ಮಹಿಳೆಯರು, ವಿಶೇಷವಾಗಿ ಸಿನಿಮಾ ನಟಿಯರು ಆನ್ಲೈನ್ನಲ್ಲಿ ಪ್ರತಿದಿನ ನಿಂದನೆ, ದೌರ್ಜನ್ಯ ಅನುಭವಿಸುತ್ತಿದ್ದಾರೆ. ಟ್ರೋಲರ್ಗಳಿಂದ ನಿಂದನೆ, ವೈಯಕ್ತಿಕ ತೇಜೋವಧೆ, ಅಶ್ಲೀಲ ಕಮೆಂಟ್ಗಳ ಜೊತೆಗೆ ಇತ್ತೀಚೆಗೆ ನಟಿಯರ ಚಿತ್ರಗಳನ್ನು ಬಳಸಿ ನಕಲಿ ಚಿತ್ರ, ವಿಡಿಯೋಗಳನ್ನು ಹರಿಬಿಡುವ ಚಾಳಿ ಹೆಚ್ಚಾಗುತ್ತಿದೆ. ಹಲವು ನಟಿಯರು ಈ ಆನ್ಲೈನ್ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ಇದೀಗ ದೇವಯಾನಿ ಶರ್ಮಾ ಇದೇ ರೀತಿಯ ಸಂಕಟವನ್ನು ಎದುರಿಸುತ್ತಿದ್ದಾರೆ. ದುರುಳರು ದೇವಯಾನಿಯ ಮೊಬೈಲ್ ಹ್ಯಾಕ್ (Mobile Hack) ಮಾಡಿ ಅವರ ಖಾಸಗಿ ಮಾಹಿತಿ, ಚಿತ್ರಗಳನ್ನು ಸಹ ಕದ್ದಿದ್ದಾರಂತೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ದೇವಯಾನಿ ಶರ್ಮಾ, ‘ಕೆಲವು ದಿನಗಳ ಹಿಂದೆ ನನ್ನ ಮೊಬೈಲ್ ಅನ್ನು ಯಾರೋ ಹ್ಯಾಕ್ ಮಾಡಿದ್ದರು. ಅಥವಾ ಕ್ಲೋನ್ ಮಾಡಿದ್ದರು. ನನ್ನ ಮೊಬೈಲ್ನಲ್ಲಿದ್ದ ನನ್ನ ಖಾಸಗಿ ಮಾಹಿತಿಗಳನ್ನು ಕದಿಯಲಾಗಿದೆ. ನನ್ನನ್ನು ಬ್ಲಾಕ್ ಮೇಲ್ ಮಾಡಲೆಂದು ಅಥವಾ ನನ್ನನ್ನು ಹೆದರಿಸಲೆಂದು ಹೀಗೆ ಮಾಡಲಾಗಿದೆ ಎಂದು ಊಹಿಸುತ್ತಿದ್ದೇನೆ. ಈಗ ಮತ್ತೆ ನನ್ನ ವಾಟ್ಸ್ಆಪ್ ಅನ್ನು ಹ್ಯಾಕ್ ಮಾಡಲಾಗಿದೆ. ನನ್ನ ಮೊಬೈಲ್ನ ಸೆಟ್ಟಿಂಗ್ಸ್ಗಳನ್ನು ಬದಲು ಮಾಡಲಾಗಿದೆ. ನನ್ನ ಮೊಬೈಲ್ ಫೋನ್ ಮೊದಲಿನಂತೆ ಇಲ್ಲ ಎಂಬುದು ನನಗೆ ಖಾತ್ರಿಯಾಗಿದೆ’ ಎಂದಿದ್ದಾರೆ ದೇವಯಾನಿ ಶರ್ಮಾ.
‘ನನ್ನ ಮೊಬೈಲ್ ಬಳಸಿ ಬೇರೆ ಯಾರಿಗಾದರೂ ಸಂದೇಶ ಕಳುಹಿಸಲಾಗಿದೆಯೇ ಎಂಬುದು ನನಗೆ ಗೊತ್ತಿಲ್ಲ. ಒಂದೊಮ್ಮೆ ಹಾಗೆ ಯಾರಿಗಾದರೂ ಸಂದೇಶ ಬಂದಿದ್ದರೆ ದಯವಿಟ್ಟು ಅದನ್ನು ನಿರ್ಲಕ್ಷಿಸಿ ನಿಮಗೆ ನಾನು ಸಂದೇಶ ಕಳಿಸಿಲ್ಲ. ಈ ಬೆಳವಣಿಗೆಯಿಂದ ನನ್ನ ಮಾನಸಿಕ ಆರೋಗ್ಯ ಹಾಳಾಗಿದೆ. ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ. ನಾನು ಮೂರು ಬಾರಿ ಮುಂಬೈನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ವ್ಯವಸ್ಥೆಯ ಮೇಲೆ ನಂಬಿಕೆ ಇದೆ, ಪೊಲೀಸರು ಪ್ರಕರಣದ ತನಿಖೆ ನಡೆಸುವರೆಂಬ ವಿಶ್ವಾಸವಿದೆ’ ಎಂದಿದ್ದಾರೆ.
ಇದನ್ನೂ ಓದಿ:ನಟಿ ರಾಗಿಣಿ ದ್ವಿವೇದಿ ಡಿಫರೆಂಟ್ ಫ್ಯಾಷನ್ ಕಂಡು ವಾವ್ ಎಂದ ಫ್ಯಾನ್ಸ್
‘ಯಾರಿಗಾದರೂ ನನ್ನ ಮೊಬೈಲ್ ಸಂಖ್ಯೆಯಿಂದ ಚಿತ್ರ ವಿಚಿತ್ರ ಸಂದೇಶಗಳು ಬಂದರೆ ಅದನ್ನು ನಿರ್ಲಕ್ಷಿಸಿ, ನಾನು ಈಗಾಗಲೇ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೇನೆ ಹಾಗೂ ಪರಿಹಾರ ಮಾಡಿಕೊಳ್ಳಲಿದ್ದೇನೆ. ನನ್ನ ಹೆಸರು ಹಾಳು ಮಾಡಲು, ನನ್ನ ವೃತ್ತಿಯನ್ನು ಹಾಳುಗೆಡವಲು ಮಾಡಿರುವ ಸ್ಪಷ್ಟ ಹುನ್ನಾರ ಇದೆಂದು ನನಗೆ ಖಾತ್ರಿ ಆಗಿದೆ. ಕಲಾವಿದರ ಜೀವನ ಕಷ್ಟ, ಈ ರೀತಿಯ ಘಟನೆಗಳು ಅವರ ಜೀವನವನ್ನು ಇನ್ನಷ್ಟು ಕಠಿಣಗೊಳಿಸುತ್ತವೆ. ಆದಷ್ಟು ಬೇಗ ಈ ಸಮಸ್ಯೆಯಿಂದ ಹೊರಗೆ ಬರುವ ನಂಬಿಕೆ ನನಗೆ ಇದೆ’ ಎಂದಿದ್ದಾರೆ ದೇವಯಾನಿ.
ದೇವಯಾನಿ ಶರ್ಮಾ, ತೆಲುಗಿನ ‘ಅನಗನಗಾ’ ಹಾಗೂ ‘ರೊಮ್ಯಾಂಟಿಕ್’ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಹಿಂದಿಯ ‘ಸೇವ್ ದಿ ಟೈಗರ್ಸ್’ ಸಿನಿಮಾದಲ್ಲಿಯೂ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆ ಆದ ಮಾಧವನ್, ಅಜಯ್ ದೇವಗನ್ ನಟನೆಯ ‘ಶೈತಾನ್’ ನಲ್ಲಿ ದೇವಯಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ