Vijaya Bhaskar’s Death Anniversary: ‘ಮನಮೆಚ್ಚಿದ ಮಡದಿ’ ಟೈಟಲ್ ಕಾರ್ಡಿನಲ್ಲಿ ‘ಜೈ ಭಾರತ ಜನನಿಯ ತನುಜಾತೆ‘

|

Updated on: Mar 03, 2022 | 1:19 PM

Raj Kapoor : ಪ್ರಯೋಗಶೀಲತೆಗೆ ಹೆಸರಾಗಿದ್ದ ಅವರು ಕ್ಯಾಬರೆ ಹಾಡಿಗೆ ಭೈರವಿ ರಾಗವನ್ನು ಪ್ರಯೋಗಿಸಿದರು. ಅದನ್ನು ಗುರುತಿಸಿ ಮೆಚ್ಚಿಕೊಂಡವರು ಹಿಂದಿ ಚಿತ್ರರಂಗದ ರಾಜ್ ಕಪೂರ್.

Vijaya Bhaskar’s Death Anniversary: ‘ಮನಮೆಚ್ಚಿದ ಮಡದಿ’ ಟೈಟಲ್ ಕಾರ್ಡಿನಲ್ಲಿ ‘ಜೈ ಭಾರತ ಜನನಿಯ ತನುಜಾತೆ‘
ಚಲನಚಿತ್ರ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಮತ್ತು ಹಿರಿಯ ಪರ್ತಕರ್ತ ಎನ್. ಎಸ್. ಶ್ರೀಧರಮೂರ್ತಿ
Follow us on

ವಿಜಯ ಭಾಸ್ಕರ್ | Vijaya Bhaskar (1931-2002) :  ಗೀತಪ್ರಿಯ ಅವರನ್ನು ಚಿತ್ರರಂಗಕ್ಕೆ ತಂದವರು ವಿಜಯ ಭಾಸ್ಕರ್ ಅವರೇ. ‘ಭಾಗ್ಯಚಕ್ರ’ ಸಿನಿಮಾದಲ್ಲಿ ಸಂಭಾಷಣೆ-ಹಾಡುಗಳನ್ನ ಬರೆಸಿದ್ದರು. ಗೀತಪ್ರಿಯ ‘ಮಣ್ಣಿನ ಮಗ’ ಸಿನಿಮಾ ಮೂಲಕ ನಿರ್ದೇಶಕರಾದಾಗ ಅವರ ಬೆನ್ನು ತಟ್ಟಿ ಸಂಗೀತ ನೀಡಿದ್ದರು. ವಿಜಯ ಭಾಸ್ಕರ್ ಅವರು ಸಂಗೀತ ಕೊಟ್ಟ ಕೊನೆಯ ಸಿನಿಮಾ ಗೀತಪ್ರಿಯ ಅವರ ನಿರ್ದೇಶನದ ‘ಶ್ರಾವಣ ಸಂಭ್ರಮ’ವೇ ಆಗಿತ್ತು. ಕಮರ್ಷಿಯಲ್ ಸಿನಿಮಾ ಮಾತ್ರ ಅಲ್ಲ ಆರ್ಟ್ ಸಿನಿಮಾಗಳಿಗೂ ಕೂಡ ವಿಜಯ ಭಾಸ್ಕರ್ ಬೇಕು ಅನ್ನೋ ಬೇಡಿಕೆ ಇದ್ದೇ ಇತ್ತು. ‘ಸಂಕಲ್ಪ’ದಿಂದ ಆರಂಭಿಸಿ ಕನ್ನಡದಲ್ಲಿ ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಬಂದ ಬಹುತೇಕ ಆರ್ಟ್ ಫಿಲಂಗಳಿಗೆ ವಿಜಯ ಭಾಸ್ಕರ್ ಅವರದೇ ಮ್ಯೂಸಿಕ್. ಪಿ.ಲಂಕೇಶ್ ಅವರ ‘ಎಲ್ಲಿಂದಲೂ ಬಂದವರು ಸಿನಿಮಾ’ದಲ್ಲಿ ‘ಎಲ್ಲಿದ್ದೆ ಇಲ್ಲಿತನಕ’ ‘ಕೆಂಪಾದವೂ ಎಲ್ಲಾ ಕೆಂಪಾದವೂ’ ಗೀತೆಗಳು ಯಾವ ಕಮರ್ಷಿಯಲ್ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಫೇಮಸ್ ಆಗಿದ್ದು ವಿಜಯಭಾಸ್ಕರ್ ಅವರ ಕೈಚಳಕದಿಂದ.
ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪರ್ತಕರ್ತ

*

(ಭಾಗ 4)

ಕನ್ನಡ ಮಾತ್ರ ಅಲ್ಲ. ಮಲೆಯಾಳಂನಲ್ಲಿ ಕೂಡ ಆಡೂರು ಗೋಪಾಲಕೃಷ್ಣನ್ ಎಲ್ಲಾ ಸಿನಿಮಾಗಳಿಗೂ ವಿಜಯಭಾಸ್ಕರ್ ಅವರಿಂದಲೇ ಸಂಗೀತ ಮಾಡಿಸಿದ್ದರು. ವಿಜಯಭಾಸ್ಕರ್ ಅವರನ್ನು ‘ನ್ಯೂಸ್ ಪೇಪರ್ ಎಡಿಟೊರಿಯಲ್’ಗೆ ಕೂಡ ಮ್ಯೂಸಿಕ್ ಮಾಡ್ತಾರೆ ಅಂತ ಲೇವಡಿ ಮಾಡುವವರು ಇದ್ದರು. ಆದರೆ ಅವರಿಗೆ ಸಂಗೀತ ಎಷ್ಟರ ಮಟ್ಟಿಗೆ ಒಲಿದಿತ್ತು ಎಂದರೆ ಯಾವುದೇ ಸಂದರ್ಭಕ್ಕೆ ಸಂಗೀತ ಮೂಡಿಸುವುದು ಅವರಿಗೆ ಸಹಜವಾಗಿ ಬಂದುಬಿಡುತ್ತಿತ್ತು.

ಹಿಂದಿ ಚಿತ್ರರಂಗದಲ್ಲಿ ಆರ್.ಸಿ.ಬೋರಾಲ್ ಮತ್ತು ಮುಕುಲ್ ಮೆಹ್ತಾ ಅವರು ನೀಡುತ್ತಿದ್ದಂತೆ “ಥೀಮ್ ಮ್ಯೂಸಿಕ್”ಅನ್ನು ಕನ್ನಡದಲ್ಲಿ ತರಲು ವಿಜಯಭಾಸ್ಕರ್ ಪ್ರಯತ್ನಿಸಿದರು. “ಬೆಳ್ಳಿ ಮೋಡ” “ಗೆಜ್ಜೆಪೂಜೆ”, “ನಾಗರ ಹಾವು” “ಮಲಯ ಮಾರುತ”, “ಮಣ್ಣಿನ ಮಗ” ಹೀಗೆ ವಿವಿಧ ಚಿತ್ರಗಳಿಗೆ ಅವರು ಪಾತ್ರಕ್ಕೆ ಸನ್ನಿವೇಶಕ್ಕೆ ಹೊಂದುವ ರಾಗಗಳನ್ನು ಬಳಸಿ ಚಿತ್ರವನ್ನು ಪ್ರಭಾವಿಯಾಗಿಸಿದರು. ಅದು ಮುಂದೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ಟ್ರೆಂಡ್ ಆಗಿ ಬೆಳೆಯಿತು. ಪ್ರಯೋಗಶೀಲತೆಗೆ ಹೆಸರಾಗಿದ್ದ ಅವರು ಕ್ಯಾಬರೆ ಹಾಡಿಗೆ ಕ್ಲಾಸಿಕಲ್ ಆದ ಭೈರವಿ ರಾಗವನ್ನು ಪ್ರಯೋಗಿಸಿದರು. ಅದನ್ನು ಗುರುತಿಸಿ ಮೆಚ್ಚಿಕೊಂಡವರು ಹಿಂದಿ ಚಿತ್ರರಂಗದ ರಾಜ್ ಕಪೂರ್.

ಇದನ್ನೂ ಓದಿ : P Kalinga Rao‘s Birthday : ‘ಹೌದು ನಾನು ಕಿಂಗ್ ಎಲ್ಲಿದ್ದರೂ ಅದೇ ಪ್ಯಾಲೇಸ್!’

1964ರಲ್ಲಿ ಬಂದ ‘ಸಂಗಮ್’ ಸಿನಿಮಾ ನಂತರ ತಮ್ಮ ಮುಂದಿನ ಎಲ್ಲಾ ಸಿನಿಮಾಗಳ ಮ್ಯೂಸಿಕ್ ಡೈರೆಕ್ಟರ್ ಯಾರೇ ಆಗಿದ್ದರೂ ವಿಜಯ ಭಾಸ್ಕರ್ ಅವರ ಸಲಹೆ ಪಡೆಯುತ್ತಾ ಇದ್ದರು. ಅವರಿಂದ ಬಿ.ಜಿ.ಎಂ ಪಡೆಯುತ್ತಾ ಇದ್ದರು. ಅವರಿಂದ ಒಂದು ಸಿನಿಮಾ ಮಾಡಿಸಬೇಕು ಅನ್ನೋ ರಾಜ್ ಕಪೂರ್ ಆಸೆ ಈಡೇರಲೇ ಇಲ್ಲ. ಕಾರಣ ಅವರ ಸಿನಿಮಾಗಳ ಪ್ರೊಡಕ್ಷನ್ 3-4 ವರ್ಷ ಹಿಡಿಯುತ್ತಾ ಇತ್ತು. ಆದರೆ ದಕ್ಷಿಣ ಭಾರತದ ಪ್ರಮುಖ ಸಂಗೀತ ನಿರ್ದೇಶಕ ಆಗಿದ್ದ ವಿಜಯ ಭಾಸ್ಕರ್ ಅಷ್ಟು ಕಾಲ ಮುಂಬೈಗೆ ಹೋಗಿ ಇರಲು ಸಾಧ್ಯ ಆಗ್ತಾ ಇರಲಿಲ್ಲ.

ಟೈಟಲ್ ಕಾರ್ಡ್ ತೋರಿಸುವಲ್ಲಿಯೂ ವಿಜಯ ಭಾಸ್ಕರ್ ಹೊಸತನವನ್ನು ತಂದರು “ಮನ ಮೆಚ್ಚಿದ ಮಡದಿ”ಚಿತ್ರದ ಟೈಟಲ್ ಕಾರ್ಡ್ ಹಿನ್ನೆಲೆಯಲ್ಲಿ ಕುವೆಂಪು ಅವರ “ಜೈ ಭಾರತ ಜನನಿಯ ತನುಜಾತೆ” ಕವಿತೆ ಅಳವಡಿಸಿದರು. ಮುಂದೆ ಅದು ಜನಪ್ರಿಯವಾಗಿ ನಾಡಗೀತೆಯಾಯಿತು. “ಪಡುವಾರಹಳ್ಳಿ ಪಾಂಡವರು”ಚಿತ್ರದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ಸಂಕ್ಷೇಪವಾಗಿ ತೋರಿಸಿದರು. ಹಾಗೆ ಕನ್ನಡದ ಸಂಗೀತಗಾರರನ್ನು, ವಾದ್ಯ ಕಲಾವಿದರನ್ನ, ಗಾಯಕರನ್ನ ಪ್ರೋತ್ಸಾಹಿಸಿದರು. ‘ಗೆಜ್ಜೆಪೂಜೆ’ಯಲ್ಲಿ ಬಿ.ಕೆ.ಸುಮಿತ್ರಾ, ‘ಕಥಾಸಂಗಮ’ದಲ್ಲಿ ಕಸ್ತೂರಿ ಶಂಕರ್, ‘ಅಮೃತಘಳಿಗೆ’ಯಲ್ಲಿ ಬಿ.ಆರ್.ಛಾಯಾ ಅವರ ಬಳಿ ಹಾಡಿಸಿ ಅವರು ಪ್ರಮುಖ ಗಾಯಕರಾಗಿ ಬೆಳೆಯುವುದಕ್ಕೆ ಕಾರಣ ಆದರು. ಇಂತಹ ಉದಾಹರಣೆಗಳು ಸಾಕಷ್ಟಿವೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಹಿಂದಿನ ಭಾಗ : Vijaya Bhaskar‘s Death Anniversary: ‘ನೀನೇ ಸಾಕಿದ ಗಿಳಿ’ ಹಮ್ಮಿಂಗ್ ಕೇಳಿ ‘ನನ್ನ ಮನಸ್ಸನ್ನೇ ಹಿಡಿದುಬಿಟ್ಟೆ’ ಎಂದಿದ್ದರು ಪುಟ್ಟಣ್ಣ