ಸಂಗೀತ ಮಾಂತ್ರಿಕ ಇಳಯರಾಜ ಪುತ್ರಿ ನಿಧನ, ಆಘಾತದಲ್ಲಿ ತಮಿಳು ಚಿತ್ರರಂಗ
Bhavatarini: ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರಿ, ಜನಪ್ರಿಯ ಗಾಯಕಿ ಭವತಾರಿಣಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಭಾರತ ಸಿನಿಮಾ ರಂಗದಲ್ಲಿ ಸಂಗೀತ ಮಾಂತ್ರಿಕ ಎಂದೇ ಖ್ಯಾತವಾಗಿರುವ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ (Ilayaraja) ಅವರ ಪುತ್ರಿ, ಗಾಯಕಿ ಭವತಾರಿಣಿ ಹಠಾತ್ ನಿಧನ ಹೊಂದಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿನಿಂದ ಭವತಾರಿಣಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಭಾವತಾರಿಣಿ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭವತಾರಿಣಿ, ಕಳೆದ ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ಅವರು ಜನವರಿ 25ರಂದು ರಾತ್ರಿ ನಿಧನ ಹೊಂದಿದ್ದಾರೆ. ಅವರ ಮೃತದೇಹವನ್ನು ಚೆನ್ನೈನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದೆಂದು ಹೇಳಲಾಗುತ್ತಿದೆ.
ಭಾವತಾರಿಣಿ ಸ್ವತಃ ಅದ್ಭುತ ಗಾಯಕಿ ಆಗಿದ್ದರು. ಹಲವು ತಮಿಳು ಹಾಡುಗಳನ್ನು ಹಾಡಿರುವ ಭಾವತಾರಿಣಿ ‘ಭಾರತಿ’ ಸಿನಿಮಾದ ಹಾಡಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಗಳಿಸಿದ್ದರು. ಈ ಸಿನಿಮಾ ಸುಬ್ರಹ್ಮಣ್ಯ ಭಾರತಿ ಅವರ ಜೀವನದ ಮೇಲೆ ಆಧಾರಿತವಾಗಿತ್ತು. ಇದು ಮಾತ್ರವೇ ಅಲ್ಲದೆ ತಮ್ಮ ಸುಮಧುರ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿಗಳನ್ನು ಸಹ ಭಾವತಾರಿಣಿ ಗಳಿಸಿದ್ದರು.
ಇದನ್ನೂ ಓದಿ:ಕನ್ನಡದ ‘ಪ್ರೀತ್ಸು’ ಚಿತ್ರಕ್ಕೆ ಇಳಯರಾಜಾ ಸಂಗೀತ ನಿರ್ದೇಶನ; ಆಡಿಯೋ ರಿಲೀಸ್ ಮಾಡಿಕೊಂಡ ಖುಷಿಯಲ್ಲಿ ಚಿತ್ರತಂಡ
ಭಾವತಾರಿಣಿ ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ತಮಿಳುನಾಡು ಸಿಎಂ ಸ್ಟಾಲಿನ್, ‘ಭಾವತಾರಿಣಿ ನಿಧನದಿಂದಾಗಿ ಉಂಟಾಗಿರುವ ನಿರ್ವಾತವನ್ನು ಯಾರೂ ತುಂಬಲಾರರು ಅದು ಹಾಗೆಯೇ ಉಳಿಯಲಿದೆ’ ಎಂದಿದ್ದಾರೆ.
ನಟಿ ಸಿಮ್ರನ್ ಟ್ವೀಟ್ ಮಾಡಿ, ‘ಭಾವತಾರಿಣಿಯ ಹಠಾತ್ ನಿಧನದಿಂದ ತೀವ್ರ ಆಘಾತಕ್ಕೆ ಈಡಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ಇಳಯರಾಜಾ ಸರ್ ಮತ್ತು ಯುವನ್ ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪ ಮತ್ತು ಪ್ರಾರ್ಥನೆಗಳನ್ನು ತಿಳಿಸುತ್ತಿದ್ದೇನೆ. ಓಂ ಶಾಂತಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ