ಸಿಬಿಎಫ್ಸಿ ವಿರುದ್ಧ ಜಗಳಕ್ಕೆ ನಿಂತ ಆಮಿರ್ ಖಾನ್, ಕಾರಣವೇನು?
Aamir Khan: ಬಾಲಿವುಡ್ ನಟ ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಇದೀಗ ಸಿಬಿಎಫ್ಸಿ ತಕರಾರು ತೆಗೆದಿದ್ದು, ಬುದ್ಧಿಮಾಂದ್ಯರ ಬಗ್ಗೆ ಮಾಡಿರುವ ಈ ಸಿನಿಮಾದ ಎರಡು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಆದರೆ ಬಲು ಪ್ರೀತಿಯಿಂದ ಸಿನಿಮಾ ಮಾಡಿರುವ ಆಮಿರ್ ಖಾನ್, ಇದಕ್ಕೆ ಸುತಾರಾಂ ಒಪ್ಪಿಲ್ಲ.

ಆಮಿರ್ ಖಾನ್ (Aamir Khan) ಬಾಲಿವುಡ್ನ ಸ್ಟಾರ್ ನಟ. ಇತರೆ ಖಾನ್ಗಳ ರೀತಿ ಕೇವಲ ಕಮರ್ಶಿಯಲ್, ಮಾಸ್ ಸಿನಿಮಾಗಳ ಹಿಂದೆ ಹೋಗದೆ, ಪ್ರೇಕ್ಷಕರಿಗೆ ಒಳ್ಳೆ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ. ಈ ಒಳ್ಳೆಯ ಸಿನಿಮಾಗಳನ್ನು ನೀಡುವ ಪ್ರಯತ್ನದಲ್ಲಿ ಸಾಕಷ್ಟು ಬಾರಿ ನಷ್ಟವನ್ನೂ ಸಹ ಅನುಭವಿಸಿದ್ದಾರೆ. ಆಮಿರ್, ಬಹಳ ಪ್ರೀತಿಯಿಂದ ನಿರ್ಮಿಸಿದ್ದ ಅವರ ಈ ಹಿಂದಿನ ಸಿನಿಮಾ ‘ಲಾಲ್ ಸಿಂಗ್ ಛಡ್ಡ’ ಹೀನಾಯ ಸೋಲು ಕಂಡಿತು. ಇದೀಗ ಆಮಿರ್, ‘ಸಿತಾರೆ ಜಮೀನ್ ಪರ್’ ಸಿನಿಮಾ ಹೊತ್ತು ಬರುತ್ತಿದ್ದಾರೆ. ಆದರೆ ಸಿನಿಮಾ ಪ್ರಚಾರ ಚಾಲ್ತಿಯಲ್ಲಿರುವಾಗಲೇ ಸಂಕಷ್ಟವೊಂದು ಎದುರಾಗಿದೆ.
‘ಸಿತಾರೆ ಜಮೀನ್ ಪರ್’ ಸಿನಿಮಾ ವಿಶೇಷ ಚೇತನ ವ್ಯಕ್ತಿಗಳಿಗೆ ಬಾಸ್ಕೆಟ್ಬಾಲ್ ಕಲಿಸಿ ಅವರನ್ನು ಪ್ರಶಸ್ತಿ ಗೆಲ್ಲುವಂತೆ ಮಾಡುವ ಕತೆಯನ್ನು ಒಳಗೊಂಡಿದೆ. ವಿಶೇಷ ಚೇತನ ಮಕ್ಕಳನ್ನು, ಜನರನ್ನು ಸಮಾಜ ಹೇಗೆ ಸ್ವೀಕಾರ ಮಾಡಬೇಕು, ಹೇಗೆ ಅವರೊಟ್ಟಿಗೆ ನಡೆದುಕೊಳ್ಳಬೇಕು, ಅವರ ಸಮಸ್ಯೆಗಳೇನು? ಅವರ ಶಕ್ತಿ ಏನು ಇತ್ಯಾದಿ ವಿಷಯಗಳ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಈ ಹಿಂದೆ ‘ತಾರೆ ಜಮೀನ್ ಪರ್’ ಸಿನಿಮಾ ಮೂಲಕ ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳ ಬಗ್ಗೆ ಆಮಿರ್ ಮಾತನಾಡಿದ್ದರು. ಈಗ ವಿಶೇಷ ಚೇತನ ಅಥವಾ ಬುದ್ಧಿಮಾಂದ್ಯ ವ್ಯಕ್ತಿಗಳ ಸಮಸ್ಯೆಗಳ ಬಗ್ಗೆ ಸಿನಿಮಾ ಮೂಲಕ ಜಾಗೃತಿ ಮೂಡಿಸಲಿದ್ದಾರೆ.
ಇದನ್ನೂ ಓದಿ:ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ಒಂದೊಳ್ಳೆ ವಿಷಯ ಇಟ್ಟುಕೊಂಡು ಆಮಿರ್ ಸಿನಿಮಾ ಮಾಡಿದ್ದಾರಾದರೂ ಇದೀಗ ಸಿಬಿಎಫ್ಸಿ ಕೆಲವು ತಕರಾರುಗಳನ್ನು ತೆಗೆದಿದೆ. ಸಿಬಿಎಫ್ಸಿ, ‘ಸಿತಾರೆ ಜಮೀನ್ ಪರ್’ ಸಿನಿಮಾದ ಎರಡು ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಿರ್ದೇಶಕರಿಗೆ ಸೂಚನೆ ನೀಡಿದೆ. ಆದರೆ ಇದು ಆಮಿರ್ ಖಾನ್ ಅವರಿಗೆ ಸುತಾರಂ ಹಿಡಿಸಿಲ್ಲ. ಸಿಬಿಎಫ್ಸಿ ಸೂಚಿಸಿರುವ ದೃಶ್ಯಗಳು ಕತ್ತರಿ ಹಾಕಬೇಕಾದ ದೃಶ್ಯಗಳಲ್ಲ, ಅವನ್ನು ಬೇರೆ ದೃಷ್ಟಿಕೋನದಿಂದ ನೋಡಬೇಕಾದ ಅವಶ್ಯಕತೆ ಇದೆ ಎಂದಿದ್ದಾರಂತೆ. ಹಾಗಾಗಿ ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕದಿರಲು ಆಮಿರ್ ಖಾನ್ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಿಬಿಎಫ್ಸಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಆಲೋಚನೆಯನ್ನೂ ಸಹ ಆಮಿರ್ ಮಾಡುತ್ತಿದ್ದಾರೆ. ‘ಸಿತಾರೆ ಜಮೀನ್ ಪರ್’ ಸಿನಿಮಾ ಜೂನ್ 20 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಆಮಿರ್ ಖಾನ್ ಜೊತೆಗೆ ಜೆನಿಲಿಯಾ ಡಿಸೋಜಾ ನಾಯಕಿಯಾಗಿ ನಟಿಸಿದ್ದಾರೆ. ಆಮಿರ್ ಖಾನ್ ರ ಈ ಸಿನಿಮಾವನ್ನು ಪ್ರಸನ್ನ ನಿರ್ದೇಶನ ಮಾಡಿದ್ದಾರೆ. ಫ್ರೆಂಚ್ ಭಾಷೆಯ ಸಿನಿಮಾ ‘ಚಾಂಪಿಯನ್ಸ್’ನಿಂದ ಸ್ಪೂರ್ತಿ ಪಡೆದು ಮಾಡಿರುವ ಸಿನಿಮಾ ಇದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




