ಡಿ ಬಾಸ್ ದರ್ಶನ್ ಹೆಸರು ದುರ್ಬಳಕೆ ಮಾಡಿಕೊಳ್ಳುವವರಿಗೆ ವಿಜಯಲಕ್ಷ್ಮಿ ಖಡಕ್ ಎಚ್ಚರಿಕೆ
ನಟ ದರ್ಶನ್ ಅವರ ಹೆಸರನ್ನು ಸ್ವಹಿತಾಸಕ್ತಿಗಾಗಿ ಯಾರೂ ಬಳಸದಂತೆ ಪತ್ನಿ ವಿಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಚಾಮರಾಜನಗರದ ವೇದಿಕೆಯಲ್ಲಿ ನಟ ಧನ್ವೀರ್ ಗೌಡ ಅವರು ದರ್ಶನ್ ಪರವಾಗಿ ಮಾತನಾಡುತ್ತಾ ವಿರೋಧಿಗಳಿಗೆ ಖಡಕ್ ಟಾಂಗ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಒಂದು ಸಂದೇಶ ನೀಡಿದ್ದಾರೆ. ಡಿ ಬಾಸ್ ದರ್ಶನ್ ಅವರ ಹೆಸರನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವವರಿಗೆ ಮತ್ತು ವಿವಾದಗಳನ್ನು ಸೃಷ್ಟಿಸುವವರಿಗೆ ಸ್ಪಷ್ಟ ಹಾಗೂ ಕಟು ಸಂದೇಶ ರವಾನಿಸಿದ್ದಾರೆ. ಇದರ ಜೊತೆಗೆ ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಧನ್ವೀರ್ ಗೌಡ ಅವರು ದರ್ಶನ್ ಪರವಾಗಿ ದ್ವನಿ ಎತ್ತಿದ್ದು, ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ? ಪತಿ ದರ್ಶನ್ ಜೊತೆಗಿನ ಹಳೆಯ ಸುಂದರ ಫೋಟೋವನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ, ದರ್ಶನ್ ಅಭಿಮಾನಿಗಳು ಹಾಗೂ ಅವರ ಹೆಸರನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುವವರಿಗೆ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ‘ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು’ ಎಂದು ಬರೆಯುವ ಮೂಲಕ ಅನಗತ್ಯ ಹೇಳಿಕೆಗಳು ಹಾಗೂ ದುರ್ಬಳಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಚಾಮರಾಜನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದರ್ಶನ್ ಅಭಿಮಾನಿಗಳು ‘ಡಿ ಬಾಸ್’ ಎಂದು ದೊಡ್ಡ ಮಟ್ಟದಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ನಟ ಧನ್ವೀರ್ ಗೌಡ ಅವರು ದರ್ಶನ್ ವಿರೋಧಿಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ನಾಯಿ-ನರಿಗಳು ಏನೇ ಕುತಂತ್ರ ಮಾಡಿದ್ರೂ ದರ್ಶನ್ ಹೊರಬರ್ತಾರೆ’; ಯುವ ದಸರಾ ವೇದಿಕೆಯಲ್ಲಿ ಧನ್ವೀರ್ ಮಾತು
ವೇದಿಕೆ ಮೇಲೆ ಮಾತನಾಡಿದ ಧನ್ವೀರ್ ಗೌಡ, ‘ಎಷ್ಟೇ ಕೂಗಿರಿ, ಏನೇ ಮಾಡ್ರಿ. ದರ್ಶನ್‌ಗೆ ಏನೂ ಮಾಡಕ್ಕಾಗಲ್ಲ. ಯಾವ ನಾಯಿ ನರಿಗಳು ಏನೇ ಕುತಂತ್ರ ಮಾಡಿದ್ರೂ ಏನೂ ಮಾಡಕ್ಕಾಗಲ್ಲ. ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರೆ’ ಎಂದು ಹೇಳುವ ಮೂಲಕ ದರ್ಶನ್ ಮೇಲಿನ ತಮ್ಮ ಬೆಂಬಲವನ್ನು ದೃಢಪಡಿಸಿದ್ದು, ಈ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




