ಹೇ ರಾಮ್ ಹಾಡುಗಳು ಸೃಷ್ಟಿಯಾಗಿದ್ದು ಹೀಗೆ, ಕಮಲ್ ಹಾಸನ್ ಹೇಳಿದ ಇಳಯರಾಜ ಪ್ರತಿಭೆಯ ಕತೆ
Kamal Haasan: ಇಳಯರಾಜ ಎಷ್ಟು ಪ್ರತಿಭಾವಂತ ಸಂಗೀತ ನಿರ್ದೇಶಕ ಎಂಬುದಕ್ಕೆ ಘಟನೆಯನ್ನು ಉದಾಹರಣೆಯಾಗಿ ಕಮಲ್ ಹಾಸನ್ ಈ ಹಿಂದೆ ಹೇಳಿದ್ದರು. ವಿವರ ಇಲ್ಲಿದೆ...
ಇಳಯರಾಜ (Ilayaraja) ಭಾರತದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಕನ್ನಡ, ತಮಿಳು ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಕ್ಕೆ ಸಂಗೀತ ನೀಡಿರುವ ಇಳಯರಾಜ ನೂರಾರು ವರ್ಷಗಳ ಕಾಲ ಬದುಕುಳಿಯಬಲ್ಲ ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಅವರ ಪ್ರತಿಭೆಗೆ ಸಾಟಿಯಾಗಬಲ್ಲ ಮತ್ತೊಬ್ಬ ಸಂಗೀತ ನಿರ್ದೇಶಕ ಇಲ್ಲವೇನೋ, ಕಮಲ್ ಹಾಸನ್ (Kamal Haasan) ಹಂಚಿಕೊಂಡ ಘಟನೆಯ ಬಳಿಕವಂತೂ ಈ ಮಾತು ಸತ್ಯವೆಂದೇ ಎನಿಸುತ್ತದೆ.
ಕಮಲ್ ಹಾಸನ್ ನಿರ್ದೇಶನದ ಕಲ್ಟ್ ಕ್ಲಾಸಿಕ್ಗಳಲ್ಲಿ ಒಂದಾದ ಹೇ ರಾಮ್ ಸಿನಿಮಾ 2000 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಆ ಸಿನಿಮಾದ ಶೂಟಿಂಗ್ ಮುಗಿಸಿ ಇನ್ನೇನು ಬಿಡುಗಡೆಗೆ ಸಿದ್ಧವಾಗಬೇಕಾದ ಸಂದರ್ಭದಲ್ಲಿ ದೊಡ್ಡ ಸಮಸ್ಯೆಯೊಂದು ಕಮಲ್ಗೆ ಎದುರಾಯಿತು. ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದ ಹೇ ರಾಮ್ ಸಿನಿಮಾಕ್ಕೆ ಮೊದಲ ಬಾರಿಗೆ ಕಮಲ್ ಹಾಸನ್ ಇಳಯರಾಜ ಬಿಟ್ಟು ಬೇರೆ ಸಂಗೀತ ನಿರ್ದೇಶಕರಿಂದ ಸಂಗೀತ ಮಾಡಿಸಿದ್ದರು. ಅವರೇ ಖ್ಯಾತ ಎಲ್ ಸುಬ್ರಹ್ಮಣಿಯನ್.
ಎಲ್ ಸುಬ್ರಹ್ಮಣಿಯನ್ ಅವರು ಹೇ ರಾಮ್ ಸಿನಿಮಾದ ಎಲ್ಲ ಹಾಡುಗಳನ್ನು ಕಂಪೋಸ್ ಮಾಡಿದ್ದರು. ಅದರಂತೆ ಹಾಡುಗಳ ಚಿತ್ರೀಕರಣವನ್ನೂ ಕಮಲ್ ಹಾಸನ್ ಮಾಡಿದ್ದರು. ಆದರೆ ಕೊನೆಯ ಹಾಡು ಕಂಪೋಸ್ ಮಾಡುವಾಗ ಸುಬ್ರಹ್ಮಣಿಯನ್ ತಕರಾರು ತೆಗೆದರಂತೆ. ಕಮಲ್ ಹೇಳಿರುವ ಪ್ರಕಾರ ಒಂದು ಕೋಟಿ ಕೊಟ್ಟರೆ ಮಾತ್ರ ತಾವು ಹಾಡು ಮಾಡುವುದಾಗಿ ಸುಬ್ರಹ್ಮಣಿಯನ್ ಹೇಳಿದರಂತೆ. ಆಗ ಕಮಲ್, ಸುಬ್ರಹ್ಮಣಿಯಮ್ ಅವರಿಂದ ಮಾಡಿರುವ ಹಾಡುಗಳ ಬದಲಾಗಿ ಬೇರೆ ಹಾಡುಗಳನ್ನು ಬಳಸಲು ನಿರ್ಧರಿಸಿ ಇಳಯರಾಜ ಬಳಿ ಹೋಗಿದ್ದಾರೆ.
ಇದನ್ನೂ ಓದಿ:Kamal Haasan: ಪ್ರಭಾಸ್ ಚಿತ್ರಕ್ಕೆ ವಿಲನ್ ಆದ ಕಮಲ್ ಹಾಸನ್? ಇದು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ
ಈಗಾಗಲೇ ಹಾಡುಗಳ ಚಿತ್ರೀಕರಣ ಮಾಡಿಬಿಟ್ಟಿದ್ದೇನೆ, ಆದರೆ ಎಲ್ಲವನ್ನೂ ನಾನು ಮತ್ತೆ ಚಿತ್ರೀಕರಣ ಮಾಡಿಕೊಳ್ಳುತ್ತೇನೆ ಆದರೆ ನನಗೆ ಹಾಡುಗಳನ್ನು ಮಾಡಿಕೊಡಿ ಎಂದರಂತೆ. ಆದರೆ ಇಳಯರಾಜ ಅದಕ್ಕೆ ಒಪ್ಪಿಲ್ಲ. ನೀನು ಈಗ ಚಿತ್ರೀಕರಣ ಮಾಡಿದ್ದೀಯಲ್ಲ ಅದೇ ದೃಶ್ಯಗಳಿಗೆ ನಾನು ಹಿನ್ನೆಲೆ ಸಂಗೀತ ಹಾಗೂ ಹಾಡುಗಳನ್ನು ಮಾಡಿಕೊಡುತ್ತೇನೆ ಎಂದು ಹೇಳಿ ಈಗಾಗಲೇ ಚಿತ್ರೀಕರಣವಾಗಿರುವ ಹಾಡುಗಳಿಗೆ ತಕ್ಕಂತೆ ಹೊಸದಾಗಿ ರಾಗಗಳನ್ನು ಹಾಕಿ ಹಾಡು ಮಾಡಿಕೊಟ್ಟಿದ್ದಾರೆ. ಈಗಾಗಲೇ ಬರೆದಿರುವ ಸಾಹಿತ್ಯವನ್ನೂ ಸಹ ಇಳಯರಾಜ ಬದಲಾಯಿಸಲಿಲ್ಲವಂತೆ.
ಸಾಮಾನ್ಯವಾಗಿ ಮೊದಲು ರಾಗ ಮಾಡಿ ಅದಕ್ಕೆ ಸಾಹಿತ್ಯ ಬರೆದು ಆ ನಂತರ ಹಾಡು ಚಿತ್ರೀಕರಣ ಮಾಡುವುದು ವಾಡಿಕೆ. ಆದರೆ ಇಳಯರಾಜ ಈಗಾಗಲೇ ಬೇರೆ ಹಾಡೊಂದಕ್ಕೆ ಬರೆದ ಸಾಹಿತ್ಯ, ಚಿತ್ರೀಕರಣವಾದ ದೃಶ್ಯಗಳಿಗೆ ಸಂಪೂರ್ಣ ಭಿನ್ನವಾದ ಸಂಗೀತ ನೀಡಿದ್ದರು. ವಿಶೇಷವೆಂದರೆ ಹೇ ರಾಮ್ಗೆ ಇಳಯರಾಜ ಮಾಡಿಕೊಟ್ಟ ಎಲ್ಲ ಹಾಡುಗಳು ಸೂಪರ್-ಡೂಪರ್ ಹಿಟ್ ಆದವು. ಹೇ ರಾಮ್ ಸಿನಿಮಾಕ್ಕೆ ಹಲವು ಪ್ರಶಸ್ತಿಗಳು ಬಂದವು. ಇಳಯರಾಜ ಅವರಿಗೂ ಪ್ರಶಸ್ತಿಗಳು ಬಂದವು.
ಹೇ ರಾಮ್ ಒಂದು ಅದ್ಭುತವಾದ ಸಿನಿಮಾ ಮಹಾತ್ಮಾ ಗಾಂಧಿಯ ಕೊಲೆ ಹಾಗೂ ಸ್ವಾತಂತ್ರ್ಯದ ಸಂದರ್ಭದಲ್ಲಿ ಉಂಟಾಗಿದ್ದ ಹಿಂದೂ-ಮುಸ್ಲಿಂ ಗಲಭೆಗಳ ಚಿತ್ರಣ ಸಿನಿಮಾದಲ್ಲಿತ್ತು. ಸಿನಿಮಾವನ್ನು ಕೆಲವು ವಿವಾದಗಳು ಸಹ ಸುತ್ತಿಕೊಂಡಿದ್ದವು. ಸಿನಿಮಾದ ವಿರುದ್ಧ ಪ್ರತಿಭಟನೆಗಳು ಸಹ ನಡೆದಿದ್ದವು ಹಾಗಿದ್ದರೂ ಸಹ ಸಿನಿಮಾ ದೊಡ್ಡ ಯಶಸ್ಸನ್ನು ಗಳಿಸುವಲ್ಲಿ ಸಫಲವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ