Deepika Padukone: ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ; ವಿದ್ಯಾರ್ಥಿಗಳಿಗೆ ನೀಡಿದ ಸಲಹೆಗಳೇನು?

Pariksha Pe Charcha 2025: ಪರೀಕ್ಷಾ ಪೇ ಚರ್ಚಾ 2025ರಲ್ಲಿ ದೀಪಿಕಾ ಪಡುಕೋಣೆ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಸ್ಪರ್ಧೆಯನ್ನು ಆರೋಗ್ಯಕರವಾಗಿ ಎದುರಿಸುವುದು, ಸ್ವಂತ ಸಾಮರ್ಥ್ಯಗಳನ್ನು ಗುರುತಿಸುವುದು ಮತ್ತು ಧನಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು ಮುಂತಾದ ಉಪಯುಕ್ತ ಸಲಹೆಗಳನ್ನು ಅವರು ನೀಡಿದ್ದಾರೆ. ಪ್ರಸ್ತುತದಲ್ಲಿ ಉಳಿಯುವುದು ಮತ್ತು ಭಯವನ್ನು ನಿವಾರಿಸಿಕೊಳ್ಳುವುದು ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅವಶ್ಯಕ ಎಂದು ಅವರು ಒತ್ತಿ ಹೇಳಿದ್ದಾರೆ.

Deepika Padukone: ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ; ವಿದ್ಯಾರ್ಥಿಗಳಿಗೆ ನೀಡಿದ ಸಲಹೆಗಳೇನು?
ದೀಪಿಕಾ

Updated on: Feb 12, 2025 | 2:34 PM

‘ಪರೀಕ್ಷಾ ಪೆ ಚರ್ಚಾ 2025’ ಎಪಿಸೋಡ್​ನಲ್ಲಿ ದೀಪಿಕಾ ಪಡುಕೋಣೆ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ವಿಧಾನ ಹಾಗೂ ಅದರ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಈ ಮೂಲಕ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೇಂದ್ರ ಸರ್ಕಾರದ ಆಂದೋಲನಕ್ಕೆ ಕೈ ಜೋಡಿಸಿದ್ದಾರೆ. ಪರೀಕ್ಷಾ ಸಂದರ್ಭದಲ್ಲಿ ಮಕ್ಕಳು ಒತ್ತಡಕ್ಕೆ ಒಳಗಾಗಿ, ಕಡಿಮೆ ಅಂಕ ಪಡೆಯುತ್ತಾರೆ. ಹೀಗಾಗದಂತೆ ನೋಡಿಕೊಳ್ಳಲು ದೀಪಿಕಾ ಪಡುಕೋಣೆ ನೀಡಿದ ಕೆಲವು ಟಿಪ್ಸ್​ಗಳನ್ನು ನೀಡಿದ್ದಾರೆ.

ಸ್ಪರ್ಧಾತ್ಮಕ ಜಗತ್ತಲ್ಲಿ ಹೇಗೆ ಬದುಕುವುದು ಎಂಬುದನ್ನು ದೀಪಿಕಾ ವಿವರಿಸಿದ್ದಾರೆ.  ‘ಪರಸ್ಪರ ಸ್ಪರ್ಧೆ ಮತ್ತೆ ಹೋಲಿಕೆ ಜೀವನದ ಸಹಜ ಭಾಗ. ಸ್ಪರ್ಧೆಯು ಕೆಟ್ಟ ವಿಷಯವಲ್ಲ. ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಲು, ನಮ್ಮ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಲು ಮತ್ತು ನಮ್ಮ ದೌರ್ಬಲ್ಯಗಳನ್ನು ಸುಧಾರಿಸಲು ಸ್ಪರ್ಧೆ ಸಹಕಾರಿ’ ಎಂದು ದೀಪಿಕಾ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.

‘ಸ್ಪರ್ಧೆ ಇದ್ದರೆ ನೀವು ಬೆಳೆಯುತ್ತೀರಿ. ನಿಮ್ಮ ಸಹ ಸ್ಪರ್ಧಿಯಿಂದ ನಾನೇನು ಕಲಿಯಬಲ್ಲೆ ಎಂದು ನಿಮ್ಮನ್ನು ಕೇಳಿಕೊಳ್ಳಿ. ನಾನು ಹೇಗೆ ವಿಭಿನ್ನವಾಗಿ ಕೆಲಸಗಳನ್ನು ಮಾಡಬಹುದು ಎಂದು ಪ್ರಶ್ನೆ ಹಾಕಿಕೊಳ್ಳಿ. ನಮ್ಮ ಜೊತೆಯೇ ನಾವು ಸ್ಪರ್ಧೆಗೆ ಇಳಿಯಬೇಕು. ನಾನು ಏನನ್ನಾದರೂ ಮಾಡಿದರೆ ಮುಂದಿನ ಬಾರಿ ಅದನ್ನು ಮೀರಿ ಮಾಡಲು ಪ್ರಯತ್ನಿಸುತ್ತೇನೆ’ ಎಂದರು ದೀಪಿಕಾ.


ವಿದ್ಯಾರ್ಥಿ ವಯಸ್ಸಿನಲ್ಲಿ ಇದ್ದಾಗ ತಮ್ಮ ಸ್ಟ್ರೆಂತ್ ಯಾವುದು, ವೀಕ್​ನೆಸ್ ಯಾವುದು ಎಂಬುದು ತಿಳಿದಿರುವುದಿಲ್ಲ. ನಮ್ಮ ಸಾಮರ್ಥ್ಯಗಳನ್ನು ಮೊದಲು ಗುರುತಿಸಬೇಕು ಎಂಬುದು ದೀಪಿಕಾ ಮಾತು. ‘ನಮ್ಮ ಸಾಮರ್ಥ್ಯವನ್ನು ನಾವು ಮೊದಲು ಗುರುತಿಸಬೇಕು. ಆಗ ನೀವು ಬೇರೆಯ ವ್ಯಕ್ತಿ ಎನ್ನುವ ಭಾವನೆ ನಿಮಗೆ ಬರುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: Pariksha Pe Charcha 2025: ಹೊಸ ಆಯಾಮದಲ್ಲಿ ಪರೀಕ್ಷಾ ಪೆ ಚರ್ಚಾ, ಮೋದಿ ಜತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು

ಸದಾ ನಗುತ್ತಾ ಇರಬೇಕು ಎನ್ನುವ ಟಿಪ್ಸ್​ನ ದೀಪಿಕಾ ಪಡುಕೋಣೆ ಅವರು ನೀಡಿದ್ದಾರೆ. ಇದನ್ನು ಪರಿಪಾಲಿಸೋದಾಗಿ ಮಕ್ಕಳು ದೀಪಿಕಾಗೆ ಪ್ರಾಮಿಸ್ ಮಾಡಿದರು. ಪರೀಕ್ಷಾ ಸಂದರ್ಭದಲ್ಲಿ ಪ್ರಸ್ತುತದಲ್ಲಿ ಇರುವಂತೆ ವಿದ್ಯಾರ್ಥಿಗಳಿಗೆ ಅವರು ಕೋರಿದ್ದಾರೆ. ‘ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಏನಾಗಿ ಬಿಡುತ್ತದೆ? ಪರೀಕ್ಷೆಯಲ್ಲಿ ಕಷ್ಟದ ಪ್ರಶ್ನೆಗಳನ್ನು ಕೇಳಿದರೆ’ ಎನ್ನುವ ಭಯ ಇದ್ದರೆ ಪರೀಕ್ಷೆ ಎದುರಿಸೋದು ಕಷ್ಟ ಆಗಬಹುದು ಎಂದು ದೀಪಿಕಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.