
ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಭಾಷೆ, ಗಡಿಯ ಹಂಗಿಲ್ಲದೇ ದೇಶದಾದ್ಯಂತ ಬಹುತೇಕ ಬಿಡುಗಡೆ ಆದ ಎಲ್ಲ ರಾಜ್ಯಗಳಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಟ್ ಎನಿಸಿಕೊಂಡಿದೆ. 2022ರ ‘ಕಾಂತಾರ’ಕ್ಕೆ ಹೋಲಿಸಿದರೆ ಭಾರಿ ಬಜೆಟ್, ದೊಡ್ಡ ತಂಡದ ನೆರವಿನೊಂದಿಗೆ ಹಲವು ಜನಪ್ರಿಯ ನಟರನ್ನು ಒಳಗಾಗಿಸಿಕೊಂಡು ಸಿನಿಮಾವನ್ನು ನಿರ್ದೇಶಕ ರಿಷಬ್ ಶೆಟ್ಟಿ ಕಟ್ಟಿದ್ದರು. ಸಿನಿಮಾ ನೋಡಿದ ಬಹುತೇಕರು ಉಘೆ ಎಂದಿದ್ದಾರೆ. ಆದರೆ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ ಕಲಾವಿದರೊಬ್ಬರಿಗೆ ‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ ಬಗ್ಗೆ ಸಣ್ಣ ಅಸಮಾಧಾನ ಇದೆಯೇ ಎಂಬ ಅನುಮಾನ ಇದೀಗ ಮೂಡಿದೆ.
ಸಿನಿಮಾಲ್ಲಿ ರಿಷಬ್ ಶೆಟ್ಟಿ ಪಾತ್ರ ಬಹಳ ಪ್ರಧಾನವಾದುದಾಗಿತ್ತು. ಸಿನಿಮಾದ ವಿಲನ್ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅದ್ಭುತವಾಗಿ ನಟಿಸಿದ್ದರು. ಆದರೆ ಅವರು ವಿಲನ್ ಆಗಿ ಬದಲಾಗುವುದು ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಮಾತ್ರ. ಆದರೆ ಸಿನಿಮಾದ ಆರಂಭದಿಂದಲೂ ನಾಯಕನಿಗೆ ಎದುರಾಗಿ ನಿಂತಿರುವ ಪಾತ್ರವೆಂದರೆ ಅದು ಕುಲಶೇಖರನದ್ದು. ಬೇಜವಾಬ್ದಾರಿ, ಹಾಸ್ಯ ಪ್ರವೃತ್ತಿಯ, ಮುಂದಾಲೋಚನೆ ಇಲ್ಲದ, ದ್ವೇಷ ತುಂಬಿಕೊಂಡಿರುವ, ಹಿರಿಯರು, ಸಂಸ್ಕೃತಿಯ ಬಗ್ಗೆ ಗೌರವ ಇಲ್ಲದ ರಾಜ ಪುತ್ರನ ಪಾತ್ರ ಕುಲಶೇಖರನದ್ದು, ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಕನ್ನಡದವರೇ ಆದ ಗುಲ್ಷನ್ ದೇವಯ್ಯ.
ಕನ್ನಡಿಗರೇ ಆದರೂ ಬಾಲಿವುಡ್ನಲ್ಲಿ ಹೆಚ್ಚು ಜನಪ್ರಿಯರಾಗಿರುವ ಗುಲ್ಷನ್ ದೇವಯ್ಯ ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಅಸಮಾಧಾನ ಇದೇಯೇ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣವಾಗಿರುವುದು ಅವರು ಇತ್ತೀಚೆಗೆ ನೀಡಿರುವ ಒಂದು ಸಂದರ್ಶನ. ಆ ಸಂದರ್ಶನದಲ್ಲಿ ಗುಲ್ಷನ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದೆಯಾ ಮನಸ್ತಾಪ?
ಅರ್ಧ ಸಿನಿಮಾ ಆಗುತ್ತಲೇ ನಿಮ್ಮ ಕುಲಶೇಖರ ಪಾತ್ರ ಸತ್ತು ಹೋಗುತ್ತದೆ ಇದು ನಿಮಗೆ ನಟನಾಗಿ ಬೇಸರ ಮೂಡಿಸಿತೆ? ಎಂಬ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿರುವ ಗುಲ್ಷನ್ ದೇವಯ್ಯ, ‘ನನ್ನ ಭಾಗದ ಶೂಟಿಂಗ್ ಪ್ರಾರಂಭವಾದ ಬಹಳ ದಿನಗಳ ವರೆಗೆ ನನಗೆ ಕ್ಲೈಮ್ಯಾಕ್ಸ್ ಏನೆಂಬುದು ಗೊತ್ತೇ ಇರಲಿಲ್ಲ. ಆದರೆ ನನ್ನ ಪಾತ್ರ ಕ್ಲೈಮ್ಯಾಕ್ಸ್ಗಿಂತಲೂ ಬೇಗನೆ ಸಾಯುತ್ತದೆ ಎಂದು ಗೊತ್ತಾದಾಗ ನನಗಿದ್ದ ಊಹೆ ಏನೆಂದರೆ ನನ್ನ ಪಾತ್ರವನ್ನೂ ದೆವ್ವದ ರೂಪದಲ್ಲಿ ಮತ್ತೆ ತರುತ್ತಾರೇನೋ ಎಂದುಕೊಂಡೆ. ಆದರೆ ಹಾಗಾಗಲಿಲ್ಲ, ಒಮ್ಮೆ ನಾನು ರಿಷಬ್ ಅನ್ನು ಕ್ಲೈಮ್ಯಾಕ್ಸ್ ಬಗ್ಗೆ ಕೇಳಿದೆ. ರಿಷಬ್ ಸಹ ಪೂರ್ಣ ಕತೆ ಹೇಳಿದರು. ಆಗ ನನಗೆ ಗೊತ್ತಾಯ್ತು, ಓಕೆ ಹಾಗಿದ್ದರೆ ನಾನು ಪೂರ್ಣ ಸತ್ತಂತೆ ಎಂದುಕೊಂಡೆ’ ಎಂದಿದ್ದಾರೆ.
ಆದರೆ ಗುಲ್ಷನ್ ದೇವಯ್ಯ ಅವರು ಇದನ್ನೆಲ್ಲ ಗಂಭೀರವಾಗಿ ಹೇಳಿಲ್ಲ, ಬದಲಿಗೆ ತಾವೂ ಸಹ ಕ್ಲೈಮ್ಯಾಕ್ಸ್ ನಲ್ಲಿ ಇದ್ದಿದ್ದರೆ ಒಳ್ಳೆಯದಿತ್ತು ಎಂಬ ಆಸೆಯಲ್ಲಿ ಹೇಳಿದ್ದಾರಷ್ಟೆ. ಒಬ್ಬ ನಟನಿಗೆ ಇರಬಹುದಾದ ಸಹಜ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗುಲ್ಷನ್ ದೇವಯ್ಯ ಅವರು ತಮ್ಮ ಹಲವು ಸಂದರ್ಶನಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಕನ್ನಡ ಚಿತ್ರರಂಗದಿಂದ ಅವಕಾಶ ಸಿಕ್ಕರೆ ಬೆಂಗಳೂರಿನಲ್ಲೇ ನೆಲೆಸುವೆ ಎಂದು ಸಹ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ