‘ನಾಯಿ-ನರಿಗಳು ಏನೇ ಕುತಂತ್ರ ಮಾಡಿದ್ರೂ ದರ್ಶನ್ ಹೊರಬರ್ತಾರೆ’; ಯುವ ದಸರಾ ವೇದಿಕೆಯಲ್ಲಿ ಧನ್ವೀರ್ ಮಾತು
ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ಅವರು ನಟ ದರ್ಶನ್ ಪರವಾಗಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದರ್ಶನ್ ವಿರುದ್ಧ ಎಷ್ಟೇ ಕುತಂತ್ರ ಮಾಡಿದರೂ ಅವರನ್ನು ಏನೂ ಮಾಡಲು ಆಗುವುದಿಲ್ಲ ಹಾಗೂ ಅವರು ಶೀಘ್ರದಲ್ಲೇ ಹೊರಬರಲಿದ್ದಾರೆ ಎಂದು ಭರವಸೆ ನೀಡಿದ್ದು, ಇದು ಹೊಸ ಚರ್ಚೆಗೆ ಕಾರಣ ಆಗಿದೆ.

ಮುಖ್ಯಾಂಶಗಳು
- ಯುವ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ವಿವಾದಾತ್ಮಕ ಮಾತುಗಳು
- ದರ್ಶನ್ ಪರ ಬ್ಯಾಟ್ ಬೀಸಿ ಶೀಘ್ರದಲ್ಲೇ ಹೊರಬರುವ ಬಗ್ಗೆ ಭರವಸೆ
- ಧನ್ವೀರ್ ಹೇಳಿಕೆಯಿಂದ ರಾಜ್ಯಾದ್ಯಂತ ಶುರುವಾದ ಹೊಸ ವಿವಾದ
ಮೈಸೂರಿನಲ್ಲಿ ನಡೆದ ಯುವ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ಅವರು ಆಡಿರುವ ಮಾತುಗಳು ಸದ್ಯ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿವೆ. ಹಬ್ಬದ ಸಂಭ್ರಮದ ವೇದಿಕೆಯಲ್ಲಿ ನಟ ದರ್ಶನ್ ಅವರ ಪರವಾಗಿ ಮಾತನಾಡುತ್ತಾ ಅವರು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸದ್ದು ಮಾಡುತ್ತಿವೆ. ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಕಾರ್ಯಕ್ರಮದ ವೇಳೆ ಮಾತನಾಡಿದ ಧನ್ವೀರ್, ‘ಏನೇ ಕುತಂತ್ರಗಳು ನಡೆದರೂ ಹಾಗೂ ನಾಯಿ-ನರಿಗಳು ಏನೇ ಮಾಡಿದರು ಆ ಯಪ್ಪನನ್ನು (ದರ್ಶನ್) ಏನು ಮಾಡಲು ಸಾಧ್ಯವಿಲ್ಲ. ದರ್ಶನ್ ಖಂಡಿತವಾಗಿ ಶೀಘ್ರದಲ್ಲೇ ಹೊರಗೆ ಬರಲಿದ್ದಾರೆ’ ಎಂದು ಅವರು ದೃಢವಾದ ಭರವಸೆ ನೀಡಿದ್ದು, ಅಲ್ಲಿ ಸೇರಿದ್ದ ಅಭಿಮಾನಿಗಳು ಇದನ್ನು ಹರ್ಷೋದ್ಗಾರದಿಂದ ಸ್ವಾಗತಿಸಿದ್ದಾರೆ.
View this post on Instagram
ಸಿನಿಮಾ ವೇದಿಕೆಯಲ್ಲಿ ಅವರು ಈ ರೀತಿ ಮಾತನಾಡಿದ್ದರೆ ಯಾರೂ ವಿರೋಧ ಹೊರಹಾಕುತ್ತಿರಲಿಲ್ಲ. ಆದರೆ, ಯುವದಸರಾ ವೇದಿಕೆಯನ್ನು ಇಂತಹ ವಿಚಾರಗಳಿಗೆ ಬಳಸಿಕೊಂಡಿರುವುದಕ್ಕೆ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿವೆ. ಕೆಲವರು ಇದನ್ನು ಧೈರ್ಯದ ಮಾತು ಎಂದು ಕೊಂಡಾಡುತ್ತಿದ್ದರೆ, ಇನ್ನು ಕೆಲವರು ಸಾಂಸ್ಕೃತಿಕ ವೇದಿಕೆಯಲ್ಲಿ ಈ ರೀತಿ ಮಾತನಾಡಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಧನ್ವೀರ್ ಅವರ ಈ ಹೇಳಿಕೆಯು ಹೊಸ ವಿವಾದದ ಕಿಡಿಯನ್ನು ಹೊತ್ತಿಸಿದೆ.
ಇದನ್ನೂ ಓದಿ: ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ಧನ್ವೀರ್ ಅವರು ಮೊದಲಿನಿಂದಲೂ ದರ್ಶನ್ ಪರ ಮಾತನಾಡುತ್ತಾ ಬಂದಿದ್ದಾರೆ. ದರ್ಶನ್ ಅವರ ತಮ್ಮನಂತೆ ಅವರ ಜೊತೆ ನಿಂತಿದ್ದಾರೆ. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಅನುಭವಿಸಬೇಕಾಯಿತು. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




