
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಕಳೆದ ಕೆಲ ವಾರಗಳಿಂದ ಬೆನ್ನು ನೋವಿನಿಂದು ಬಳಲುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದು, ತಮಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು, ವಿಶೇಷವಾಗಿ ಜೈಲಿನ ಹೊರಗೆ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಸೂಕ್ತ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ವಕೀಲರ ಸಹಾಯದೊಂದಿಗೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಂತೆಯೇ ನ್ಯಾಯಾಲಯವು, ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಜೈಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿತ್ತು. ಅದರಂತೆ ವೈದ್ಯಾಧಿಕಾರಿಗಳು ವರದಿ ಸಲ್ಲಿಕೆ ಮಾಡಿದ್ದಾರೆ.
ಇಂದು (ನವೆಂಬರ್ 26) ನಡೆದ ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ, ಕಳೆದ 20 ದಿನಗಳಲ್ಲಿ ಕೇವಲ ಮೂರ್ನಾಲ್ಕು ಬಾರಿ ಮಾತ್ರ ಫಿಸಿಯೋಥೆರಪಿ ನೀಡಲಾಗಿದೆ. ಎಪಿಡ್ಯೂರಲ್ ಇಂಜೆಕ್ಷನ್ ನೀಡಲು ನಿರ್ದೇಶನ ನೀಡಬೇಕು. ಜೈಲಿನಲ್ಲಿ ಈ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜೈಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ವಾದ ಮಂಡನೆಗೆ ಕಾಲಾವಕಾಶ ಕೋರಿದ ಪ್ರಾಸಿಕ್ಯೂಷನ್, ನವೆಂಬರ್ 28 ಅಥವಾ ನವೆಂಬರ್ 30ಕ್ಕೆ ವಿಚಾರಣೆ ನಿಗದಿಪಡಿಸುವಂತೆ ಮನವಿ ಮಾಡಿತು.
ಅಧಿಕಾರಿಗಳು ಸಲ್ಲಿಸಿದ ವರದಿ ಹಾಗೂ ಆರೋಗ್ಯ ಸ್ಥಿತಿ ಪರಿಶೀಲಿಸಿದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ, ನೋವು ಉಪಶಮನಕ್ಕೆ ಅಗತ್ಯ ಚಿಕಿತ್ಸೆ ಒದಗಿಸಬೇಕು, ಅಗತ್ಯಬಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸೂಚಿಸಿ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದರು. ಆ ಮೂಲಕ ದರ್ಶನ್ ಬೆನ್ನು ನೋವಿನ ಚಿಕಿತ್ಸೆಯನ್ನು ಜೈಲಿನ ಹೊರಗೆ ಪಡೆಯಬಹುದಾಗಿದೆ. ಆದರೆ ತಾವು ಇಚ್ಛಿಸಿದ ಆಸ್ಪತ್ರೆಯಲ್ಲಿ ಅಲ್ಲ ಬದಲಿಗೆ ನ್ಯಾಯಾಲಯ ಈಗ ಸೂಚಿಸಿರುವಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ ಪುನೀತ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ವರ್ಷಕ್ಕೂ ಹೆಚ್ಚು ಸಮಯದಿಂದ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೆ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದ ದರ್ಶನ್, ಚಳಿಗಾಲ ಪ್ರಾರಂಭವಾದ ಬಳಿಕ ತಮಗೆ ಮತ್ತೆ ಬೆನ್ನು ನೋವು ಪ್ರಾರಂಭವಾಗಿದೆ. ನೋವು ತೀವ್ರವಾಗಿದ್ದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Thu, 26 November 26