀಗ ಡೇವಿಡ್ ವಾರ್ನರ್ ತೆಲುಗು ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ