ಇಳಯರಾಜ (Ilayaraja) ಭಾರತದ ಟಾಪ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಅವರ ಜೊತೆಯಲ್ಲಿ ಸಂಗೀತ ನಿರ್ದೇಶನ ಆರಂಭಿಸಿದ ಹಲವು ನಿರ್ದೇಶಕರು ಅಪ್ರಸ್ತುತವಾಗಿ ಮೂಲೆಗುಂಪಾಗಿಬಿಟ್ಟದ್ದಾರೆ. ಆದರೆ ಇಳಯರಾಜ ಶುದ್ಧ ಮೆಲೋಡಿ ಮೂಲಕ ಇಂದಿಗೂ ಬೇಡಿಕೆಯಲ್ಲಿದ್ದಾರೆ. ‘ಮ್ಯೂಸಿಕ್ ಮೇಸ್ಟ್ರೋ’ ಎಂದೇ ಕರೆಸಿಕೊಳ್ಳುವ ಇಳಯರಾಜ ಅವರ ಜೀವನ ಕತೆ ಇದೀಗ ಸಿನಿಮಾ ಆಗುತ್ತಿದೆ. ಸಾಮಾನ್ಯದಲ್ಲಿ ಸಾಮಾನ್ಯ ಕುಟುಂಬದಿಂದ ಬಂದು, ಚಿತ್ರರಂಗದಲ್ಲಿ ಹಲವು ಅಡೆ-ತಡೆಗಳನ್ನು ಎದುರಿಸಿ ಎಲ್ಲವನ್ನೂ ಕೇವಲ ಪ್ರತಿಭೆಯೊಂದರಿಂದಲೇ ಮೆಟ್ಟಿನಿಂತು ಭಾರತದ ಅತ್ಯುತ್ತಮ ಸಂಗೀತ ನಿರ್ದೇಶಕರ ಸಾಲಿನಲ್ಲಿ ನಿಂತ ಇಳಯರಾಜ ಅವರ ಜೀವನ ಕತೆ ಈಗ ಸಿನಿಮಾ ಆಗುತ್ತಿದೆ.
ಸಿನಿಮಾದಲ್ಲಿ ಇಳಯರಾಜ ಅವರ ಪಾತ್ರದಲ್ಲಿ ತಮಿಳಿನ ಸ್ಟಾರ್ ನಟ ಧನುಶ್ ನಟಿಸಲಿದ್ದಾರೆ. ಪ್ರಸ್ತುತ ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರ’ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದು, ಕೆಲವೇ ದಿನಗಳಲ್ಲಿ ಆ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಅದರ ನಡುವೆಯೇ ಧನುಶ್, ಇಳಯರಾಜರ ಜೀವನ ಆಧರಿಸಿದ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲ ಮೂಲಗಳ ಪ್ರಕಾರ ನಾಳೆ (ಮಾರ್ಚ್ 20) ಸಿನಿಮಾದ ಮುಹೂರ್ತ ನಡೆಯಲಿದ್ದು, ಪೋಸ್ಟರ್ ಬಿಡುಗಡೆಯೂ ಆಗಲಿದೆ.
ಇಳಯರಾಜ ಅವರು ಚಿತ್ರರಂಗಕ್ಕೆ ಬರುವಲ್ಲಿ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಗೂ ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿ ರಾಜು ಅವರ ಕೊಡುಗೆ ದೊಡ್ಡದು. ಸಿನಿಮಾದಲ್ಲಿ ಈ ಇಬ್ಬರ ಪಾತ್ರಗಳೂ ಇರಲಿವೆಯೇ? ಇಳಯರಾಜ ಜೀವನದ ಯಾವ ಭಾಗವನ್ನು ಸಿನಿಮಾಕ್ಕೆ ಎತ್ತಿಕೊಳ್ಳಲಾಗಿದೆ ಎಂಬ ಕೆಲವು ಗೊಂದಲಗಳು ಪ್ರೇಕ್ಷಕರಿಗೆ ಹಾಗೂ ಇಳಯರಾಜರ ಅಭಿಮಾನಿಗಳಿಗೆ ಇದೆ. ಅದಕ್ಕೆ ಉತ್ತರ ದೊರಕಲು ಕೆಲವು ತಿಂಗಳುಗಳೇ ಕಾಯಬೇಕಿದೆ.
ಇದನ್ನೂ ಓದಿ:ಹೇ ರಾಮ್ ಹಾಡುಗಳು ಸೃಷ್ಟಿಯಾಗಿದ್ದು ಹೀಗೆ, ಕಮಲ್ ಹಾಸನ್ ಹೇಳಿದ ಇಳಯರಾಜ ಪ್ರತಿಭೆಯ ಕತೆ
ಧನುಶ್ರ ಈ ಹಿಂದಿನ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ನಿರ್ದೇಶನ ಮಾಡಿದ್ದ ಅರುಣ್ ಮಟ್ಟೇಶ್ವರನ್ ಅವರೇ ಇಳಯರಾಜ ಜೀವನವನ್ನು ಸಿನಿಮಾ ಮಾಡುತ್ತಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾನಲ್ಲಿ ಧನುಶ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಲಿಲ್ಲ. ಸಿನಿಮಾದ ಬಗ್ಗೆಯೂ ಸಾಧಾರಣ ಅಭಿಪ್ರಾಯವೇ ವಿಮರ್ಶಕರಿಂದ ವ್ಯಕ್ತವಾಯ್ತು. ಹಾಗಿದ್ದರೂ ಸಹ ಧನುಶ್, ಮತ್ತೊಮ್ಮೆ ಅರುಣ್ ಅವರನ್ನು ನಂಬಿ ಅವರಿಗೆ ಕಾಲ್ಶೀಟ್ ನೀಡಿದ್ದಾರೆ.
ಧನುಶ್ ಪ್ರಸ್ತುತ ‘ಕುಬೇರ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಶೇಖರ್ ಕಮ್ಮುಲ ನಿರ್ದೇಶಕ. ಹಿಂದಿಯ ‘ತೇರೆ ಇಷ್ಕ್ ಮೇ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಸೂಪರ್ ಹಿಟ್ ಸಿನಿಮಾ ‘ರಾಂಝನಾ’ ನೀಡಿದ್ದ ಜೋಡಿ ಈಗ ‘ತೇರೆ ಇಷ್ಕ್ ಮೇ’ ಸಿನಿಮಾಕ್ಕಾಗಿ ಒಂದಾಗುತ್ತಿದೆ. ಇದರ ಜೊತೆಗೆ ಇತ್ತೀಚೆಗಷ್ಟೆ ‘ರಾಯನ್’ ಹೆಸರಿನ ಸಿನಿಮಾವನ್ನು ಧನುಶ್ ಘೋಷಿಸಿದ್ದು, ‘ರಾಯನ್’ ಸಿನಿಮಾವನ್ನು ಸ್ವತಃ ಧನುಶ್ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ